ಗುರುಗಳಿಗೆ ಮತ್ತು ಸಮಾಜಕ್ಕೆ ದಾನ ಮಾಡಿದರೆ ದೇವರು ನೂರುಪಟ್ಟು ನಮಗೆ ವಾಪಸ್ಸು ನೀಡುತ್ತಾನೆ. ಸಮಾಜದ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ನಗರದ ಗಾಡಿಕೊಪ್ಪದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ನಿರ್ಮಿಸಿದ ದೈವಜ್ಞ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಈ ಸಮಾಜ ಹಿಂದಿನಿಂದಲೂ ಹಿಂದು ಸಮಾಜಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ನಾನು ಶಾಸಕ ಮತ್ತು ಮಂತ್ರಿಯಾಗಲು ಪ್ರಮುಖ ಕಾರಣ ದೈವಜ್ಞ ಸಮಾಜ. ಬಿಜೆಪಿ ಅಸ್ತಿತ್ವಕ್ಕೆ ಬರುವಂತಹ ಸಂದರ್ಭದಿಂದಲೂ ಅಧಿಕಾರಕ್ಕೆ ಏರುವ ವರೆಗೆ ಸಮಾಜದ ಅನೇಕ ಮುಖಂಡರು ಸಹಾಯ ನೀಡುತ್ತಾ ಬಂದಿದ್ದಾರೆ. ಅದನ್ನು ಮರೆಯಲಾಗುವುದಿಲ್ಲ. ೧೯೯೭ರಲ್ಲಿ ಗಾಡಿಕೊಪ್ಪದಲ್ಲಿ ೮೦*೨೦೦ ಅಡಿ ವಿಸ್ತೀರ್ಣದ ನಿವೇಶನ ದೊರಕಿದ್ದರೂ ವಿದ್ಯಾರ್ಥಿ ನಿಲಯವಾಗಿರಲಿಲ್ಲ. ಸರ್ಕಾರದ ವತಿಯಿಂದ ೧.೬೩ ಕೋಟಿ ಅನುದಾನದಿಂದ ಹಾಗೂ ಸಮಾಜದ ಸಹಕರಾದಿಂದ ಈಗ ವಿದ್ಯಾರ್ಥಿ ನಿಲಯ ಆಗಿದೆ. ಗುರುಗಳ ಅಪೇಕ್ಷೆಯಂತೆ ಸಮಾಜಕ್ಕೆ ಮಾರ್ಗದರ್ಶನ ನಿರಂತರವಾಗಿ ನೀಡಲು ಒಂದು ಶಾಖಾ ಮಠದ ಅವಶ್ಯಕತೆಯಿದೆ. ಒಂದು ಅತ್ಯಾಧುನಿಕ ಸೈನ್ಸ್ ಪಿಯು ಕಾಲೇಜ್ ಮತ್ತು ಗುರುಕುಲದ ಮಾದರಿಯಲ್ಲಿ ಒಂದು ಶಾಖಾ ಮಠ ನಿರ್ಮಾಣಕ್ಕೆ ಕೂಡಲೇ ಒಂದು ಯೋಜನೆ ಸಿದ್ದಪಡಿಸಿ ಸಮಾಜವು ಅದಕ್ಕೆ ಕೈ ಜೋಡಿಸಿ ನಾನು ಕೂಡ ನನ್ನ ವೈಯಕ್ತಿಕ ಹಾಗೂ ಸರ್ಕಾರದಿಂದ ನೆರವು ನೀಡುವುದಾಗಿ ಘೋಷಿಸಿದರು.
ಈಗಾಗಲೇ ಗಾಡಿಕೊಪ್ಪದಲ್ಲಿ ಒಂದು ಎಕರೆ ಸಮಾಜದ ಜಾಗವಿದ್ದು, ಅಲ್ಲಿ ಭಾನುವಾರವೇ ಸೈನ್ಸ್ ಪಿಯು ಕಾಲೇಜಿಗೆ ಅಡಿಗಲ್ಲು ಹಾಕುವ ತೀರ್ಮಾನ ಸಭೆಯಲ್ಲೆ ಕೈಗೊಳ್ಳಲಾಯಿತು. ಮೊದಲೇ ಯೋಜನೆ ಸಿದ್ದವಾಗಿದ್ದರಿಂದ ಸಾರ್ವಜನಿಕರು ವೇದಿಕೆಯಲ್ಲೆ ಸಹಾಯ ಹಸ್ತದ ಘೋಷಣೆ ಮಾಡಿದರು. ಸಮಾಜದ ಮಹಿಳೆಯರ ಬೇಡಿಕೆಯಾದ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಕೂಡ ೫೦ ಲಕ್ಷ ನೆರವು ಸರ್ಕಾರ ನೀಡಿದೆ ಮತ್ತು ಮಹಿಳಾ ಮಂಡಳಿಯ ಕಾರ್ಯಚಟುವಟಿಕೆಗಳಿಗೆ ಕೂಡ ನೆರವು ನೀಡಲು ಸಿದ್ಧನಿದ್ದೇನೆ ಎಂದರು.
