ಬೆಂಗಳೂರು: ಕರುನಾಡಿನ ಅಪ್ಪು, ಪವರ್ ಸ್ಟಾರ್ ದಿ.ಡಾ. ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯ ಸ್ಮರಣೆ ಇಂದು ನಡೆಯುತ್ತಿದ್ದು, ಡಾ.ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದರು.
ಪುನೀತ್ ಗತಿಸಿ ಇಂದಿಗೆ ಸರಿಯಾಗಿ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಡಾ.ರಾಜ್ ಕುಟುಂಬಸ್ಥರು ಹಾಗೂ ಬಂಧುಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿ ಮೊದಲು ರಾಜ್ ಆನಂತರ ಪಾರ್ವತಮ್ಮ ಸಮಾಧಿಗೆ ಪೂಜೆ ಸಲ್ಲಿಸಿದರು. ಆನಂತರ ಪುನೀತ್ ರಾಜಕುಮಾರ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪುನೀತ್’ಗೆ ಇಷ್ಟವಾದ ಆಹಾರಗಳನ್ನು ಇರಿಸಿ, ಜ್ಯೋತಿ ಬೆಳಗಿ, ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿ, ನಮನ ಸಲ್ಲಿಸಿದರು.
ಸಮಾಧಿಗೆ ಪೂಜೆ ಸಲ್ಲಿಸುವ ವೇಳೆ ಭಾವುಕರಾದ ಅಪ್ಪು ಪತ್ನಿ ಅಶ್ವಿನಿ ಪತಿಯನ್ನು ನೆನೆದು ಕಣ್ಣೀರು ಸುರಿಸಿದರು. ಮಾತ್ರವಲ್ಲ ಇಡಿಯ ರಾಜ್ ಕುಟುಂಬ ಅಪ್ಪು ನೆನೆದು ದುಃಖಿಸುತ್ತಿದ್ದ ರೀತಿ ಕರುಳು ಹಿಂಡುವಂತಿತ್ತು.
ರಾಘವೇಂದ್ರ ರಾಜಕುಮಾರ್, ಡಾ.ಶಿವರಾಜ ಕುಮಾರ್ ಸೇರಿದಂತೆ ರಾಜ್ ಕುಟುಂಬಸ್ಥದ ಎಲ್ಲ ಸದಸ್ಯರು, ಅವರ ನೆಂಟರುಗಳು ಈ ಸಂದರ್ಭದಲ್ಲಿ ಇದ್ದರು.
ಡಾ.ರಾಜ್ ಕುಟುಂಬಸ್ಥರಿಂದ 2 ಲಕ್ಷ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೊದಲ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ 2 ಲಕ್ಷ ಅಭಿಮಾನಿಗಳಿಗೆ ಡಾ.ರಾಜ್ ಕುಟುಂಬಸ್ಥರಿಂದ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.
ಅಪ್ಪು ಅಗಲಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯ ಮೂಲೆ ಮೂಲೆಗಳಿಂದ ಅಪ್ಪು ಸಮಾಧಿ ದರ್ಶಣಕ್ಕೆ ಲಕ್ಷಾಂತರ ಮಂದಿ ನಿನ್ನೆ ರಾತ್ರಿಯಿಂದಲೇ ಆಗಮಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋ ಬಳಿಯಲ್ಲಿ ಲಕ್ಷಾಂತರ ಮಂದಿ ಸಾಲುಗಟ್ಟಿ ನಿಂತಿದ್ದು, ಒಂದು ರೀತಿಯ ಜಾತ್ರೆಗೆ ವಾತಾವರಣ ಅಲ್ಲಿ ನಿರ್ಮಾಣವಾಗಿದೆ.
ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿರುವ ಡಾ.ರಾಜ್ ಕುಟುಂಬಸ್ಥರು ಈ ಸಂದರ್ಭದಲ್ಲಿ 2 ಲಕ್ಷ ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ನಿನ್ನೆಯಿಂದಲೇ ನೂರಾರು ಮಂದಿ ಅಡುಗೆ ಭಟ್ಟರು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆಯಿಂದಲೇ ಅನ್ನದಾನ ಆರಂಭವಾಗಿದೆ.