ಸಾಗರ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದುತ್ವ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬಿಜೆಪಿ ನಗರ ಘಟಕ ಮತ್ತು ಯುವ ಮೋರ್ಚಾ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಹಿಂದೂ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಸತೀಶ್ ಜಾರಕಿಹೊಳಿ ಮಾತನಾಡಿರುವ ಕ್ರಮ ಖಂಡನೀಯ. ಯಾವುದೇ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಹಿಂದೂ ಶಬ್ದ ಅಸಭ್ಯ ಮತ್ತು ಅಶ್ಲೀಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಈ ರೀತಿಯ ಅನರ್ಥವನ್ನು ಹೇಳಿದ ನಿಘಂಟು ಯಾವುದು ಎನ್ನುವುದನ್ನು ಸತೀಶ್ ಜಾರಕಿಹೊಳಿ ಬಹಿರಂಗ ಪಡಿಸಬೇಕು. ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೇಸ್ ಸಂಸ್ಕೃತಿ ಏನು ಎನ್ನುವುದು ಜಗಜ್ಜಾಹೀರವಾಗಿದೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಸಮಸ್ತ ಹಿಂದೂ ಬಾಂಧವರು ಒಕ್ಕೊರಲಿನಿಂದ ಖಂಡಿಸಬೇಕು ಎಂದರು.

ನಗರಸಭೆ ಉಪಾಧ್ಯಕ್ಷ ವಿ.ಮಹೇಶ್ ಮಾತನಾಡಿ, ನೀವು ಭಾರತ ದೇಶದಲ್ಲಿದ್ದು ಹಿಂದೂ ಸಂಸ್ಕೃತಿಯನ್ನು ಇಷ್ಟು ವರ್ಷಗಳ ಕಾಲ ಅನುಸರಿಸಿ ಈಗ ಅದೇ ಧರ್ಮದ ಕುರಿತು ಅವಹೇಳನೆ ಮಾಡಿರುವುದು ನಿಮ್ಮ ಸಣ್ಣತನಕ್ಕೆ ಸಾಕ್ಷಿಯಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ನೈತಿಕತೆ ಇದ್ದರೆ ತಕ್ಷಣ ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ. ರಣ್ದೀಪ್ ಸುರಜೆವಾಲ ಕೇವಲ ತೋರುಗಾಣಿಕೆಗೆ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದಂತೆ ಕಾಣುತ್ತಿದೆ.

ಕಾಂಗ್ರೇಸ್ ಪಕ್ಷಕ್ಕೆ ತಾಕತ್ತಿದ್ದರೆ ಸತೀಶ್ ಜಾರಕಿಹೊಳಿ ಅವರನ್ನು ತಕ್ಷಣ ಪಕ್ಷದಿಂದ ಅಮಾನತ್ತು ಮಾಡಲಿ ಎಂದು ಒತ್ತಾಯಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ಮಾತನಾಡಿ, ಹಿಂದೂ ಪದಕ್ಕೆ ಅಶ್ಲೀಲ ಅರ್ಥವಿದೆ ಎಂದು ಹೇಳಿರುವ ಸತೀಶ್ ಜಾರಕಿಹೊಳಿ ಹೇಳಿಕೆ ಕಾಂಗ್ರೇಸ್ ಮಾನಸಿಕತೆಗೆ ಸಾಕ್ಷಿಯಾಗಿದೆ. ಸತೀಶ್ ಜಾರಕಿಹೊಳಿ ನಾಸ್ತಿಕವಾದಿ. ಹಿಂದೂಗಳನ್ನು ಅವಮಾನಿಸುವುದೇ ಕಾಂಗ್ರೇಸ್ನ ಅಜೆಂಡವಾಗಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುವ ಮೊದಲು ಭಾರತದ ನೆಲಕ್ಕೆ ಕಾಲಿಟ್ಟರೆ ಅಸಹ್ಯ ಎನ್ನುವ

ಪಾದ್ರಿಯನ್ನು ಭೇಟಿಯಾಗಿದ್ದರು. ಖ.ಕೆ.ಶಿವಕುಮಾರ್ ನಾವು ಅಧಿಕಾರಕ್ಕೆ ಬಂದರೆ ಗೋಹತ್ಯೆ ಮತ್ತು ಮತಾಂತರ ನಿಷೇದ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎನ್ನುತ್ತಾರೆ. ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಪ್ರೋತ್ಸಾಹಿಸಿಕೊಂಡು ಬಂದವರು. ಕಾಂಗ್ರೇಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಸತೀಶ್ ಜಾರಕಿಹೊಳಿ ಅವರನ್ನು ಅಮಾನತ್ತು ಮಾಡಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಯುವ ಮೋರ್ಚಾ ಅಧ್ಯಕ್ಷ ಶ್ರೀರಾಮ್, ಪ್ರಮುಖರಾದ ಸಂತೋಷ್ ಶೇಟ್, ಸತೀಶ್ ಕೆ., ಸವಿತಾ ವಾಸು, ಭಾವನಾ ಸಂತೋಷ್, ಆರ್.ಶ್ರೀನಿವಾಸ್, ಡಿ. ತುಕಾರಾಮ್, ಪ್ರದೀಪ್, ವಿನೋದ್ ರಾಜ್, ಪರಶುರಾಮ್ ಇನ್ನಿತರರು ಹಾಜರಿದ್ದರು.