ಪಿಯು ಕಾಲೇಜು, ದೈವಜ್ಞ ಪೀಠದ ಶಾಖಾಮಠ, ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ಮಹಿಳಾ ಮಂಡಳಿಯ ಕಟ್ಟಡ ಇಷ್ಟಕ್ಕು ನೆರವು ನೀಡಲು ದೈವಜ್ಞ ಸಮಾಜ ಒಟ್ಟಾಗಬೇಕೆಂದು ಈಶ್ವರಪ್ಪ ಸಲಹೆ ನೀಡಿದರು. ಸುಮಾರು ೭ ಕೋಟಿಗೂ ಹೆಚ್ಚು ಒಟ್ಟಾರೆ ವೆಚ್ಚದಲ್ಲಿ ೩.೫ಕೋಟಿಯಷ್ಟು ನೆರವನ್ನು ಸರ್ಕಾರದಿಂದ ಕೊಡುವ ಭರವಸೆಯನ್ನು ನೀಡಿದರು.
ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ವಿದ್ಯಾ,ಬುದ್ಧಿಗೆ ಮತ್ತು ದೇಶಸೇವೆಗೆ ಹೆಸರಾದ ಸಮಾಜ ದೈವಜ್ಞ ಸಮಾಜ ಶಿವಮೊಗ್ಗದ ಭೂಮಿ ಅನೇಕ ಸಾಧು ಸಂತರು ನೆಲೆಸಿದ ಪುಣ್ಯಭೂಮಿಯಾಗಿದ್ದು, ದೈವಜ್ಞ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀಗಳು ಶಾಖಾ ಮಠದ ನಿರ್ಮಾಣಕ್ಕೆ ಅಪೇಕ್ಷೆ ಪಟ್ಟಿದ್ದಾರೆ. ಸಮಾಜ ಹಾಗು ನಾವೆಲ್ಲರೂ ಸೇರಿ ಅವರ ಅಪೇಕ್ಷೆಯನ್ನು ಈಡೇರಿಸೋಣ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಸಮಾಜದವರಿಗು ಈಶ್ವರಪ್ಪನವರ ನೇತೃತ್ವದಲ್ಲಿ ಒಟ್ಟು ೨ ಸಾವಿರಕ್ಕೂ ಹೆಚ್ಚು ಸಮುದಾಯ ಭವನಗಳ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಬಂದು ೭೫ ವರ್ಷ ಆದರೂ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಒತ್ತು ನೀಡುವ ಕೆಲಸ ಆಗಿರಲಿಲ್ಲ. ಪ್ರಧಾನಿ ಮೋದಿಯವರ ಪ್ರಥಮ ಆದ್ಯತೆ ಆರೋಗ್ಯ ಮತ್ತು ಶಿಕ್ಷಣ ಇವೆರೆಡು ಮನುಷ್ಯನಿಗೆ ಲಭ್ಯವಾದರೆ ಆತ ಬೇರೆ ವಿಚಾರಗಳಲ್ಲೂ ಸಾಧನೆ ಮಾಡಬಹುದು. ಎಲ್ಲವನ್ನು ಸರ್ಕಾರ ಒಂದೇ ಮಾಡಲಾಗುವುದಿಲ್ಲ. ಸಮಾಜಗಳು ಕೈಜೋಡಿಸಬೇಕು. ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿ ಉಳಿಸಲು ಮಠ ಮಂದಿರಗಳ ಅವಶ್ಯಕತೆಯಿದ್ದು, ಅದಕ್ಕೆ ಸಹಕಾರ ನೀಡುವುದು ನಮ್ಮ ಕರ್ತವ್ಯ. ಇವತ್ತಿನ ಯುವಪೀಳಿಗೆ ಪೋಷಕರ ಮಾತನ್ನು ಕೇಳುವುದಿಲ್ಲ. ನಮ್ಮ ಹಿರಿಯರು ನಮಗೆ ಏಟುಕೊಟ್ಟು ತಿದ್ದಿತೀಡಿದ ಕಾರಣಕ್ಕೆ ನಾವು ಇವತ್ತು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದೇವೆ. ಯುವ ಶಕ್ತಿ ಇದನ್ನು ಅರಿತು ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಸಮಾಜಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಸಮಾರಂಭದ ಸಾನಿಧ್ಯವನ್ನು ದೈವಜ್ಞ ಬ್ರಾಹ್ಮಣ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸ್ಬೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಪಾಲಿಕೆ ಮಹಾಪೌರರಾದ ಶಿವಕುಮಾರ್, ಮಹಾ ನಗರ ಪಾಲಿಕೆ ಸದಸ್ಯರಾದ ಭಾನುಮತಿ ವಿನೋದ್‌ಕುಮಾರ್ ಶೇಟ್, ಲತಾ ಗಣೇಶ್, ಸಮಾಜದ ಅಧ್ಯಕ್ಷರಾದ ಎಸ್.ಡಿ.ಕಮಲಾಕ್ಷ, ಕಾರ್ಯದರ್ಶಿ ಪಾಂಡುರಂಗ ಶೇಟ್, ಸಹ ಕಾರ್ಯದರ್ಶಿ ಆರ್.ಗಿರೀಶ್, ಮಾಜಿ ಅಧ್ಯಕ್ಷರಾದ ಬಿಳಕಿ ಕೃಷ್ಣಮೂರ್ತಿ, ಯು.ಗಣೇಶ್‌ಶೇಟ್, ಪ್ರತಿಮಾ ಡಿ. ಶೇಟ್, ಹೆಚ್.ಡಿ.ಚಂದ್ರಹಾಸ, ಸಿ.ಪ್ರಕಾಶ್, ಡಿ.ವಿ.ಸದಾನಂದ, ಕೆ.ರಾಘವೇಂದ್ರ ಮತ್ತಿತರರಿದ್ದರು.