ಸಾಗರ : ತಾಲ್ಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 62 ವರ್ಷದ ಎಂ.ಎಲ್.ರಮೇಶ್ ಸೋಮವಾರ ಭಾರತ್ ಜೋಡೋ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟಿದ್ದರು.
ಮಂಗಳವಾರ ರಮೇಶ್ ಅವರ ಪಾರ್ಥಿವ ಶರೀರ ಹುತ್ತದಿಂಬ ಗ್ರಾಮಕ್ಕೆ ಬಂದಿತ್ತು. ಸ್ಥಳಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಸೇರಿದಂತೆ ಪ್ರಮುಖ ಕಾಂಗ್ರೇಸ್ ಮುಖಂಡರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದ್ದಾರೆ.
ಘಟನೆ ಕುರಿತು ತಮ್ಮ ವಿಷಾದ ವ್ಯಕ್ತಪಡಿಸಿರುವ ಡಾ. ರಾಜನಂದಿನಿ ಕಾಗೋಡು, ರಸ್ತೆ ಅಪಘಾತದಲ್ಲಿ ಮೃತಪಟ್ಟ ಎಂ.ಎಲ್. ರಮೇಶ್ ಕುಟುಂಬಕ್ಕೆ ಕಾಂಗ್ರೇಸ್ ಪಕ್ಷ ಸಾಂತ್ವಾನ ತಿಳಿಸುತ್ತಿದ್ದು, ಬ್ಲಾಕ್ ಕಾಂಗ್ರೇಸ್ ವತಿಯಿಂದ ೧ ಲಕ್ಷ ರೂ. ಸಹಾಯಧನ ನೀಡಲಾಗಿದೆ. ಘಟನೆಯನ್ನು ಕಾಂಗ್ರೇಸ್ ವರಿಷ್ಟರಾದ ರಾಹುಲ್ ಗಾಂಧಿ ಮತ್ತು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಲಾಗಿತ್ತು.
ಡಿ.ಕೆ.ಶಿವಕುಮಾರ್ ಅವರು ಪಕ್ಷದ ವತಿಯಿಂದ ರಮೇಶ್ ಅವರ ಕುಟುಂಬಕ್ಕೆ10 ಲಕ್ಷ ರೂ. ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಕಾಂಗ್ರೇಸ್ ಪಕ್ಷವು ರಮೇಶ್ ಅವರ ಕುಟುಂಬದ ಜೊತೆ ಇದ್ದು, ಮುಂದಿನ ದಿನಗಳಲ್ಲಿ ಅಗತ್ಯ ನೆರವು ಕಲ್ಪಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.