ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ನಿಜಕ್ಕೂ ಬಡವರ ಪಾಲಿಗಷ್ಟೇ ಅಲ್ಲ ಎಲ್ಲರ ಪಾಲಿಗೆ ವರದಾನ. ಇತ್ತೀಚಿನ ದಿನಗಳಲ್ಲಿ ಸ್ವಚ್ಚತೆ ಹಾಗೂ ವೈದ್ಯರು, ಸಿಬ್ಬಂದಿಗಳ ಸೇವೆ ನಡುವೆ ಸಾಕಷ್ಟು ಜನರಿಗೆ ಆರೋಗ್ಯಮಾತೆಯಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಉತ್ತಮ ಆಡಳಿತಾತ್ಮಕ ನಿಲುವುಗಳಿದ್ದರೂ ಸಹ ಈ ಹೆರಿಗೆ, ಇತರೆ ಶಸ್ತ್ರ ಚಿಕಿತ್ಸಾ ವಾರ್ಡ್ಗಳಲ್ಲಿ ಕೆಲವೇ ಕೆಲವು ಎತ್ತುವಳಿ ಚೋರರಿಂದ ಮಾಡಿದ ಪ್ರಯತ್ನಗಳ ಫಲ ಹೊಳೆಯಲ್ಲಿ ಹುಣಸೇ ಹಣ್ಣು ಕಿವುಚಿದಂತಾಗುತ್ತಿರುವುದು ದುರಂತ…!
ಈ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ರೋಗಿಗಳಿಂದ ವಸೂಲಿ ಮಾಡುವ ಪರಿ ಬಡಜನರಿಗೆ ಕಂಟಕವಾಗಿದೆ. ಇಲ್ಲಿನ ಡಿ ದರ್ಜೆ ನೌಕರರೊಬ್ಬರು ರೋಗಿಗಳಿಂದ ಹಣ ಪಡೆದು ರಾಜಾರೋಷವಾಗಿ ಪೋಟೋಗೆ ಪೋಜು ನೀಡಿದ್ದನ್ನ ಗಮನಿಸಿದರೆ ಕೆಲವೇ ಕೆಲವು ಸಿಬ್ಬಂದಿಗಳು ಇಡೀ ಆಸ್ಪತ್ರೆಯ ಆಡಳಿತಾತ್ಮಕ ವ್ಯವಸ್ಥೆಯನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದಾರೆನ್ನಲಾಗಿದೆ. ಈ ಪೋಟೋ ಪ್ರಕರಣ ಮತ್ತು ಡಿ ದರ್ಜೆ ನೌಕರರ ಪ್ರತಿಭಟನೆ ಇಡೀ ಆಸ್ಪತ್ರೆ ಗೌರವಕ್ಕೆ ಚ್ಯುತಿ ತಂದಂತಿದೆ.
ಶಿವಮೊಗ್ಗದ ಹೆರಿಗೆ ವಾರ್ಡ್ ನಲ್ಲಿ ಹೆರಿಗೆಯಾದ ಮಹಿಳೆಯರ ಲಂಚ ಪಡೆದ ಪ್ರಕರಣದ ಪೋಟೋ ವೈರಲ್ ಆಗಿದ್ದು, ಇಲ್ಲಿ ಇಡೀ ಪ್ರಕರಣವನ್ನು ಕೂಲಂಕುಶವಾಗಿ ಪರಿಶೀಲಿಸಿದ ಆಸ್ಪತ್ರೆಯ ಮುಖ್ಯ ಅಧೀಕ್ಷಕರಾದ ಡಾ. ಶ್ರೀಧರ್ ಅಲ್ಲಿನ ನೌಕರರಿಗೆ ಚನ್ನಾಗಿ ಚಾರ್ಜ್ ತಗೆದುಕೊಂಡಿದ್ದಾರೆ. ಬಡ ರೋಗಿಗಳಿಂದ ವಸೂಲಿ ದೂರುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಈಗ ಉಲ್ಟಾ ಹೊಡೆಯುವಂತೆ ಮಾಡಿರುವ ಕೆಲ ಸಿಬ್ಬಂದಿಗಳು ಶ್ರೀಧರ್ ವಿರುದ್ಧವೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಂದರೆ ಇದು ನಮ್ಮ ವಸೂಲಾತಿ ತಂಟೆಗೆ ಬರಬೇಡಿ ಎನ್ನುವ ಬೆದರಿಕೆಯಾ?
