ನೂತನ ನಾಮನಿರ್ಧೇಶಿತ ಸದಸ್ಯರಿಂದ ಪ್ರಮಾಣ ವಚನ
ಶಿವಮೊಗ್ಗ, ಸೆ.19:
ನಿಜಕ್ಕೂ ಬಹು ದಿನಗಳ ನಂತರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ರಂಗು ರಂಗಾಗಿ ರಾಂಗಿನ ವಿಷಯಗಳನ್ನು ಹೊರ ಬಿಂಬಿಸಿತು.  ಇಂದಿರಾ ಕ್ಯಾಂಟೀನ್‌ಗಳ ವಂಚನೆ, ಪೌರಕಾರ್ಮಿಕರಿಗೆ ನೀಡುವ ಆಹಾರದಲ್ಲಿ ಕಲ್ಮಶ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹತ್ತು ಹಲವು ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಇದರ ನಡುವೆ ಕೋವಿಡ್ 19 ನಿಂದ ನಿಧನ ಹೊಂದಿದ ಪಾಲಿಕೆಯ ಗುತ್ತಿಗೆ ನೌಕರ ಪಾಪಾನಾಯ್ಕರ ಕುಟುಂಬಕ್ಕೆ ೩ ಲಕ್ಷ ಪರಿಹಾರ ನೀಡುವ ಬಗ್ಗೆ ಅಧಿಕೃತ ಆದೇಶ ಹೊರಬಿತ್ತು.
ಇಂದು ಬೆಳಗ್ಗೆ ಆರಂಭಗೊಂಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಲಿನ ಈ ಎಲ್ಲಾ ಗಂಭೀರ ವಿಷಯಗಳೊಂದಿಗೆ ವಾಗ್ವಾದ, ಬಾವಿಗಿಳಿದು ಪ್ರತಿಭಟನೆ ನಡೆಯಿತು. ವಿಶೇಷವಾಗಿ ಎಲ್ಲಾ ಪಾಲಿಕೆ ಸದಸ್ಯರು ಪಕ್ಷಾತೀತಾವಾಗಿ ಪೌರಕಾರ್ಮಿಕರಿಗೆ ನೀಡುವ ಕಳಪೆ ಆಹಾರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಸಿ. ನಾಯ್ಕ ಅವರು ಈ ವಿಷಯ ಪ್ರಸ್ತಾಪಿಸಿ, ಪೌರನೌಕರರ ಊಟದಲ್ಲಿ ಹುಳಗಳು ಕಂಡು ಬಂದಿವೆ, ಕಳಪೆ ಊಟ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಹೆಚ್.ಸಿ.ಯೋಗೀಶ್ ಸೇರಿದಂತೆ ಎಲ್ಲರೂ ಪೌರನೌಕರರಿಗೆ ಗುಣಮಟ್ಟದ ಊಟ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಪೌರನೌಕರರಿಗೆ ಕಳಪೆ ಊಟ ನೀಡುತ್ತಿರುವುದು ಸರಿಯಲ್ಲ, ಊಟದ ಟೆಂಡರ್ ಪಡೆದಿರುವವರಿಗೆ ಮುಂದಿನ ಟೆಂಡರ್ ನೀಡಬೇಡಿ. ಮುಂದೆ ಪೌರ ನೌಕರರ ಅಕೌಂಟ್‌ಗೆ ಊಟದ ಹಣ ಪಾವತಿಸಿ ಎಂದು ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಮೇಯರ್ ಸುವರ್ಣ ಶಂಕರ್, ಕಳಪೆ ಊಟ ನೀಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ಕಳಪೆ ಊಟ ನೀಡುತ್ತಿದ್ದ ಬಗ್ಗೆ ಅಧಿಕಾರಿಗಳು ನನ್ನ ಗಮನಕ್ಕೆ ತಂದಿಲ್ಲ, ಮುಂದೆ ಈ ರೀತಿ ಆಗಬಾರದು. ಪೌರನೌಕರರ ಅಕೌಂಟ್‌ಗೆ ಊಟದ ಹಣ ಪಾವತಿಸುವ ಬಗ್ಗೆ ಸರ್ಕಾರ ಮಾರ್ಗಸೂಚಿ ಗಮನಿಸಿ ಅವಕಾಶ ಇದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ ನಗರದ ಇಂದಿರಾ ಕ್ಯಾಂಟೀನ್‌ಗಳಿಂದ ಎಷ್ಟು ಊಟ, ತಿಂಡಿ ನೀಡಲಾಗಿದೆ ಎಂಬ ಮಾಹಿತಿ ನೀಡುವಂತೆ ಕೋರಿದ್ದರೂ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ, ಲಾಕ್‌ಡೌನ್ ಸಮಯದಲ್ಲಿ ಜನರು ಊಟ, ತಿಂಡಿ ಮಾಡಿದಿದ್ದರೂ ಸುಳ್ಳು ಲೆಕ್ಕ ಬರೆದಿರುವ ಅನುಮಾನವಿದೆ ಎಂದು ಆರೋಪಿಸಿದರು.

