ಸಾಧನೆಗೆ ನಿರಂತರ ಪರಿಶ್ರಮ, ತಾಳ್ಮೆ ಅಗತ್ಯ: ಗ್ರ್ಯಾಂಡ್ ಮಾಸ್ಟರ್ ಕಿಶನ್ ಗಂಗೊಳ್ಳಿ
ಶಿವಮೊಗ್ಗ: ಚೆಸ್ ಸ್ಪರ್ಧೆಯಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ಹಾಗೂ ತಾಳ್ಮೆ ಅತ್ಯಂತ ಅವಶ್ಯಕ ಎಂದು ಅಂತರಾಷ್ಟ್ರೀಯ ಚೆಸ್ ಆಟಗಾರ, ಗ್ರ್ಯಾಂಡ್ ಮಾಸ್ಟರ್ ಕಿಶನ್ ಗಂಗೊಳ್ಳಿ ಹೇಳಿದರು.
ಶಿವಮೊಗ್ಗ ನಗರದ ರೋಟರಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಹಾಗೂ ನಳಂದ ಚೆಸ್ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಓಪನ್ ಚೆಸ್ ಪಂದ್ಯಾವಳಿ ಹಾಗೂ 16 ವರ್ಷದೊಳಗಿನ ಟೂರ್ನ್ ಮೆಂಟ್ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಪೂರ್ಣಗೊಳಿಸಿ ವೃತ್ತಿಗೆ ಸೇರಲು ಹತ್ತಾರು ವರ್ಷಗಳೇ ಬೇಕಾಗುತ್ತದೆ. ಚೆಸ್‌ನಲ್ಲಿ ಮಕ್ಕಳು ಒಂದೆರಡು ವರ್ಷಗಳಲ್ಲಿ ಸಾಧನೆ ಮಾಡದಿದ್ದರೆ ಕಲಿಕೆ ಬಿಡಿಸುವ ಪ್ರವೃತ್ತಿ ಜಾಸ್ತಿ ಇದೆ. ಆ ರೀತಿ ಆಗಬಾರದು. ಮಕ್ಕಳಿಗೆ ವರ್ಷಗಳ ಕಾಲ ನಿರಂತರ ಕಲಿಕೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಬೇಕು. ಕಠಿಣ ಪರಿಶ್ರಮದಿಂದ ಚೆಸ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷೆ ವೀಣಾ ಸುರೇಶ್ ಮಾತನಾಡಿ, ಮಕ್ಕಳು ಚೆಸ್ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಬೌದ್ಧಿಕ ಸಾಮಾರ್ಥ್ಯ ವೃದ್ಧಿ ಆಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಮರೆವಿನ ಕಾಯಿಲೆ ತಡೆಗಟ್ಟಲು ಸಾಧ್ಯವಿದೆ. ಕಲಿಕಾ ಸಾಮರ್ಥ್ಯ ಹೆಚ್ಚುವುದರಿಂದ ಶೈಕ್ಷಣಿಕ ಕ್ಷೇತ್ರಕ್ಕೂ ಅನುಕೂಲವಾಗುತ್ತದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಗೆದ್ದವರು ಮತ್ತಷ್ಟು ಕೌಶಲ್ಯ ಹೆಚ್ಚಿಸಿಕೊಳ್ಳಲು ಗಮನ ವಹಿಸಬೇಕು. ಸೋತವರು ಮುಂದಿನ ಪಂದ್ಯಾವಳಿಗೆ ಈಗಿನಿಂದಲೇ ಸಿದ್ಧತೆ ನಡೆಸಿ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚೆಸ್ ಪಂದ್ಯಾವಳಿಯಲ್ಲಿ ವಿವಿಧ ವಿಭಾಗದ ಸ್ಪರ್ಧೆಗಳು ನಡೆದವು. ಓಪನ್ ಟೂರ್ನ್ ಮೆಂಟ್‌ನಲ್ಲಿ ಯಾವುದೇ ವಯಸ್ಸಿನ ಮಿತಿ ಇರಲಿಲ್ಲ. ಯು 16( ಹದಿನಾರು ವರ್ಷದೊಳಗಿನ), ಯು 13, ಯು 11, ಯು 9 ಹಾಗೂ ಯು 7 ವಯೋಮಿತಿಯೊಳಗಿನ ಪಂದ್ಯಗಳು ನಡೆದವು. ಇನ್ನೂರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು 40 ಸಾವಿರ ರೂ. ಮೌಲ್ಯದ ಬಹುಮಾನವನ್ನು ವಿಜೇತರಿಗೆ ಪ್ರಮಾಣ ಪತ್ರದೊಂದಿಗೆ ವಿತರಿಸಲಾಯಿತು.
ನಳಂದ ಚೆಸ್ ಅಕಾಡೆಮಿಯ ಶ್ರೀಕೃಷ್ಣ ಉಡುಪ, ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಕಾರ್ಯದರ್ಶಿ ಮೀರಾ ನಾಡಿಗ್, ಮದನ್‌ಲಾಲ್, ಸುರೇಶ್‌ಕುಮಾರ್.ಡಿ, ಉಮಾ ಅಮರ್, ಅಮರನಾಥ್, ಸುನೀತಾ ಚೇತನ್ ಮತ್ತಿತರರು ಉಪಸ್ಥಿತರಿದ್ದರು.