ಶಿವಮೊಗ್ಗ,ಅ.೨೭:
ಇಲ್ಲಿನ ಸಿಟಿ ಕೋ ಅಪರೇಟಿವ್ ಬ್ಯಾಂಕಿನ ಶಾಖಾ ಕಚೇರಿಯ ನೂತನ ಕಟ್ಟಡದ ನಿರ್ಮಾಣದ ಗುದ್ದಲಿ ಪೂಜೆ ಸಮಾರಂಭವನ್ನು ಅ.೨೮ರ ನಾಳೆ ಬೆಳಿಗ್ಗೆ ೯.೩೦ಕ್ಕೆ ದುರ್ಗಿಗುಡಿಯ ಎಲ್‌ಎಲ್‌ಆರ್ ರಸ್ತೆಯ ಜಾಗದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಉಮಾಶಂಕರ ಉಪಾಧ್ಯ ತಿಳಿಸಿದರು.
ಅವರು ಇಂದು ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಉಪ ಮುಖ್ಯಮಂತ್ರಿಗಳು, ಶಾಸಕರಾದ ಕೆ.ಎಸ್. ಈಶ್ವರಪ್ಪ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದರು.
ಕಟ್ಟಡ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿ ಯಪ್ಪ ಮಾತನಾಡಿ, ಶಾಖಾ ಕಚೇರಿಯು ನಗರದಲ್ಲಿ ೧೯೭೪ರಿಂದ ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೂ ಬಾಡಿಕೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಎ ವೃತ್ತದಲ್ಲಿರುವ ಕೆ.ಎಸ್.ನಾರಾಯಣ ಶೆಟ್ಟಿ ಕಟ್ಟಡದಲ್ಲಿ. ಬಾಡಿಗೆ ನೀಡಲಾಗುತ್ತಿದೆ. ಬಾಡಿಗೆಯನ್ನು ಉಳಿಸುವ ಸಲುವಾಗಿ ಹಾಗೂ ಸ್ವಂತ ಶಾಖಾ ಕಟ್ಟಡ ಹೊಂದಲು ನಿವೇಶನವನ್ನು ಖರೀದಿಸಲು ಆಡಳಿತ ಮಂಡಳಿಯಲ್ಲಿ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಮ್ಮತಿ ಪಡೆದು ಎಲ್‌ಎಲ್‌ಆರ್ ರಸ್ತೆಯಲ್ಲಿ ೨.೦೩ ಕೋ.ರೂ. ವೆಚ್ಚದಲ್ಲಿ ೨೨೨೪ ಚದರ ಅಡ್ಡಿ ಜಾಗವನ್ನು ಖರೀದಿಸಲಾಗಿದೆ ಎಂದರು.
ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಸೂಡಾ ಹಾಗೂ ಪಾಲಿಕೆಯಿಂದ ಪರವಾನಿಗೆ ಪಡೆಯಲಾಗಿದೆ. ಈ ಕಟ್ಟಡವು ೮ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆ.ರಂಗನಾಥ್, ಖಜಾಂಚಿ ಉಮೇಶ್ ಪುಟ್ಟಪ್ಪ, ನಿರ್ದೇಶಕರಾದ ಎಂ.ಕೆ.ಸುರೇಶ್ ಕುಮಾರ್, ಸಿ. ಹೊನ್ನಪ್ಪ, ಜಿ.ರಾಜು, ಎಂ.ರಾಕೇಶ್, ರೇಖಾ ಚಂದ್ರ ಶೇಖರ್, ರುಕ್ಮಿಣಿ ವೇದವ್ಯಾಸ್, ಎಸ್.ಕೆ. ರಘು ಕೃಷ್ಣಸಿಂಗ್, ಕೆ.ಆರ್.ಸೀತಾರಾಮನಾಯಕ ಇದ್ದರು.