ಸಾಂದರ್ಭಿಕ ಚಿತ್ರ
ಶಿವಮೊಗ್ಗ, ನ.08: ಇಂದು ಸಂಜೆ ಪಾರ್ಶ್ವ ಚಂದ್ರಗ್ರಹಣದ ಚಂದ್ರನನ್ನು ಬರಿಗಣ್ಣಿನಿಂದ ನೋಡಬಹುದು. ಯಾವುದೇ ಸಮಸ್ಯೆ ಇಲ್ಲ. ಕೆಂಪು ಬಣ್ಣದ ಚಂದ್ರನನ್ನು ಈ ಚಂದ್ರಗ್ರಹಣದ ಸಮಯದಲ್ಲಿ ವೀಕ್ಷಿಸಬಹುದಾಗಿದೆ ಎಂದು ಬಸಪ್ಪಗೌಡ ಮಲ್ಲಪ್ಪ ಗೌಡ ಸ್ಮಾರಕ ಪ್ರೌಢಶಾಲೆ ಹಿರಿಯೂರಿನ ಮುಖ್ಯ ಶಿಕ್ಷಕ ಹಾಗೂ ಖಗೋಳ ವಿಜ್ಞಾನದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಸೂರ್ಯಗ್ರಹಣ ಚಂದ್ರ ಗ್ರಹಣದ ಬಗ್ಗೆ ಮಾಹಿತಿ ನೀಡುತ್ತಾ ಹಾಗೆಯೇ ಅದನ್ನು ವೀಕ್ಷಿಸುವ ಅವಕಾಶ ನೀಡುತ್ತಿರುವಂತಹ ಹರೋನಹಳ್ಳಿ ಸ್ವಾಮಿ ಅವರು ತಿಳಿಸಿದ್ದಾರೆ. ತುಂಗಾತರಂಗ ಪತ್ರಿಕೆ ಜೊತೆ ಮಾತನಾಡಿದ ಅವರು ಇತ್ತೀಚೆಗೆ ತಾನೇ ಪಾರ್ಶ್ವ ಸೂರ್ಯಗ್ರಹಣವನ್ನು ಕಂಡಿದ್ದ ನಾವು ಇಂದು ಪಾರ್ಶ್ವ ಚಂದ್ರಗ್ರಹಣವನ್ನು ಇಂದು ಸಂಜೆ 5 .59ರಿಂದ 6.18ರವರೆಗೆ ವೀಕ್ಷಿಸುವ ಅವಕಾಶ ದೊರಕಿರುವುದು ಸಂತಸದ ವಿಷಯ ಎಂದಿದ್ದಾರೆ.

ನಿಸರ್ಗದ ಚಲನೆಯ ಈ ನೆರಳು ಬೆಳಕಿನ ಆಟದ ವಿಸ್ಮಯವನ್ನು ನೋಡುವ ಅವಕಾಶ ದಕ್ಷಿಣ ಭಾರತೀಯರಿಗೆ ದೊರೆತಿದ್ದು ಪಾರ್ಶ್ವ ಚಂದ್ರ ಗ್ರಹಣವನ್ನು ಅತ್ಯಂತ ಸುಲಲಿತವಾಗಿ ಸುಲಭವಾಗಿ ನಾವು ವೀಕ್ಷಿಸಬಹುದಾಗಿದೆ.

ಇಂದು ಹುಣ್ಣಿಮೆ. ಈ ಸಂದರ್ಭದಲ್ಲಿ ಕೆಂಪು ಬಣ್ಣದ ಚಂದ್ರ ನಮಗೆ ಗೋಚರಿಸುತ್ತದೆ. ವಕ್ರೀಭವನದ ಕಾರಣ ಕೆಂಪು ಬಣ್ಣ ನಮ್ಮ ಕಣ್ಣಿಗೆ ತಲುಪುತ್ತದೆ. ಚಂದ್ರನಲ್ಲಿ ಕೆಂಪು ಬಣ್ಣ ಹೆಚ್ಚಾಗಿ ಕಂಡುಬಂದರೆ ಧೂಳಿನ ಮಾಲಿನ್ಯ ಹೆಚ್ಚಾಗಿರುತ್ತದೆ ಎಂದು ಅರ್ಥ. ಬರಿಗಣ್ಣಿನಿಂದ ಈ ಚಂದ್ರನನ್ನು ವೀಕ್ಷಿಸಬಹುದಾಗಿದೆ. ಯಾವುದೇ ತೊಂದರೆಗಳಿಲ್ಲ ಎಂದು ಹರೋನಹಳ್ಳಿ ಸ್ವಾಮಿ ತಿಳಿಸಿದ್ದಾರೆ.

ಹಿರಿಯೂರಿನಲ್ಲಿ ಚಂದ್ರ ಗ್ರಹಣ ವೀಕ್ಷಣೆಗೆ ಅವಕಾಶ ಟೆಲಿಸ್ಕೋಪ್ ಮೂಲಕ ಇಂದು ಸಂಜೆ ಭದ್ರಾವತಿ ತಾ. ಹಿರಿಯೂರಿನ ರಂಗಮಂದಿರದಲ್ಲಿ ಚಂದ್ರ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಗ್ರಹಣ ಜೊತೆ ಗುರು ಶನಿ ಗ್ರಹಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.