ದೇಶೀಯ ವಿದ್ಯಾಶಾಲಾ ಸಮಿತಿ(ಡಿವಿಎಸ್)ಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭವು ಜ.೪ರಿಂದ ೬ರ ವರೆಗೆ ಮೂರು ದಿನಗಳ ಕಾಲ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಹೇಳಿದರು.

ಅವರು ಇಂದು ಡಿವಿಎಸ್ ಕಾಲೇಜಿನ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೪೩ರ ಜ.೧ರಂದು ನಮ್ಮ ಸಂಸ್ಥೆ ಆರಂಭವಾಯಿತು. ಶೈಕ್ಷಣಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಆರಂಭಿಸಲಾಗಿತ್ತು. ಡಿವಿಎಸ್ ಸಮಿತಿಯ ಆರಂಭಿಕ ಶಾಲಾ ಕಟ್ಟಡವನ್ನು ೧೯೫೮ರ ಮಾರ್ಚ್ ತಿಂಗಳಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರಿಂದ ಉದ್ಘಾಟನೆಯಾಗಿತ್ತು. ಇದು ಹೆಮ್ಮೆಯ ವಿಷಯವಾಗಿದೆ ಎಂದರು.

ನಂತರ ಡಿವಿಎಸ್ ಸಂಸ್ಥೆ ಬೆಳೆಯುತ್ತಾ ಹೋದ ಹಾಗೆ ೧೯೭೨ರಲ್ಲಿ ಪದವಿಪೂರ್ವ(ಸ್ವತಂತ್ರ) ಕಾಲೇಜನ್ನು ಸ್ಥಾಪನೆ ಮಾಡಲಾಯಿತು. ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಈಗ ೧೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜಿಗೀಗ ೫೦ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.

ಜ.೪ರಂದು ಬೆಳಿಗ್ಗೆ ೧೧ಗಂಟೆಗೆ ಮೈಸೂರು ಮಹಾ ಸಂಸ್ಥಾನದ ಶ್ರೀ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಧ್ಯಾಹ್ನ ೨ ಗಂಟೆಗೆ ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಭಾಗವಹಿಸುವರು. ಜ.೫ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಜ.೬ರಂದು ಸಂಜೆ

೪.೩೦ಕ್ಕೆ ಅಮೃತಮಹೋತ್ಸವದ ಸಮಾರೋಪ ಸಮಾರಂಭವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಉದ್ಘಾಟಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಭಾಗವಹಿಸುವರು ಎಂದರು.

ಪ್ರತಿದಿನ ಸಂಜೆ ಡಿ.ವಿಎಸ್ ಸಂಸ್ಥೆಯ ವಿವಿಧ ಕಾಲೇಜು, ಹೈಸ್ಕೂಲ್. ಪದವಿಪೂರ್ವ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜ.೬ರ ಬೆಳಗ್ಗೆ ೧೧ ಗಂಟೆಗೆ ಡಿವಿಎಸ್ ಪಾಲಿಟೆಕ್ನಿಕ್, ೨ ಗಂಟೆಗೆ ಡಿವಿಎಸ್ ಸಂಜೆ ಕಾಲೇಜಿನ ಹಾಗೂ ಸಂಜೆ ೬ ಗಂಟೆಗೆ ವಿಜ್ಞಾನ ಮತ್ತು ಕಲಾ, ವಾಣಿಜ್ಯ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ನಡೆಯಲಿದೆ. ರಾತ್ರಿ ೯ಗಂಟೆಗೆ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ರಾಜ್ಕುಮಾರ್ ಅವರಿಗೆ ಪಾಲಿಟೆಕ್ನಿಕ್ ಕಾಲೇಜು ರಂಗಮಂದಿರದಲ್ಲಿ ಗೌರವ ಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಡಿವಿಎಸ್ ಸಂಸ್ಥೆಯು ಭವ್ಯ ಆದರ್ಶಗಳನ್ನು ಒಳಗೊಂಡಿದೆ. ನಿಸ್ವಾರ್ಥ ಸೇವೆ ಹೊಂದಿದೆ. ಶೈಕ್ಷಣಿಕ ಕ್ರಾಂತಿಯನ್ನೇ ನೀಡಿದೆ. ಇಲ್ಲಿ ಓದಿದ ಹಲವರು ರಾಜಕೀಯ, ಸಾಂಸ್ಕೃತಿಕ ಹಾಗೂ ಉನ್ನತ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ಕಡಿದಾಳ್ ಮಂಜಪ್ಪ, ಮಾಜಿ ಶಿಕ್ಷಣ ಸಚಿವ ಕೆ.ಆರ್. ಬದರೀನಾರಾಯಣ ಈ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಪ್ಯಾರಾ ಓಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸುಹಾಸ್ ಕೂಡ ಇದೇ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಹೆಮ್ಮೆಯ ವಿಚಾರ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಎಸ್.ರುದ್ರಪ್ಪ ಕೊಳಲೆ ಮಾತನಾಡಿ, ಸಂಸ್ಥೆಯು ಒಂದು ಹಿರಿಯ ಪ್ರಾಥಮಿಕ ಶಾಲೆ, ಎರಡು ಪದವಿ ಪೂರ್ವ ಕಾಲೇಜು, ಎರಡು ಪ್ರೌಢಶಾಲೆ, ಎರಡು ಪದವಿ ಕಾಲೇಜು, ಒಂದು ಪಾಲಿಟೆಕ್ನಿಕ್ ಕಾಲೇಜು ಹಾಗೂ ಒಂದು ರಂಗಮಂದಿರವನ್ನು ಹೊಂದಿದೆ. ರಾಜ್ಯದಲ್ಲಿಯೆ ಉತ್ತಮ ಫಲಿತಾಂಶಕ್ಕೆ ಹೆಸರಾಗಿದೆ. ಸುಮಾರು ೪ಸಾವಿರದ ೮ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ. ೨೦೧೮ರಲ್ಲಿಯೇ ೭೫ನೆ ವರ್ಷದ ಅಮೃತ ಮಹೋತ್ಸವವನ್ನು ಸಂಸ್ಥೆ ಆಚರಿಸಿಕೊಂಡಿತ್ತು. ಈಗ ಅಮೃತ ಮಹೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳಲಿದೆ. ಈ ಎಲ್ಲಾ ಮೂರು ದಿನದ ಕಾರ್ಯಕ್ರಮಗಳಿಗೆ ಡಿವಿಎಸ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್. ರಾಜಶೇಖರ್, ಸಹಕಾರ್ಯದರ್ಶಿ ಡಾ. ಎ. ಸತೀಶ್ಕುಮಾರ್ ಶೆಟ್ಟಿ, ಖಜಾಂಚಿ ಬಿ. ಗೋಪಿನಾಥ್, ನಿರ್ದೇಶಕರುಗಳಾದ ಕೆ. ಬಸವಪ್ಪ ಗೌಡ, ಎಂ. ರಾಜು, ಡಾ. ಹೆಚ್. ಮಂಜುನಾಥ್, ಶಿಕ್ಷಕ ಪ್ರತಿನಿಧಿಗಳಾದ ಹೆಚ್.ಸಿ. ಉಮೇಶ್, ಡಾ.ಎಂ. ವೆಂಕಟೇಶ್ ಉಪಸ್ಥಿತರಿದ್ದರು