ತಾಲ್ಲೂಕಿನ ಕುದುರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಸಿಗೊಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಎರಡು ಮನೆಯಲ್ಲಿ ಕಳ್ಳತನ ನಡೆದಿದೆ.
ಬಾಬು ಜೈನ್ ಎಂಬುವವರ ಮನೆಯ ಮುಂಬಾಗಿಲು ಒಡೆದು ಸುಮಾರು ೫ ಲಕ್ಷ ರೂಪಾಯಿ ಮೌಲ್ಯದ ೯೦ ಗ್ರಾಂ ಬಂಗಾರ, ಸುಮಾರು ೫ಸಾವಿರ ರೂ. ಮೌಲ್ಯದ ಬೆಳ್ಳಿದೀಪವನ್ನು ಕಳ್ಳತನ ಮಾಡಿದ್ದಾರೆ. ಬಾಬು ಜೈನ್ ಅವರು ಪಕ್ಕದಲ್ಲೆ ಇರುವ ತಮ್ಮ ಸಂಬಂಧಿಕರ ಮನೆಯಲ್ಲಿ ಮಲಗಲು ಹೋಗಿದ್ದಾಗ ಕಳ್ಳರು ಈ ಕೃತ್ಯ ನಡೆಸಿದ್ದಾರೆ.

ಅಲ್ಲಿಂದ ಒಂದು ಕಿ.ಮೀ. ದೂರದಲ್ಲಿರುವ ರಾಘವೇಂದ್ರ ಶೇಟ್ ಎಂಬುವವರ ಮನೆಯ ಹೆಂಚು ತೆಗೆದು ಇಳಿದ ಕಳ್ಳರು ಮನೆಯ ಗಾಡ್ರೇಜ್ ಬೀರು ಒಡೆದಿದ್ದಾರೆ. ಗಾಡ್ರೇಜ್ನಲ್ಲಿದ್ದ ಸುಮಾರು ೧೦ಸಾವಿರ ರೂ. ನಗದು ಕಳ್ಳರು ತೆಗೆದುಕೊಂಡು ಹೋಗಿಲ್ಲ ಎನ್ನಲಾಗಿದೆ. ರಾಘವೇಂದ್ರ ಶೇಟ್ ಅವರ ಕುಟುಂಬ ಕುಂದಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ಸಂದರ್ಭದಲ್ಲಿ ಬಂಗಾರವನ್ನು ತೆಗೆದುಕೊಂಡು ಹೋಗಿದ್ದರು.
ಸ್ಥಳಕ್ಕೆ ಕಾರ್ಗಲ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,

ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿವೆ.
ರಸ್ತೆತಡೆ : ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರು ಸಸಿಗೊಳಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ಇರುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಕಳ್ಳರನ್ನು ಬಂಧಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸುಧಾಕರ್, ದೇವರಾಜ್, ತಿಮ್ಮಪ್ಪ, ಗಣಪತಿ, ರವಿ ಅಳೂರು, ಬಾಬು ಸಸಿಗೊಳ್ಳಿ, ಜಿನೇಂದ್ರ ಸಸಿಗೊಳ್ಳಿ ಇನ್ನಿತರರು ಭಾಗವಹಿಸಿದ್ದರು.