ಶಿವಮೊಗ್ಗ, ಸೆ.09:

ವಿಶ್ವ ವಿಖ್ಯಾತ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ 120ಕೋಟಿ ರೂ. ಅನುಮೋದನೆ ನೀಡಿದ್ದು, ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.

ಜೋಗ ಅಭಿವೃದ್ಧಿಗೆ ನೀಲ ನಕಾಶೆ ರೂಪಿಸುವ ಕುರಿತು ಜೋಗದಲ್ಲಿ ಬುಧವಾರ ನಡೆಸಿದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜೋಗದಲ್ಲಿ ಪ್ರವಾಸಿಗರು ಕನಿಷ್ಟ ಒಂದು ಇಡೀ ದಿನ ರಜಾದಿನ ಆಸ್ವಾದಿಸಲು ಅವಕಾಶ ಕಲ್ಪಿಸಬೇಕಾಗಿದೆ. ಈಗಿರುವ ಸೌಲಭ್ಯಗಳನ್ನು ಉತ್ತಮಪಡಿಸುವ ಜತೆಗೆ ಇನ್ನಷ್ಟು ಹೊಸ ಮೂಲಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮಾತ್ರವಲ್ಲದೆ ಕೆಪಿಟಿಸಿಎಲ್ ಪಾತ್ರವೂ ಬಹಳ ಮುಖ್ಯವಾಗಿದೆ. ಜೋಗ ಅಭಿವೃದ್ಧಿ ನಿಟ್ಟಿನಲ್ಲಿ ಇದು ಎರಡನೇ ಸಭೆಯಾಗಿದ್ದು, ತಜ್ಞರ ಸಲಹೆಗಳನ್ನು ಪಡೆದು ಆದಷ್ಟು ಬೇಗನೆ ನೀಲ ನಕಾಶೆ ಅಂತಿಮಗೊಳಿಸಿ ಟೆಂಡರ್ ಕರೆಯುವ ಪ್ರಕ್ರಿಯೆಯನ್ನು ಆರಂಭಿಸಬೇಕಾಗಿದೆ ಎಂದು ಅವರು ಹೇಳಿದರು.

ಇಲ್ಲಿನ 22ಎಕ್ರೆ ಪ್ರದೇಶದಲ್ಲಿ ವೀಕ್ಷಣಾ ಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನವನ, ವಿದ್ಯುದಾಗಾರಕ್ಕೆ ಪ್ರವಾಸಿಗರಿಗೆ ವೀಕ್ಷಣಾ ಅವಕಾಶ, ಮಳೆಗಾಲ ಹೊರತುಪಡಿಸಿ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತಕ್ಕೆ ನೀರು ಹರಿಸುವ ಪ್ರಸ್ತಾವನೆಗಳಿಗೆ ಅಂತಿಮ ರೂಪು ನೀಡಬೇಕಾಗಿದೆ ಎಂದು ಹೇಳಿದರು.

ಕೆಪಿಟಿಸಿಲ್ ಮ್ಯಾನೇಜಿಂಗ್ ಡೈರೆಕ್ಟರ್ ಪೊನ್ನುರಾಜ್ ಅವರು ಮಾತನಾಡಿ, ಜೋಗದಲ್ಲಿ ಕೆಪಿಟಿಸಿಎಲ್‍ಗೆ ಸೇರಿದ ಹಲವು ಆಸ್ತಿಪಾಸ್ತಿಗಳಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಪವರ್ ಸ್ಟೇಷನ್, ಆಸ್ಪತ್ರೆ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಳ್ಳಬಹುದಾಗಿದ್ದು, ಕೆಪಿಟಿಸಿಎಲ್ ಎಲ್ಲಾ ಸಹಕಾರ ನೀಡಲಿದೆ ಎಂದು ಹೇಳಿದರು.

ಸಭೆ

ಜಂಗಲ್ ಲಾಡ್ಜಸ್ ಎಂಡಿ ವಿಜಯ್ ಶರ್ಮ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಮೇಶ್, ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳಾದ ರಾಜಪ್ಪ, ರವಿ, ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!