ಬೆಳಗಾವಿ,ಡಿ.29-
ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಹೇಳಿಕೆಯನ್ನು ವಿರೋಧಿಸಿ ಆಡಳಿತ ಪಕ್ಷಗಳ ಸದಸ್ಯರು ಸೇರಿದಂತೆ ಹಲವರು ಸಭಾತ್ಯಾಗ ನಡೆಸಿದ ಪ್ರಸಂಗ ವಿಧಾನ ಪರಿಷತ್‍ನಲ್ಲಿ ನಡೆಯಿತು. ಪ್ರಶ್ನೋತ್ತರದ ಅವಧಿಯಲ್ಲಿ ತಳವಾರ್ ಸಾಬಣ್ಣ, 2006ರ ನಂತರ ನೇಮಕವಾದ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (ಎನ್ ಪಿಎಸ್) ಅನ್ನು ಹಳೆ ಪಿಂಚಣಿ (ಓಪಿಎಸ್) ಗೆ ಪರಿವರ್ತನೆ ಮಾಡುವ ಕುರಿತು ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿದರು.
ಇದಕ್ಕೆ ಮುಖ್ಯಮಂತ್ರಿಯವರ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, 2004ರಲ್ಲಿ ಕೇಂದ್ರ ಸರ್ಕಾರ ಪಿಂಚಣಿ ಕೊಡೋಕೆ ಆಗಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಂತರ 2006ರಲ್ಲಿ ರಾಜ್ಯ ಸರ್ಕಾರಗಳು ಅದನ್ನು ಜಾರಿ ಮಾಡಿವೆ ಎಂದರು.
ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಹಂತದಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಹೊಸ ಪಿಂಚಣಿ ಯೋಜನೆ ಅಳವಡಿಕೆಯಾಗಿರುವ ಕುರಿತು ಮಾಹಿತಿ ನೀಡಲಾಗಿದೆ. ಹಳೆ ಪಿಂಚಣಿ ವ್ಯವಸ್ಥೆ ಕೇಳಬಾರದು ಎಂಬ ಷರತ್ತನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದನ್ನು ಒಪ್ಪಿಕೊಂಡೇ ಸೇವೆಗೆ ಸೇರಿರುತ್ತಾರೆ. ಅದನ್ನು ಮರೆತು ಈಗ ಹಳೆ ಪಿಂಚಣಿ ಕೇಳುವುದು ಕಾನೂನು ಸಚಿವರಾಗಿ ನನಗೆ ಸರಿ ಅನಿಸುತ್ತಿಲ್ಲ. ಸರ್ಕಾರಿ ನೌಕರರಿಗೆ ಅದು ಸೌಜನ್ಯವೂ ಅಲ್ಲ ಎಂದರು.
ರಾಜ್ಯ ಸರ್ಕಾರಿ ನೌಕರಿಗೆ ವಾರ್ಷಿಕ 70 ರಿಂದ 80 ಸಾವಿರ ಕೋಟಿ ರೂಪಾಯಿ ನೀಡಲಾಗುತ್ತಿದೆ. ಪಿಂಚಣಿಗಾಗಿಯೇ ಪ್ರತಿ ತಿಂಗಳು 24 ಕೋಟಿಯಷ್ಟು ಖರ್ಚಾಗುತ್ತಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಹಳೆ ಪಿಂಚಣಿ ನೀಡುವುದು ಕಷ್ಟ.
ಹೊಸ ಪಿಂಚಣಿ ಜಾರಿಗೊಳಿಸುವ ಆಲೋಚನೆ ನಮ್ಮ ಸರ್ಕಾರದ ಮುಂದೆ ಇಲ್ಲ. ಆದರೂ ವಿಧಾನಸಭೆಯಲ್ಲಿ ಚರ್ಚೆ ನಡೆದ ವೇಳೆಗೆ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಓಪಿಎಸ್ ತರಬಹುದಾ ಎಂದು ನೋಡುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ, ಹಣಕಾಸು ಲಭ್ಯತೆ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಅಥವಾ ಸಭೆ ನಡೆಸಲಾಗುವುದು ಎಂದರು.
ಇದಕ್ಕೆ ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಬೆಂಗಳೂರಿನಲ್ಲಿ ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರು ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕಳೆದ ವಾರ ಇದೇ ಸುವರ್ಣಸೌಧದಲ್ಲಿ ನಡೆದ ಸಭೆಯಲ್ಲಿ ಹೊಸ ಸಮಿತಿ ರಚನೆ ಮಾಡಿ ಪರಿಶೀಲಿಸುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಈಗ ಸಚಿವರು ಆಗಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇದು ಸದನದ ಹೊರಗೆ ಬೇರೆ ಸಂದೇಶ ಹೋಗುತ್ತದೆ. ಪ್ರಚೋದನೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಇದು ಜೆ.ಸಿ.ಮಾಧುಸ್ವಾಮಿ ಮತ್ತು ಪ್ರಕಾಶ್ ಹುಕ್ಕೇರಿ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಪ್ರಚೋದನೆ ನೀಡುತ್ತಿರುವವರು ನೀವು. ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದೀರಾ. ನಿಮ್ಮದೇ ಸರ್ಕಾರ ಎನ್‍ಪಿಎಸ್ ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು ಎಂದು ಮಾಧುಸ್ವಾಮಿ ತಿರುಗೇಟು ನೀಡಿದರು.
