ಶಿವಮೊಗ್ಗ, ಸೆ.17:
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರವಲಯದ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ 96.50ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಮೂರು ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತಾಡುತ್ತಾ
ಶಿವಮೊಗ್ಗ ಮಹಾನಗರ ಪಾಲಿಕೆ ಹೊರವಲಯದ 13ಪ್ರದೇಶಗಳಲ್ಲಿ ಸುಮಾರು 325ಕಿಮೀ ವಿತರಣಾ ಕೊಳವೆ ಮಾರ್ಗ ಮತ್ತು 11ಸಾವಿರ ಗೃಹ ಸಂಪರ್ಕ ಕಲ್ಪಿಸಲು 96.50ಕೋಟಿ ರೂ. ಅಂದಾಜು ಯೋಜನೆಗೆ ಮಂಡಳಿ ಅನುಮೋದನೆ ನೀಡಿದ್ದು, ಹಣಕಾಸು ಇಲಾಖೆ ಸಹ ಅಂಗೀಕಾರ ನೀಡಿದೆ. ಇದೇ ರೀತಿ ವಿರೂಪನಕೊಪ್ಪಕ್ಕೆ ಸೋಮಿನಕೊಪ್ಪದಿಂದ ಪೈಪ್‍ಲೈನ್ ಅಳವಡಿಸುವ 70ಲಕ್ಷ ರೂ. ಪ್ರಸ್ತಾವನೆಗೆ ಹಾಗೂ ಗೋವಿಂದಪುರ-ಗೋಪಿಶೆಟ್ಟಿಕೊಪ್ಪಕ್ಕೆ ತುಂಗಾ ನದಿಯಿಂದ ಸುಮಾರು 10ಕಿಮೀ ಪೈಪ್‍ಲೈನ್ ಮೂಲಕ ನೀರು ಪೂರೈಕೆ ಮಾಡುವ 12ಕೋಟಿ ರೂ. ಪ್ರಸ್ತಾವನೆಗೂ ಆದಷ್ಟು ಬೇಗನೇ ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು.

ಸಚಿವರಿಂದ ಪ್ರಸ್ತಾವನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಶಿವಮೊಗ್ಗ ಹೊರ ವಲಯದ ಕುವೆಂಪು ನಗರ, ಬೊಮ್ಮನಕಟ್ಟೆ, ಮಲವಗೊಪ್ಪ, ಪುರಲೆ, ಶಾಂತಿನಗರ ವಾದಿಹುದಾ, ವೆಂಕಟೇಶ ನಗರ, ತಾವರೆಚಟ್ನಳ್ಳಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಸೋಮಿನಕೊಪ್ಪ, ಮಲ್ಲಿಗೇನಹಳ್ಳಿ ಸೇರಿದಂತೆ 13 ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು. ಇದೇ ರೀತಿ ಈ ಪ್ರದೇಶಗಳಲ್ಲಿ ಒಳಚರಂಡಿ ನಿರ್ಮಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲು ಅನುಮೋದನೆ ನೀಡಬೇಕು ಎಂದು ಹೇಳಿದರು.

ಕಾಮಗಾರಿ ಪೂರ್ಣಗೊಳಿಸಲು ಗಡುವು
ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಕಾಮಗಾರಿಗಳನ್ನು ಮುಂದಿನ ಸೆಪ್ಟಂಬರ್ ಒಳಗಾಗಿ ಪೂರ್ಣಗೊಳಿಸಬೇಕು. 124ಕೋಟಿ ರೂ. ವೆಚ್ಚದಲ್ಲಿ 466ಕಿಮೀ ಉದ್ದದ ಪೈಪ್‍ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಆಗಸ್ಟ್ ನಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಮುಂದಿನ ಸೆಪ್ಟಂಬರ್ ಒಳಗಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮಂಡಳಿಯ ಕಾಮಗಾರಿಗಳ ಅನುಷ್ಟಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್ ನೇಮಕಕ್ಕೆ ಅನುಮತಿ ನೀಡಲಾಗುವುದು ಎಂದು ರಾಜುಗೌಡ ಅವರು ಹೇಳಿದರು.
ಒಳಚರಂಡಿ ಕಾಮಗಾರಿ: ನಗರದಲ್ಲಿ ಕೈಗೊಳ್ಳಲಾಗಿರುವ 222ಕಿಮೀ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಪೈಕಿ 190ಕಿಮೀ ಪೂರ್ಣಗೊಂಡಿದೆ. ಇನ್ನುಳಿದ 32ಕಿಮೀ ಕಾಮಗಾರಿಯನ್ನು ಸಹ ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಈಗಾಗಲೇ ಒಳಚರಂಡಿ ನಿರ್ಮಾಣವಾಗಿರುವ ಪ್ರದೇಶಗಳಲ್ಲಿ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಂಪರ್ಕ ಕಡಿತ ಎಚ್ಚರಿಕೆ: ಮನೆಗಳಿಗೆ ಸಂಪರ್ಕ ಪಡೆಯುವುದು ಮನೆಯವರ ಜವಾಬ್ದಾರಿ. ಮಹಾನಗರ ಪಾಲಿಕೆಗೆ 300ರೂ. ಶುಲ್ಕ ಪಾವತಿಸಿ ಸಂಪರ್ಕವನ್ನು ಮನೆಯವರು ಕಲ್ಪಿಸಿಕೊಳ್ಳಬೇಕು. ಮುಂದಿನ ಒಂದು ತಿಂಗಳ ಒಳಗಾಗಿ ಸಂಪರ್ಕ ಪಡೆಯಲು ವಿಫಲರಾಗುವ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ನಾಗರಿಕರಿಗೆ ಮಾಹಿತಿಯನ್ನು ನೀಡುವಂತೆ ಸಚಿವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆ ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಆಯುಕ್ತ ಚಿದಾನಂದ ವಟಾರೆ, ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!