ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಜ. ೧೨ರಂದು ದಾವಣಗೆರೆಯಲ್ಲಿ ಕೆ.ಆರ್.ಎಸ್. ಪಕ್ಷದಿಂದ ಯುವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾಣಗೆರೆ ತಿಳಿಸಿದರು.


ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಿಯಿಲ್ಲದ ರಾಜಕಾರಣದ ಆಶಯ ಹೊತ್ತು ಮೂರು ವರ್ಷಗಳಿಂದ ಸದೃಢವಾಗಿ ಬೆಳೆಯುತ್ತಿರುವ ಕೆ.ಆರ್.ಎಸ್. ಪಕ್ಷದ ಯುವ ಸಮ್ಮೇಳನದಲ್ಲಿ ರಾಜ್ಯದ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.


ದೇಶದ ಅಭಿವೃದ್ದಿಯಲ್ಲಿ ಯುವ ಜನಾಂಗದ ಪಾತ್ರ ಪ್ರಮುಖವಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ. ೫೦ರಷ್ಟು ಯುವ ಜನಾಂಗವಿದೆ. ದೇಶದ ಅಭಿವೃದ್ದಿಗೆ ಯುವ ಸಮೂಹವನ್ನು ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ. ಯುವ ಜನರ ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆ.ಆರ್.ಎಸ್. ತನ್ನದೇ ಕಾರ್ಯ ಯೋಜನೆ ರೂಪಿಸಿದ್ದು, ಅದರ ಮೊದಲ ಭಾಗವಾಗಿ ದಾವಣಗೆರೆಯ ಯುವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕೆ.ಆರ್.ಎಸ್. ಪಕ್ಷ ರಾಜ್ಯದ ಯುವಜನರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು, ಮಹಿಳೆಯರಿಗೆ ಪಕ್ಷದ ಖರ್ಚಿನಲ್ಲಿಯೆ ಚುನಾವಣೆ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಹಳೆ ಮುಖವನ್ನು, ಭ್ರಷ್ಟಾಚಾರವನ್ನು ನೋಡಿ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಹಳೆ ಮುಖಗಳಿಗೆ ಪರ್ಯಾಯವಾಗಿ ಯುವ ಶಕ್ತಿಯನ್ನು ರಾಜಕೀಯಕ್ಕೆ ತರಲು ಈ ಸಮಾವೇಶದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು.


ರಾಜ್ಯದಲ್ಲಿ ೩೫ಸಾವಿರಕ್ಕೂ ಹೆಚ್ಚು ಜನರು ಸ್ವಂತ ಹಣದಲ್ಲಿ ಕೆ.ಆರ್.ಎಸ್. ಪಕ್ಷದ ಸದಸ್ಯರಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಸಾರಥ್ಯದಲ್ಲಿ ರಾಜ್ಯಾದ್ಯಂತ ಜನಚೈತನ್ಯ ಯಾತ್ರೆ ನಡೆಸಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಲಾಗುತ್ತಿದೆ. ಒಂದು ಓಟು, ಒಂದು ನೋಟು ಘೋಷವಾಕ್ಯದಡಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಜನರಿಗೆ ಪಾರದರ್ಶಕ ರಾಜಕಾರಣದ ಮಹತ್ವ ತಿಳಿಸಿಕೊಡುವ ಪ್ರಯತ್ನ ನಡೆಸಲಾಗುತ್ತಿದೆ. ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಕೆ.ಆರ್.ಎಸ್. ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದು ಈ ಪೈಕಿ ೮೦ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೆ.ಆರ್.ಎಸ್. ಪಕ್ಷ ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿ ಯುವಜನರನ್ನು ಹೆಚ್ಚೆಚ್ಚು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.


ಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕ ಅರುಣ್ ಕಾನಳ್ಳಿ, ರಾಜ್ಯ ಸಹ ಕಾರ್ಯದರ್ಶಿ ಜೀವನ್, ಕೃಷ್ಣ ವಿ.ಬಿ. ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!