ಇಂದಿರಾ ಕ್ಯಾಂಟೀನ್


ನಗರದಲ್ಲಿ 4 ಇಂದಿರಾ ಕ್ಯಾಂಟೀನ್‌ಗಳಿವೆ, 1 ಅಡುಗೆ ಮನೆ ಇದೆ ಎಂದು ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು ಲಾಕ್‌ಡೌನ್ ಸಮಯದಲ್ಲಿ ಎಷ್ಟು ಊಟ, ತಿಂಡಿ ನೀಡಲಾಗಿದೆ ಎಂಬ ಮಾಹಿತಿಯನ್ನು ಸಭೆಗೆ ತಂದಿಲ್ಲ, ಕೊಡುತ್ತೇವೆ ಎಂದು ಜಾರಿಕೊಂಡರು.
ಇದಕ್ಕೆ ಒಪ್ಪದ ಸದಸ್ಯರುಗಳು, ಪಾಲಿಕೆ ಹಣ ದುರುಪಯೋಗ ಮಾಡಿಕೊಳ್ಳಲು ಬಿಡುವುದಿಲ್ಲ, ಸರಿಯಾದ ಲೆಕ್ಕ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರಿಗಾಗಿ ಹೋರಾಟ:
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಆಡಳಿತ ವ್ಯವಸ್ಥೆ ಗೆ ಧಿಕ್ಕಾರ…
ಹೀಗೆ ಬರೆಯಲಾದ ನಾಮ ಫಲಕವನ್ನು ಹಿಡಿದುಕೊಂಡು ಪಾಲಿಕೆಯ ವಿಪಕ್ಷ ಸದಸ್ಯರಾದ ಯಮುನಾ ರಂಗೇಗೌಡ, ರೇಖಾ ರಂಗನಾಥ್, ಮೆಹಕ್ ಶರೀಫ್ ಹಾಗೂ ಮಂಜುಳಾ ಶಿವಣ್ಣ ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ನೀವು ಹೇಳುತ್ತಿರುವಂತೆ ನೀರಿನ ಸಮಸ್ಯೆ ನಗರದಲ್ಲಿಲ್ಲ, ಸುಮ್ಮನೆ ಸಭೆಯನ್ನು ತಪ್ಪು ದಾರಿಗೆ ಕೊಂಡೊಯ್ಯಬೇಡಿ ಎಂದರು.
ಇದನ್ನು ಕೇಳದ ಪ್ರತಿಭಟನೆ ನಿರತ ಸದಸ್ಯರು, 2 ವರ್ಷದಿಂದ ಸಮಸ್ಯೆ ಇದೆ ನಿಮಗೇನುಗೊತ್ತು ಎಂದು ಏರು ಧ್ವನಿಯಲ್ಲಿಯೇ ಅವಲೊತ್ತು ಕೊಂಡರು. ಈ ನಡುವೆ ಆಡಳಿತ ಪಕ್ಷ ಹಾಗೂ ವಿಪಕ್ಷದ ಸದಸ್ಯರ ನಡುವೆ ವಾಗ್ವಾದಗಳು ನಡೆದವು.
ಮಧ್ಯ ಪ್ರವೇಶಿಸಿದ ಮೇಯರ್ ಹಾಗೂ ಉಪಮೇಯರ್, ನಿಮ್ಮ ಭಾಗದಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸಿ 15 ಲಕ್ಷರೂ. ವೆಚ್ಚ ಮಾಡಿ ಪೈಪ್‌ಲೈನ್ ಹಾಕಲಾಗಿದೆ. ಇನ್ನೂ ಸಮಸ್ಯೆ ಇದ್ದಲ್ಲಿ ನಾಳೆಯೇ ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ  ಹೋರಾಟ ಹಿಂಪಡೆಯಲಾಯಿತು.

3 ಲಕ್ಷರೂ. ಪರಿಹಾರ:
ಕೋರೋನದಿಂದ ಮೃತಪಟ್ಟವರ ಶವಸಂಸ್ಕಾರ ಮಾಡುತ್ತಿದ್ದ ಪಾಲಿಕೆಯ ಗುತ್ತಿಗೆ ನೌಕರ ಪಾಪಾನಾಯ್ಕ ಕೊರೋನದಿಂದ ಮೃತಪಟ್ಟಿದ್ದಕ್ಕೆ ಪಾಲಿಕೆಯಿಂದ ೩ಲಕ್ಷರೂ. ಪರಿಹಾರ ಹಾಗೂ ಆತನ ಪತ್ನಿಗೆ ಕೆಲಸ ನೀಡುವುದಾಗಿ ಮೇಯರ್ ಸಭೆಯಲ್ಲಿ ಘೋಷಿಸಿದರು.
ಚಿಲ್ಲದೆ ಸರ್ಕಾರದಿಂದ 30ಲಕ್ಷರೂ. ಪರಿಹಾರ ನೀಡುವಂತೆ ಪಾಲಿಕೆಯಿಂದ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಗಂಧರ್ವ ನಗರ ಸಮಸ್ಯೆ:
ಗಂಧರ್ವ ನಗರ ಲೇಔಟ್‌ನಲ್ಲಿ ಸರಿಯಾದ ರಸ್ತೆ, ಪಾರ್ಕ್ ಸೇರಿದಂತೆ ಅಗತ್ಯ ಸೌಲಭ್ಯ ಇಲ್ಲದಿದ್ದರೂ ಅದನ್ನು ಪಾಲಿಕೆ ವ್ಯಾಪ್ತಿಗೆ ಪಡೆದಿರುವುದಕ್ಕೆ ಸ್ಥಳಿಯ ಸದಸ್ಯೆ ಲಕ್ಷ್ಮಮ್ಮ ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದರು.
ಮಧ್ಯಾಹ್ನದ ನಂತರವೂ ಸಭೆ ಮುಂದುವರೆದಿತ್ತು.

By admin

ನಿಮ್ಮದೊಂದು ಉತ್ತರ

You missed

error: Content is protected !!