ಶಿವಮೊಗ್ಗ,ಸೆ.14:
ತಮ್ಮ ಬೇಡಿಕೆಗಳು ಈಡೇರದಿದ್ದರೆ ಆರೋಗ್ಯ ಸೇವೆ ಸ್ಥಗಿತಗೊಳಿಸುವುದಾಗಿ ಸರ್ಕಾರಿ ವೈದ್ಯಾಧಿಕಾರಿಗಳು ಇಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಇಂದು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದ ವೈದ್ಯಾಧಿಕಾರಿಗಳ ಸಂಘ, ಕಳೆದ 2 ತಿಂಗಳಿನಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲಾಗಿದೆ. ಆಗಸ್ಟ್ 15ರೊಳಗೆ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರಕ್ಕೆ ತಿಳಿಸಲಾಗಿತ್ತು. ಆದರೆ ಇದುವರೆಗೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಆದ್ದರಿಂದ ಇಂದಿನಿಂದ ಇಲಾಖೆ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಸರ್ಕಾರ ನೀಡುತ್ತಿರುವ ವರದಿಗಳನ್ನು ಸ್ಥಗಿತಗೊಳಿಸಿ ಆರೋಗ್ಯ ಸೇವೆ ಮಾತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಸೆ.21 ರಿಂದ ತುರ್ತು ಸೇವೆ ಮತ್ತು ಕೋವಿಡ್ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಬೆಂಗಳೂರು ಚಲೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಗುಡದಪ್ಪ ಕಸಬಿ, ಕಾರ್ಯದರ್ಶಿ ಡಾ.ನಾಗರಾಜ್ ನಾಯ್ಕ ಎಲ್, ಡಾ.ಜಿ.ಸಿ.ದಿನೇಶ್, ಡಾ.ಸುರೇಶ್, ಡಾ.ನಟರಾಜ್ ಕೆ.ಎಸ್, ಡಾ.ಚಂದ್ರಶೇಖರ್ ಜಿ.ಬಿ. ಸೇರಿದಂತೆ ಹಲವರಿದ್ದರು.