ಶಿವಮೊಗ್ಗ: ವಕೀಲ ವೃತ್ತಿ ವ್ಯವಹಾರವಾಗದೇ ನೊಂದವರ ಕಣ್ಣೀರು ಒರೆಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಲಯದ ನ್ಯಾಯಮೂರ್ತಿ ಶ್ರೀಕೃಷ್ಣ ಎಸ್. ದೀಕ್ಷಿತ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತ ಮಹೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಿ. ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ವಕೀಲರು ಸಂವಿಧಾನಕ್ಕೆ ಬದ್ಧರಾಗಿರಬೇಕು. ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ವೃತ್ತಿಯನ್ನು ವ್ಯವಹಾರಕ್ಕೆ ಬಳಸದೇ ನೊಂದವರ ಕಣ್ಣೀರು ಒರೆಸಿ ನ್ಯಾಯಪರವಾಗಿರಬೇಕು. ಕಾನೂನು ವಿದ್ಯಾರ್ಥಿಗಳು ಮುಖ್ಯವಾಗಿ ಅಧ್ಯಯನಶೀಲರಾಗಬೇಕು ಎಂದರು.

ನ್ಯಾಯಾಲಯ ವ್ಯವಹಾರ ಅಂಗಡಿ ಎಂಬ ಮನೋಭಾವ ಬೆಳೆಸಿಕೊಳ್ಳದೇ, ನೊಂದು ಬಂದವರಿಗೆ ನ್ಯಾಯದಾನ ಮಾಡುವ ದೇಗುಲವೆನ್ನುವಂತೆ ಕಾಣಬೇಕು. ಜೊತೆಗೆ ವಕೀಲರಾಗುವವರಲ್ಲಿ ಲಾಭಾಂಶದ ಹಂಬಲ ಸಲ್ಲದು. ವಕೀಲರ ಪಾತ್ರವೂ ಕೂಡ ದೇಶದ ಸಮಗ್ರತೆಗೆ ಮಹತ್ವದ ಪಾತ್ರ ವಹಿಸುತ್ತದೆ. ವಕೀಲರು ಸಂವಿಧಾನ ರಕ್ಷಣೆ ಮಾಡುವ ನಿಟ್ಟಿನತ್ತ ಗಮನಹರಿಸಬೇಕು ಎಂದರು.

ಹಿರಿಯ ನ್ಯಾಯವಾದಿ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿ, ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕು ಇದೆ. ಶಿಕ್ಷೆ ಮನ ಪರಿವರ್ತನೆಯ ದಾರಿ ಆಗಬೇಕು. ಆದರೆ, ಪ್ರಸ್ತುತ ಜೈಲು ಕೂಡ ವ್ಯಾಪಾರದ ಕೇಂದ್ರವಾಗಿರುವುದು ವಿಷಾದನೀಯ. ಇದು ದೂರವಾಗಬೇಕು ಎಂದರು.

ವಕೀಲರ ಬಗ್ಗೆ ಒಂದು ಕಾಲದಲ್ಲಿ ಕೀಳರಿಮೆ ಇತ್ತು. ವಕೀಲರೆಂದರೆ ಜನರು ಬೇರೆ ರೀತಿಯಲ್ಲೇ ಮಾತನಾಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ವಕೀಲರ ಪಾತ್ರ ಮಹತ್ತರವಾಗಿದೆ. ಈ ವೃತ್ತಿಗೆ ಬರುವವರು ಆತ್ಮಸಾಕ್ಷಿಗೆ ಬದ್ಧರಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಬೇಕು. ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್ ಭಾಷೆ ಕರಗತ ಮಾಡಿಕೊಂಡರೆ ಒಳ್ಳೆಯದು ಎಂದರು.

ಇದೇ ಸಂದರ್ಭದಲ್ಲಿ ಕಾನೂನು ಪದವಿ ಪಡೆದ 60 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಡಿ.ಜಿ. ರಮೇಶ್, ಪ್ರಾಂಶುಪಾಲ ಡಾ. ಜಗದೀಶ್ ಮೊದಲಾದವರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.

By admin

ನಿಮ್ಮದೊಂದು ಉತ್ತರ

error: Content is protected !!