ಎಲೆಚುಕ್ಕೆ ರೋಗಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೇಂದ್ರದ ನುರಿತ ವಿಜ್ಞಾನಿಗಳ ಸಿಪಿಸಿಆರ್ಐ ತಂಡ ಮಲೆನಾಡು ಪ್ರದೇಶಕ್ಕೆ ಆಗಮಿಸಲಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಂಡವು ಮಲೆನಾಡು ಪ್ರದೇಶದ ಅಡಿಕೆ ಎಲೆಚುಕ್ಕಿ ರೋಗ ಸೇರಿದಂತೆ ವಿವಿಧ ಕಾಯಿಲೆ ಬಗ್ಗೆ ಪರಿಶೀಲನೆ ನಡೆಸಿ, ಅಲ್ಪಾವಧಿ ಮತ್ತು ಶಾಶ್ವತ ಪರಿಹಾರ ಕುರಿತು ಸಂಶೋಧನೆ ಕೈಗೊಳ್ಳಲಿದೆ ಎಂದರು.
ಸೋಮವಾರ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಕೃಷ್ಣ ಭಟ್ ಅವರ ನೇತೃತ್ವದ ನಿಯೋಗ ಕೇಂದ್ರದ ಕೃಷಿ ಸಚಿವರನ್ನು ಭೇಟಿಯಾಗಿ ಅಡಿಕೆ ಎಲೆಚುಕ್ಕಿ ರೋಗದಿಂದ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟವನ್ನು ತಿಳಿಸಲಾಗಿತ್ತು. ಇದಕ್ಕೆ ಕೇಂದ್ರ ಸಚಿವರು ತಕ್ಷಣ ಸ್ಪಂದಿಸಿ, ವಿಜ್ಞಾನಿಗಳ ತಂಡ ಕಳಿಸಲು ಆದೇಶ ಮಾಡಿದ್ದಾರೆ. ಕೇಂದ್ರ ಸಚಿವ ಶೋಭಾ ಕರಾಂದ್ಲಾಜೆ ಸಹ ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗದಿಂದ ಅಡಿಕೆ ತೋಟ ನಾಶವಾಗುತ್ತಿರುವ ಮಾಹಿತಿ ಸಚಿವರ ಗಮನಕ್ಕೆ ತಂದಿದ್ದರು. ಒಟ್ಟಾರೆ ಯಡಿಯೂರಪ್ಪ ನೇತೃತ್ವದಲ್ಲಿ ಹೋಗಿದ್ದ ನಮ್ಮ ನಿಯೋಗದ ಬೇಡಿಕೆಗೆ ಕೇಂದ್ರ ಸಚಿವರು ಸ್ಪಂದಿಸಿದ್ದಾರೆ ಎಂದು ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿದ್ದ ಜಮೀನಿನ ಡಿನೋಟಿಫಿಕೇಶನ್ ರದ್ದು ಮಾಡಿರುವುದರ ಬಗ್ಗೆ ಕೇಂದ್ರ ಅರಣ್ಯ ಸಚಿವರ ಗಮನ ಸೆಳೆಯಲಾಗಿದೆ. ರಾಜ್ಯದಿಂದ ಬರುವ ಪ್ರಸ್ತಾವನೆಯನ್ನು ತಕ್ಷಣ ಅಂಗೀಕರಿಸಿ, ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಅದಕ್ಕೆ ಸಚಿವರು ಪೂಕರವಾಗಿ ಸ್ಪಂದಿಸಿದ್ದಾರೆ. ಹಿಂದಿನ ಸರ್ಕಾರಗಳು ಕೇಂದ್ರದ ಒಪ್ಪಿಗೆ ಪಡೆಯದೆ ಡಿನೋಟಿಫೀಕೇಶನ್ ಮಾಡಿದ್ದು ಪ್ರಸ್ತುತ ಸಮಸ್ಯೆಗೆ ಕಾರಣವಾಗಿದ್ದು, ನ್ಯಾಯಾಲಯ ಆದೇಶ ರದ್ದು ಮಾಡಿದೆ. ಕೇಂದ್ರದಿಂದ ಆದೇಶ ಪಡೆದಿದ್ದರೆ ಡಿನೋಟಿಫಿಕೇಶನ್ ರದ್ದು ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ಜಮೀನು ಕಳೆದುಕೊಳ್ಳುತ್ತೇವೆ ಎನ್ನುವ ಆತಂಕಪಡುವ ಅಗತ್ಯವಿಲ್ಲ. ನಾನು ಸಹ ಶರಾವತಿ ಮುಳುಗಡೆ ಸಂತ್ರಸ್ತರ ಕುಟುಂಬಕ್ಕೆ ಸೇರಿದವನು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಒದಗಿಸಲು ಒತ್ತಾಯಿಸಲಾಗುತ್ತದೆ. ಕೆಲವರು ವಿಷ ಕೊಡಿ ಎಂದು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರು ಅನೇಕ ವರ್ಷಗಳ ಕಾಲ ಸಂಕಷ್ಟದಲ್ಲಿಯೆ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರು ವಿಷ ಕುಡಿಯುಷ್ಟು ಸಣ್ಣ ಮನಸ್ಥಿತಿ ಹೊಂದಿಲ್ಲ. ಕೆಲವರು ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ತಮ್ಮ ಬಂಡವಾಳ ಮಾಡಿಕೊಂಡು, ಉರಿಯುವ ಮನೆಯ ಗಳ ಹಿರಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾನೂನಿನ ಜೊತೆ ಹೋರಾಟದ ಮೂಲಕವೂ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುತ್ತದೆ ಎಂದರು.
ಗೋಷ್ಟಿಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಚೇತನರಾಜ್ ಕಣ್ಣೂರು, ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಭಾವನಾ ಸಂತೋಷ್, ಆರ್.ಶ್ರೀನಿವಾಸ್, ಸತೀಶ್ ಕೆ., ಹು.ಭಾ.ಅಶೋಕ್, ರವೀಂದ್ರ ಬಿ.ಟಿ., ವಿನಾಯಕ ರಾವ್ ಇನ್ನಿತರರು ಹಾಜರಿದ್ದರು