ಸರ್ಕಾರ ಯಾವುದಾದರೂ ಏನು ನಿಮ್ಮ ಕಾಲದಲ್ಲಿ ಬದಲಾವಣೆ ಮಾಡಿ. ಆಗುವುದಿಲ್ಲ ಎಂದಾದರೆ ಕಳೆದ ಸಭೆಯಲ್ಲಿ ಸಮಿತಿ ರಚನೆ ಮಾಡಲು ಒಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ ಪ್ರಕಾಶ್ ಹುಕ್ಕೇರಿ, ಹಳೆ ಪಿಂಚಣಿ ಜಾರಿಯಿಂದ ಸುಮಾರು 52 ಕೋಟಿ ರೂಪಾಯಿ ಮಾತ್ರ ಹೆಚ್ಚುವರಿ ಹೊರೆಯಾಗುತ್ತದೆ. ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಸಮಿತಿ ರಚನೆಯಾಗಿದ್ದ ಸಮಿತಿ ನಿಷ್ಕ್ರೀಯವಾಗಿದೆ ಎಂದು ಆಕ್ಷೇಪಿಸಿದರು.
ಆಡಳಿತ ಪಕ್ಷದ ಸದಸ್ಯ ಎಸ್.ವಿ.ಸಂಕನೂರು, ಸರ್ಕಾರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದವರು ಹೊಸ ಪಿಂಚಣಿ ವ್ಯವಸ್ಥೆಯಿಂದ ಅತ್ಯಲ್ಪ ಪ್ರಮಾಣದ ಪರಿಹಾರ ಪಡೆಯುತ್ತಿದ್ದಾರೆ. ಅದರಲ್ಲಿ ನಿವೃತ್ತರು ಜೀವನ ನಡೆಸುವುದು ಕಷ್ಟವಾಗಲಿದೆ. ಸರ್ಕಾರ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ನೇಮಕಾತಿ ವೇಳೆ ಅರ್ಜಿ ಹಾಕಿದವರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎಂದರು.
ಇದಕ್ಕೆ ಆಕ್ಷೇಪಿಸಿದ ಸಚಿವ ಮಾಧುಸ್ವಾಮಿ, ಕೆಲಸಕ್ಕೆ ಸೇರುವಾಗ ನಿಯಮ ಗೋತ್ತಿರಲಿಲ್ಲ ಎಂಬುದನ್ನು ಒಪ್ಪಲಾಗುವುದಿಲ್ಲ. ಮುಂದೆ ಪಿಂಚಣಿ ಸಿಗೋದಿಲ್ಲ ಎಂದು ಗೋತ್ತಿದ್ದೇ ಕೆಲಸಕ್ಕೆ ಸೇರಿದ್ದಾರೆ. ಈಗ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಆಡಳಿತ ಪಕ್ಷದ ಮತ್ತೊಬ್ಬ ಸದಸ್ಯ ಆಯನೂರು ಮಂಜುನಾಥ್ ಧ್ವನಿಗೂಡಿಸಿ, 2008ರಲ್ಲಿ ನಮ್ಮ ರಾಜ್ಯ ಸರ್ಕಾರಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಅದೂ ಕೂಡ 2006ರಿಂದ ಪೂರ್ವಾನ್ವಯಗೊಳಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದಿಲ್ಲ, ಬದಲಾಗಿ ಸರ್ಕಾರಿ ನೌಕರರ ಮೇಲೆ ಏರಲಾಗಿದೆ. ಎನ್‍ಪಿಎಸ್ ಅನ್ನು ಹಿಂಪಡೆದು ಒಪಿಎಸ್ ಜಾರಿ ಮಾಡಬೇಕು. ಎನ್‍ಪಿಎಸ್ ಪರಿಷ್ಕರಣೆಗೆ ಈ ಮೊದಲು ರಚಿಸಿದ್ದ ಸಮಿತಿ ಸಭೆಯನ್ನೇ ನಡೆಸಿಲ್ಲಎಂದು ಆಕ್ಷೇಪಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುತ್ತಿಲ್ಲ: ಪ್ರಿಯಾಂಕ ಖರ್ಗೆ
ಜನರಿಂದ ಚುನಾಯಿತರಾದ ಶಾಸಕರಿಗೆ ಹಳೆ ಪಿಂಚಣಿ ವ್ಯವಸ್ಥೆ ಇದೆ. ಸರ್ಕಾರಿ ನೌಕರರಿಗೆ ಮಾತ್ರ ಹೊಸ ಪಿಂಚಣಿ ವ್ಯವಸ್ಥೆ ಯಾಕೆ ಎಂದು ಪ್ರಶ್ನಿಸಿದರು. ಆಗ ಅಸಮಧಾನವ್ಯಕ್ತ ಪಡಿಸಿದ ಸಚಿವ ಮಾಧುಸ್ವಾಮಿ, ಕಳೆದ ಬಾರಿಯೂ ಇದೇ ರೀತಿಯ ಭಾಷಣವನ್ನು ಇಲ್ಲಿ ಕೇಳಿದ್ದೇವೆ. ತಾವು ಅಧ್ಯಕ್ಷರು ಎಂಬ ಕಾರಣಕ್ಕೆ ಮಂಜುನಾಥ್ ಪ್ರತಿ ಕಲಾಪದಲ್ಲೂ ಇದೇ ಭಾಷಣ ಮಾಡಬೇಕೆ, ನಾವು ಕೇಳಬೇಕೆ ಎಂದರು.
