ಶಿವಮೊಗ್ಗ, ಅ.7:
ದಾಖಲೆರಹಿತ ಜನವಸತಿ ಗ್ರಾಮಗಳ ವಸತಿರಹಿತ ಬಡವರಿಗೆ, ಸರ್ಕಾರದ ಸಹಾಯಧನದ ನೆರವಿನೊಂದಿಗೆ ಮನೆ ನಿರ್ಮಿಸಿಕೊಳ್ಳಲು ವಾಸಸ್ಥಳದ ಹಕ್ಕುಪತ್ರ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಹಕ್ಕುಪತ್ರ ವಿತರಿಸದೆ ಸತಾಯಿಸುತ್ತಾ. ಸರ್ಕಾರದ ನಿರ್ದೇಶನವನ್ನೇ ಉಲ್ಲಂಘಿಸುತ್ತಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆ ಶಿವಮೊಗ್ಗ ನಗರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಾ, ದಾಖಲೆರಹಿತ ಜನವಸತಿಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದ ಫಲವಾಗಿ ಕಂದಾಯ ಸಚಿವರು ಆರು ತಿಂಗಳೊಳಗೆ ಹಕ್ಕುಪತ್ರ ನೀಡುವಂತೆ ಆದೇಶಿಸಿದ್ದರು.
ಆದರೆ ದಾಖಲೆರಹಿತ ಜನವಸತಿ ಪ್ರದೇಶಗಳಿಗೆ 94 ಡಿ’ ಅಡಿಯಲ್ಲಿ ಹಕ್ಕುಪತ್ರ ನೀಡುವ ಕಾರ್ಯಕ್ರಮ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮಂದಗತಿಯಲ್ಲಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಬಡವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ 74 ದಾಖಲೆರಹಿತ ಜನವಸತಿ ಪ್ರದೇಶಗಳಿವೆ. ಕಾಲಮಿತಿಯೊಳಗೆ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ಆದೇಶಾನುಸಾರ ನಡೆದುಕೊಳ್ಳಬೇಕು. ದಾಖಲೆ ರಹಿತ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ಬಡವರು ಸರ್ಕಾರದ ಸಹಾಯಧನ ಪಡೆದು ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.
ಇಲ್ಲದಿದ್ದರೆ ಸದರಿ ಅಧಿಕಾರಿಗಳ ವಿರುದ್ದ ಸರ್ಕಾರಕ್ಕೆ ದೂರು ಸಲ್ಲಿಸಲಾಗುವುದು. ಜೊತೆಗೆ ತಾವೇ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಇದಕ್ಕೆ ಆಡಳಿತ ವರ್ಗ ಅವಕಾಶ ನೀಡಬಾರದು ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳಿಂದ ಬಡವರಿಗೆ ಅನ್ಯಾಯ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಭಾರೀ ಮಳೆಯಿಂದ ಒಟ್ಟಾರೆ 790 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಹಾನಿಯಾದ (ಎ ಶ್ರೇಣಿ) 86 ಮನೆಗಳು, ಅರ್ಧದಷ್ಟು ಹಾನಿಯಾದ (ಬಿ ಶ್ರೇಣಿ) 556 ಹಾಗೂ ಭಾಗಶಃ ಹಾನಿಯಾದ 148 (ಸಿ ಶ್ರೇಣಿ) ಮನೆಗಳನ್ನು ಗುರುತಿಸಲಾಗಿದೆ. ಆದರೆ ಅಧಿಕಾರಿಗಳು ಮನೆಗಳಿಗೆ ಹಾನಿಯಾದ ಪ್ರಮಾಣಕ್ಕೆ ಅನುಗುಣವಾಗಿ ಶ್ರೇಣಿ ನಿಗದಿ ಮಾಡಿಲ್ಲ. ಎ ಶ್ರೇಣಿ ನಿಗದಿಯಾಗಬೇಕಾಗಿದ್ದ ಮನೆಗಳಿಗೆ, ಸಿ ಶ್ರೇಣಿ ನಿಗದಿಗೊಳಿಸಲಾಗಿದೆ. ಸಿ ಶ್ರೇಣಿ ನಿಗದಿಯಾಗಬೇಕಾದ ಮನೆಗಳಿಗೆ ಎ ಶ್ರೇಣಿ ನಿಗದಿಗೊಳಿಸಿದ್ದಾರೆ.
ಈ ಕುರಿತಂತೆ ತಾವೇ ಖುದ್ದು ಪರಿಶೀಲನೆ ನಡೆಸಿದ್ದೆನೆ. ಈ ವೇಳೆ ವ್ಯತ್ಯಾಸ ಬೆಳಕಿಗೆ ಬಂದಿದೆ. ಕೆಲವರು ಹಣ ಪಡೆದು ತಪ್ಪು ಮಾಹಿತಿ ನೀಡಿರುವ ಅನುಮಾನಗಳಿವೆ. ತಪ್ಪು ಸರಿಪಡಿಸಿ ಬಡವರಿಗೆ ನ್ಯಾಯ ಒದಗಿಸಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೆನೆ. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.