ನಿನ್ನೆ ಹೆರಿಗೆ ವಾರ್ಡ್ ನಲ್ಲಿ ನಿನ್ನೆ ಹೆರಿಗೆಯಾದ ಮಹಿಳೆಯಿಂದ ಹಣ ಪಡೆದ ಅಲ್ಲಿನ ಡಿ ದರ್ಜೆ ನೌಕರರನಿಗೆ ಹಣ ನೀಡುತ್ತಿರುವ ಪೋಟೊವೊಂದು ಕ್ಲಿಕ್ಕಿಸಿ ಅಪರಿಚಿತರೋರ್ವರು ಮೆಗಾನ್ ಆಡಳಿತ ಮಂಡಳಿಗೆ ಫೊಟೊ ಕಳುಹಿಸಿದ್ದಾರೆ. ಈ ಫೋಟೊದಲ್ಲಿ ಡಿ ದರ್ಜೆ ನೌಕರ ಹಣ ಸ್ವೀಕರಿಸುತ್ತಿರುವುದನ್ನು ಯಾವುದೋ ಪ್ರಶಸ್ತಿ ಪಡೆಯುವ ರೀತಿ ರಾಜಾರೋಷವಾಗಿ ಪಡೆಯುತ್ತಿರುವುದು ಕಂಡು ಬಂದಿದೆ.
ಈ ಪೋಟೊ ನೋಡಿದ ತಕ್ಷಣವೇ, ಸ್ಥಳಕ್ಕೆ ಬಂದ ಎಂಎಸ್ ಡಾ. ಶ್ರೀಧರ್ ಸಿಬ್ಬಂದಿಗಳ ವಿರುದ್ದ ಆಕ್ರೋಶಗೊಂಡಿದ್ದರು. ಹಾಗೆಯೇ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಈ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಮೆಗ್ಗಾನ್ ಡಿದರ್ಜೆ ನೌಕರರು ಮೆಗ್ಗಾನ್ ಅಧೀಕ್ಷಕ(ಎಂಎಸ್) ಶ್ರೀಧರ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಹಲವು ವರ್ಷಗಳಿಂದ ಮೂರು ನಾಲ್ಕು ವಾರ್ಡ್ ಗಳಿಗೆ ಒಬ್ಬ ಡಿ ದರ್ಜೆ ನೌಕರರಷ್ಟೆ ನೋಡಿಕೊಳ್ಳುತ್ತಿದ್ದೇವೆ. ಆದರೂ ಸಹ ಎಂಎಸ್ ಅವ್ಯಾಚ್ಯಶಬ್ದಗಳಿಂದ ನಿಂದಿಸುತ್ತಿದ್ದಾರೆ. ನೆಮ್ಮದಿಯ ಕರ್ತವ್ಯ ನಿರ್ವಹಿಸಲು ನಮಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ನಿನ್ನೆ ಬೆಳಿಗ್ಗೆ ಡಿ ದರ್ಜೆ ನೌಕರರು ಧರಣಿ ಕುಳಿತು ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪನವರಿಗೆ ಮನವಿ ನೀಡಿದ್ದಾರೆ.
ಈ ಕೂಡಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಇಡಿ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಅಂತೆಯೇ ಇಲ್ಲಿನ ಕೆಲ ವಾರ್ಡ್ಗಳಲ್ಲಿ ಹೆಚ್ಚಿರುವ ಲಂಚಗುಳಿತನವನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು, ಸಿಮ್ಸ್ ನಿರ್ದೇಶಕರು, ಮುಖ್ಯ ಅಧೀಕ್ಷಕರುಪ ಮುಂದಾಗಬೇಕೆಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರ ಪೋಷಕರು ಒತ್ತಾಯಿಸಿದ್ದಾರೆ.