ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೊಳಿಸುವುದೇ ಬಿಜೆಪಿಯ ಮುಖ್ಯ ಅಸ್ತ್ರವಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆಯುವ ಮಹದಾಯಿ ಸಮಾವೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರು ಮಹದಾಯಿ ಯೋಜನೆಯನ್ನು ಯಾವಾಗಲೂ ಜಾರಿಗೆ ತರಲು ಯತ್ನಿಸಲಿಲ್ಲ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿಲ್ಲ.

ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಹೆಚ್.ಕೆ. ಪಾಟೀಲ್ರವರು ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಮ್ಮೊಂದಿಗಿದೆ ಎಂದು ಹೇಳಿದ್ದರು. ಆದರೆ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಅದರ ವಿರುದ್ಧ ಮಾತನಾಡಿದರು. ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡಲ್ಲ ಎಂದಿದ್ದರು. ಕಾಂಗ್ರೆಸ್ಸಿನ ಈ ದ್ವಂದ್ವ ನೀತಿಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು ಎಂದರು.

ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು, ೧೦೦ ಕೋಟಿ ಹಣ ನೀಡಿದ್ದರು. ಅಂದಿನಿಂದಲೂ ಬಿಜೆಪಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮತ್ತು ಜಾರಿ ವಿಚಾರದಲ್ಲಿ ಅಗ್ರ ಸ್ಥಾನದಲ್ಲಿ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮಹಾರಾಷ್ಟ್ರ ಕರ್ನಾಕಟ, ಗೋವಾ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಲು ಹೇಳಿದ್ದೆವು. ಆಗಲೂ ಕಾಂಗ್ರೆಸ್ ಆ ಕೆಲಸ ಮಾಡಿಲ್ಲ. ಈ ವಿಚಾರದಲ್ಲಿಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದರು.

ಸಿದ್ದರಾಮಯ್ಯ ಅಲೆಮಾರಿಯಂತೆ ಕ್ಷೇತ್ರಗಳನ್ನು ಹುಡುಕುತ್ತಾ ಹೋಗುವುದು ನಾಚಿಕೆಗೇಡಿನ ವಿಷಯವಾಗಿದೆ. ಇವತ್ತಿಗೂ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿಲ್ಲ. ಕೊನೆಗೊಮ್ಮೆ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ದಿನ ಬರಬಹುದು. ಅವರ ವಿರುದ್ಧ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ ಎಂದರು.
ನಂದಿನಿ ಸಂಸ್ಥೆಯನ್ನು ಅಮುಲ್ ಸಂಸ್ಥೆಯ ಜೊತೆ ಸೇರ್ಪಡೆ ಮಾಡುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಇದನ್ನೇ ಹೇಳಿದ್ದಾರೆ. ಟೀಕಿಸುವುದಕ್ಕಾಗಿ ಏನೇನೋ ಹೇಳಬಾರದು ಎಂದ ಅವರು, ಡಿ.ಕೆ. ಶಿವಕುಮಾರ್ಗೆ ಏನು ಮಾತನಾಡಬೇಕೆಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲ ಎಂದು ಹೇಳುತ್ತಾರೆ. ಇವರ ನಿರ್ಣಯವೇ ಮುಖ್ಯ ಅಲ್ಲ ಎಂದರು.
ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅವರು ಸಿದ್ಧಾಂತದ ಗಣಿ, ಶಿಸ್ತಿನ ಸಿಪಾಯಿ. ಅವರ ಮಾತನ್ನು ಕೇಳುತ್ತಿದ್ದರೆ ಶ್ರೀಕೃಷ್ಣನ ಮಾತನ್ನು ಕೇಳಿದಂತಾಗುತ್ತದೆ. ಅವರ ಆರೋಗ್ಯ ಸುಧಾರಿಸಲಿ ಎಂದರು.