ಮಂಜುನಾಥ್, ಸರ್ಕಾರ ತಾಯಿ ಸ್ಥಾನದಲ್ಲಿದೆ. ಸಮಸ್ಯೆ ಬಗೆ ಹರಿಯುವ ವರೆಗೂ ಪದೇ ಪದೇ ಚರ್ಚೆಯಾಗುತ್ತಲೇ ಇರುತ್ತದೆ ಎಂದು ಸಮರ್ಥಿಸಿಕೊಂಡರು. ನಮ್ಮ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಸಮಿತಿ ರಚನೆ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಹಳೆ ವ್ಯವಸ್ಥೆ ಜಾರಿ ಮಾಡುವುದು ಸುಲಭವಾಗಿಲ್ಲ. ಆದರೂ ಮುಖ್ಯಮಂತ್ರಿಯವರು ಸದನಕ್ಕೆ ನೀಡಿದ ಭರವಸೆಗೆ ಸರ್ಕಾರ ಬದ್ಧವಾಗಿದೆ. ಹಿಂದಿನ ಸಮಿತಿ ಸಭೆಯನ್ನೇ ಮಾಡಿಲ್ಲ ಎಂಬುದು ಸರಿಯಲ್ಲ. ಮೂರು ಸಭೆಗಳಾಗಿವೆ. ಹೊಸ ಪಿಂಚಣಿ ಯೋಜನೆ ಸುಧಾರಿಸುವ ಕುರಿತು ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದರು.
ಆಗ ತೀವ್ರ ಅಸಮಧಾನ ವ್ಯಕ್ತ ಪಡಿಸಿದ ಆಯನೂರು ಮಂಜುನಾಥ್, ನಮ್ಮದೇ ಸರ್ಕಾರಕ್ಕೆ ಮುಜುರ ಪಡಿಸಲು ನಾವು ಸಿದ್ಧವಿಲ್ಲ. ಆದರೂ ನಮ್ಮ ಆಗ್ರಹದಿಂದ ಹಿಂದೆ ಸರಿಯುವುದಿಲ್ಲ. ಅದಕ್ಕಾಗಿ ನಾನು ಸರ್ಕಾರದ ಉತ್ತರವನ್ನು ಒಪ್ಪದೆ ಸಭಾತ್ಯಾಗ ಮಾಡುತ್ತಿದ್ದೇನೆ ಎಂದು ಹೇಳಿ ಹೊರನಡೆದರು.
ಜೆಡಿಎಸ್‍ನ ಮರಿತಿಬ್ಬೇಗೌಡ, ಈ ಸರ್ಕಾರ ಸಭೆ ನಡೆಸಲು, ಒಂದು ಸಮಿತಿ ರಚನೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಲ್ಲದೆ ತಾವು ಕೂಡ ಸಭಾತ್ಯಾಗ ನಡೆಸುವುದಾಗಿ ಹೇಳಿ ಹೊರ ನಡೆದರು. ಆಯನೂರು ಮಂಜುನಾಥ್‍ರನ್ನೇ ಹಿಂಬಾಲಿಸಿದ ಎಸ್.ವಿ.ಸಂಕನೂರು ಸಚಿವರ ಹೇಳಿಕೆ ವಿರೋಧಿಸಿ ಸಭಾತ್ಯಾಗ ನಡೆಸುವುದಾಗಿ ಹೇಳಿ ಹೊರ ನಡೆಯಲು ಅನುವಾದರು.
ಆಗ ಕಾಂಗ್ರೆಸ್‍ನ ಸಚೇತಕ ಪ್ರಕಾಶ್ ರಾಥೋಡ್, ಆಡಳಿತ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡುತ್ತಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ. ಸರ್ಕಾರ ಯಾಕೆ ಇಷ್ಟು ನಿರ್ಲಕ್ಷ್ಯ ವಹಿಸಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಎಸ್.ವಿ.ಸಂಕನೂರ, ಸಭಾತ್ಯಾಗ ಸರ್ಕಾರದ ವಿರುದ್ಧವಲ್ಲ. ಬೇಡಿಕೆ ಈಡೇರಿಕೆ ಒತ್ತಾಯಿಸಿ ಹೊರ ಹೋಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಲಾಪದ ಮಾಹಿತಿ, ಸಾಮಾಜಿಕ ಜಾಲತಾಣದ ವಿವರ