ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹೊಸ ವರ್ಷದ ಡೈರಿ ಮತ್ತು ಕ್ಯಾಲೆಂಡರ್ ಅನ್ನು ಬ್ಯಾಂಕಿನಲ್ಲಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪನವರು ಇಂದು ಬಿಡುಗಡೆಗೊಳಿಸಿದರು.
ನಂತರ ಬ್ಯಾಂಕಿನ ಪ್ರಗತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ೨೦೨೧-೨೨ನೇ ಸಾಲಿನ ಅಂತ್ಯಕ್ಕೆ ೨೨.೯೯ ಕೋಟಿ ನಿವ್ವಳ ಲಾಭ ಗಳಿಸಿದೆ. ೩೧.೧೪ ಕೋಟಿ ಲಾಭದಲ್ಲಿ ೮.೧೫ಕೋಟಿ ತೆರಿಗೆ
ಪಾವತಿಸಿದ್ದೇವೆ. ಒಟ್ಟಾರೆ ಲಾಭ ಗಳಿಕೆಯಲ್ಲಿ ರಾಜ್ಯದಲ್ಲಿಯೇ ದ್ವಿತೀಯ ಹಾಗೂ ಬೆಂಗಳೂರು ಪ್ರಾಂತ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದೇವೆ ಎಂದರು.
ಬ್ಯಾಂಕ್ ೧೨೪೪.೩೬ ಕೋಟಿ ಠೇವಣಿ ಸಂಗ್ರಹಿಸಿದೆ. ಷೇರು ಬಂಡವಾಳವೇ ೧೨೯.೫ಕೋಟಿ ಇದೆ. ಒಟ್ಟಾರೆ ೨೫೧೭.೩೦ಕೋಟಿಯಷ್ಟು ವ್ಯವಹಾರ ಮಾಡಿದ್ದೇವೆ. ಇದರ ಜೊತೆಗೆ ೧೧೨೪೪೫ ರೈತರಿಗೆ ೧೨೧೮.೧೭ ಕೋಟಿ ಕೃಷಿ ಸಾಲ ನೀಡಿದ್ದೇವೆ. ಇದರಲ್ಲಿ ೬೫೪೬ ಹೊಸ ರೈತರಿದ್ದಾರೆ. ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ೯೯೯೫ ರೈತ ಸದಸ್ಯರಿಗೆ ೮೬.೪೯ಕೋಟಿ ಅಲ್ಪಾವಧಿ ಬೆಳೆಸಾಲ ನೀಡಿದ್ದೇವೆ. ಒಟ್ಟಾರೆ ಕೃಷಿ ಮತ್ತು ಕೃಷಿಯೇತರವಾಗಿ ೧೬೮೪.೭೭ ಕೋಟಿ ರೂ. ಸಾಲ ನೀಡಿದ್ದೇವೆ. ಸಾಲದ ವಸೂಲಾತಿ ಕೂಡ ಶೇ.೯೮.೪೯ಕೋಟಿ ಇದೆ. ಬ್ಯಾಂಕಿಗೆ ಲೆಕ್ಕಪರಿಶೋಧಕರಿಂದ ‘ಎ’ ಶ್ರೇಣಿ ಸಿಕ್ಕಿದೆ. ಅಪೆಕ್ಸ್ ಬ್ಯಾಂಕಿನವರು ಕೂಡ ನಮಗೆ ‘ಎ’ ಶ್ರೇಣಿ ನೀಡಿದ್ದಾರೆ ಎಂದರು.
ಬ್ಯಾಂಕ್‌ನಿಂದ ಸುಮಾರು ೭೮೯೫ ಸ್ವಸಹಾಯ ಗುಂಪು ರಚಿಸಲಾಗಿದೆ. ೧೦೩.೨೦ ಕೋಟಿ ಇವರಿಗೆ ಸಾಲ ನೀಡಲಾಗಿದೆ. ವಸೂಲಾತಿ ಪ್ರಮಾಣ ಶೇ.೯೯.೧೫ರಷ್ಟಿದೆ. ಬ್ಯಾಂಕಿನ ಮೊಬೈಲ್ ಆಪ್ ಕೂಡ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ಮೆಷಿನ್ ಸೌಲಭ್ಯ ಒದಗಿಸಲಾಗಿದೆ. ಯಶಸ್ವಿನಿ ಆರೋಗ್ಯ ವಿಮಾ
ಯೋಜನೆಯನ್ನು ಬ್ಯಾಂಕಿನಿಂದ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ನೊಂದಣಿಗೆ ಡಿಸೆಂಬರ್ ೩೧ ಕೊನೆಯ ದಿನಾಂಕವಾಗಿರುತ್ತದೆ. ಇದುವರೆಗೂ ಯಶಸ್ವಿನಿ ವಿಮಾ ಯೋಜನೆಯನ್ನು ಪಡೆಯದಿರುವವರು ತಕ್ಷಣ ಪಡೆಯಬೇಕೆಂದು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ನಿರ್ದೇಶಕರುಗಳಾದ ಎಸ್.ಪಿ. ದಿನೇಶ್, ಯೋಗೀಶ್‌ಜೆ.ಪಿ., ಪರಮೇಶ್ವರ್, ಜಿ.ಎನ್.ಸುರೇಶ್, ಹೆಚ್.ಕೆ. ವೆಂಕಟೇಶ್, ದುಗ್ಗಪ್ಪ ಗೌಡ, ಮಧುಸೂದನ್, ಗುರುರಾಜ್, ಸಿಇಒ ನಾಗೇಶ್ ಎನ್. ಡೋಂಗ್ರೆ ಇದ್ದರು.