ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಜನವರಿ ೭, ೦೮ ಮತ್ತು ೦೯ರಂದು ನಗರದ ಡಿ.ವಿ.ಎಸ್. ಕಾಲೇಜಿನ ೨೭ ಸಮಾನಾಂತರ ವೇದಿಕೆಗಳಲ್ಲಿ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಜನವರಿ ೦೭ರಂದು ಬೆಳಿಗ್ಗೆ ೧೧ಗಂಟೆಗೆ ನಗರದ ಕುವೆಂಪು ಮಂದಿರದಲ್ಲಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.
ಈ ಸಂಬಂಧ ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ, ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ, ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿರಲಿದೆ ಎಂದರು.
ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲಾದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವದಲ್ಲಿ ಸ್ಥಾನ ಪಡೆದ ೧೩೭೫ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ರೀತಿಯ ೨೩ ವೈಯಕ್ತಿಕ ವಿಭಾಗಗಳಲ್ಲಿ ಹಾಗೂ ೦೩ ಸಾಮೂಹಿಕ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವೈಯಕ್ತಿಕ ವಿಭಾಗದಲ್ಲಿ ವಿಜೇತರಾದವರಿಗೆ ಪ್ರತಿ ಸ್ಪರ್ಧಿಗೆ ಪ್ರಥಮ ಸ್ಥಾನ ರೂ.೬,೦೦೦/, ದ್ವಿತೀಯ ಸ್ಥಾನ ರೂ.೪,೦೦೦/- ಹಾಗೂ ತೃತೀಯ ಸ್ಥಾನ ರೂ.೨,೦೦೦/- ಹಾಗೂ ೫ಜನಕ್ಕೆ ತಲಾ ರೂ.೧,೦೦೦/-ಗಳ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಸಾಮೂಹಿಕ ವಿಭಾಗದಲ್ಲಿ ಪ್ರತಿಸ್ಪರ್ಧಿಗೆ ಪ್ರಥಮ ಸ್ಥಾನ ರೂ.೩,೦೦೦/-, ದ್ವಿತೀಯ ಸ್ಥಾನ-ರೂ.೨,೦೦೦/- ಹಾಗೂ ತೃತೀಯ ಸ್ಥಾನ ರೂ.೧,೦೦೦/- ಅಲ್ಲದೇ ೨ತಂಡಕ್ಕೆ ಪ್ರತಿ ಸ್ಪರ್ಧಿಗೆ ರೂ.೫೦೦/-ಗಳ ಪ್ರೋತ್ಸಾಹಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದಲ್ಲದೇ ಭಾಗವಹಿಸಿದ ಪ್ರತಿ ಸ್ಪರ್ಧಿಗೆ ಪ್ರಮಾಣಪತ್ರ ನೀಡಲಾಗುವುದು ಎಂದರು.
ಈ ಸ್ಪರ್ಧೆಗಳು ಕರಾರುವಾಕ್ಕಾಗಿ ಹಾಗೂ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಲು ಮೂರು ಜನ ತಜ್ಞರನ್ನೊಳಗೊಂಡ ತೀರ್ಪುಗಾರರನ್ನು ಪ್ರತಿಸ್ಪರ್ಧೆಗೆ ನಿಯೋಜಿಸಲಾಗುವುದು. ಅವರಲ್ಲಿ ೨ ಹೊರಜಿಲ್ಲೆಯ ಹಾಗೂ ಓರ್ವರು ಸ್ಥಳೀಯ ತೀರ್ಪುಗಾರರು ಇರಲಿದ್ದಾರೆ ಎಂದ ಅವರು, ಅದರ ಯಶಸ್ಸಿಗಾಗಿ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ವಿವಿಧ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಅದರ ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾಳುಗಳಿಗೆ, ತೀರ್ಪುಗಾರರಿಗೆ ಮತ್ತು ಮೇಲ್ವಿಚಾರಕರಿಗೆ ಮೂಲಭೂತ ಸೌಕರ್ಯಗಳನ್ನು ಹೊಂದಿದ ೨೧ಸಮುದಾಯ ಭವನ ಹಾಗೂ ಶಾಲೆಗಳನ್ನು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಿಗಧಿಗೊಳಿಸಲಾಗಿದೆ ಎಂದ ಅವರು ವಿದ್ಯಾರ್ಥಿಗಳು ತಂಗುವ ಸ್ಥಳದಿಂದ ಸ್ಪರ್ಧೆ ನಡೆಯುವ ಸ್ಥಳಕ್ಕೆ ಆಗಮಿಸಲು ಹಾಗೂ ತೆರಳಲು ೨೭ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೇ ಪ್ರತಿದಿನ ಸಂಜೆ ಆಗಮಿಸುವ ಮಕ್ಕಳು, ಮೇಲ್ವಿಚಾರಕರು ಹಾಗೂ ಸಾರ್ವಜನಿಕರಿಗಾಗಿ ಆಹ್ವಾನಿತ ಕಲಾವಿದರುಗಳಿಂದ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ೦೭ರಂದು ಸಂಜೆ ೬.೩೦ಕ್ಕೆ ಮ್ಯಾಜಿಕ್ ವಿಸ್ಮಯ ಕಾರ್ಯಕ್ರಮ ನಡೆಯಲಿದೆ ಎಂದರು.
ನೋಂದಣಿಗಾಗಿ ೮ಕೌಂಟರ್ಗಳನ್ನು ತೆರೆಯಲಾಗುವುದು. ಅಗತ್ಯ ಮಾಹಿತಿ ಒದಗಿಸಲು ೫ ಜಿಲ್ಲೆಗಳಿಗೆ ಓರ್ವರಂತೆ ಸಂಪರ್ಕಾಧಿಕಾರಿಗಳನ್ನು ನಿಯೋಜಿಸಲಾಗಿದೆ.
ಮಲೆನಾಡಿನ ಆತಿಥ್ಯ : ಆಗಮಿಸಿದ ಕ್ರೀಡಾಪಟುಗಳಿಗೆ ಉತ್ತಮ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಸುಮಾರು ೧೩ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಜನವರಿ ೦೭ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಅವರು ಕಾರ್ಯಕ್ರಮವನ್ನು ರಾಜ್ಯ ರೇಷ್ಮೇ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಕೆ.ಸಿ.ನಾರಾಯಣಗೌಡ ಅವರು ಉದ್ಘಾಟಿಸುವರು. ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ, ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಉಪಸ್ಥಿತರಿರುವರು. ಶಾಸಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು.
ಗಳ ಚುನಾಯಿತ ಪ್ರತಿನಿಧಿಗಳು, ನಿಗಮ-ಮಂಡಳಿಗಳ ಅಧ್ಯಕ್ಷರು-ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಶಿಕ್ಷಣ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿ-ಸಿಬ್ಬಂಧಿಗಳು ವಿಶೇಷ ಆಹ್ವಾನಿತರಾಗಿ ಆಗಮಿಸಲಿರುವರು. ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ಕುಮಾರ್ ಜಿ.ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಮಹಾನಗರಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುಜನ್ಕುಮಾರ್ ಎನ್.ಜಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಪ್ರಕಾಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಲೋಕೇಶ್ವರಪ್ಪ, ರಾಮಪ್ಪಗೌಡ, ಸತೀಶ್ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.