: ತಮ್ಮ ಕುಟುಂಬ ಅನುಭವಿಸುತ್ತಿರುವ ಸಂಕಷ್ಟಕ್ಕೆ ಆಡಳಿತ ಸ್ಪಂದಿಸದೆ ಇರುವುದರಿಂದ ನಾವು ಬದುಕುವುದು ಕಷ್ಟ ಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು ತಮಗೆ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ಚನ್ನಗೊಂಡ ಗ್ರಾಮ ಪಂಚಾಯ್ತಿ ವಯಾಪ್ತಿಯ ಗುಂಡೋಡಿ ಗ್ರಾಮದ ಧರ್ಮಪ್ಪ ಬಿನ್ ಬೀರಾನಾಯ್ಕ ಕುಟುಂಬ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದೆ.
ಕಳೆದ ೨೫ ವರ್ಷಗಳಿಂದ ಆಸ್ತಿ ವಿಚಾರವಾಗಿ ನನ್ನ ಸಹೋದರ ನಾರಾಯಣಪ್ಪ ಗುಂಡೋಡಿ, ಆತನ ಹೆಂಡತಿ ರುಕ್ಮಿಣಿ, ಮಕ್ಕಳಾದ ಭಾಸ್ಕರ್ ಎನ್.ಜಿ., ಕೃಷ್ಣ ಮತ್ತಿತರರು ನಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ತಮಗೆ ರಕ್ಷಣೆ ನೀಡುವಂತೆ ಕಂದಾಯ ಇಲಾಖೆ ಮತ್ತು ಕಾರ್ಗಲ್ ಪೊಲೀಸ್ ಠಾಣೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಕುಟುಂಬಕ್ಕೆ ಅನ್ಯಾಯವಾಗುತ್ತಿದ್ದರೂ ನಮ್ಮ ರಕ್ಷಣೆಗೆ ಸರ್ಕಾರವಾಗಲೀ, ಸ್ಥಳೀಯ ಗ್ರಾಮ ಪಂಚಾಯ್ತಿಯಾಗಲಿ, ಸಂಘಸಂಸ್ಥೆಗಳು, ಗ್ರಾಮಸ್ಥರು ಬರುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನನ್ನ ಸಹೋದರ ನಾರಾಯಣಪ್ಪ ಮತ್ತವರ ಕುಟುಂಬ ಅತ್ಯಂತ ಕ್ರೂರಿಗಳಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ನಮಗೆ ಬದುಕುವ ಆಸೆಯೆ ಹೊರಟು ಹೋಗಿದೆ. ನನ್ನ ತಂದೆಯನ್ನು ಹೊಡೆದು ಕೊಂದಿದ್ದಾರೆ. ತಂದೆಯ ಸಾವಿನಿಂದ ಕೊರಗಿ ನನ್ನ ತಾಯಿಯೂ ಸತ್ತು ಹೋಗಿದ್ದಾರೆ. ಈಗ ವಿದ್ಯಾಭ್ಯಾಸ ಮಾಡುತ್ತಿರುವ ಮೂವರು ಮಕ್ಕಳು ಸಹ ದೌರ್ಜನ್ಯದಿಂದ ನಲುಗಿ ಹೋಗಿದ್ದಾರೆ.
ಎಲ್ಲಿಯೂ ನ್ಯಾಯ ಸಿಗದ ನಮಗೆ ನ್ಯಾಯೋಚಿತವಾಗಿ ದಯಾಮರಣ ನೀಡಿ ನಮ್ಮ ಕುಟುಂಬವನ್ನು ಹಿಂಸೆಯಿಂದ ಮುಕ್ತಗೊಳಿಸಿ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬುದ್ದಿ ಹೇಳಿದ ಉಪವಿಭಾಗಾಧಿಕಾರಿಗಳು : ಮನವಿ ಸ್ವೀಕರಿಸಲು ನಿರಾಕರಿಸಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಎಲ್ಲದ್ದಕ್ಕೂ ಸಾವು ಅಂತಿಮವಲ್ಲ. ನಿಮ್ಮ ಸಮಸ್ಯೆಯನ್ನು ಕೇಳಿದ್ದೇನೆ. ಸ್ಥಳೀಯ ಅಧಿಕಾರಿಗಳಿಗೆ ತಕ್ಷಣ ನಿಮ್ಮ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ ಎಂದು ಕುಟುಂಬಕ್ಕೆ ಮನವರಿಕೆ ಮಾಡಿದರು.ಮನವಿ ಸಲ್ಲಿಕೆ ಸಂದರ್ಭದಲ್ಲಿ ಧರ್ಮಪ್ಪ, ಪದ್ಮಾವತಿ, ಜಗದೀಶ್ ಹಾಜರಿದ್ದರು.