ಇಲ್ಲಿನ ನ್ಯೂ ಬಿಎಚ್ ರಸ್ತೆಯ ಶರಾವತಿ ಕೂಲ್ ಡ್ರಿಂಕ್ಸ್ ಎದುರು ೨೦೧೫ರ ಮಾರ್ಚ್ ೨೦ರಂದು ರಾತ್ರಿ ೮ರ ವೇಳೆಗೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.


ಹಣಕಾಸಿನ ವಿಚಾರದಲ್ಲಿ ಉಂಟಾದ ವೈಷಮ್ಯದ ಕಾರಣ ಇಲ್ಲಿನ ನೆಹರೂ ನಗರ ಬಡಾವಣೆಯ ಹಸೈನರ್ ಎಂಬಾತನ ಮೇಲೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ ಮಹಮ್ಮದ್ ಅಲಿ, ಇಸ್ಮಾಯಿಲ್, ಪ್ರತಾಪ್ ಸಿಂಗ್, ರಾಕೇಶ್, ಇಮ್ರಾನ್, ಬೊಮ್ಮ, ಶಾಹಿದ್, ರಶೀದ್ ಎಂಬುವವರು ತಲವಾರ್, ಮಚ್ಚುಗಳಿಂದ ಜನನಿಬಿಡ ರಸ್ತೆಯಲ್ಲೇ ಸಿನಿಮೀಯ ಮಾದರಿಯಲ್ಲಿ ತೀವ್ರ ಹಲ್ಲೆ ನಡೆಸಿದ್ದರು.


ಕೊಲೆಯ ನಂತರ ಆರೋಪಿಗಳು ಬೈಕ್‌ನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮಚ್ಚು, ತಲವಾರ್ ಜಳಪಿಸುತ್ತ ಸಾಗಿದ್ದು ನಗರದ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಹಸೈನರ್‌ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟಿದ್ದರು.
ಪ್ರಕರಣದಲ್ಲಿ ಒಬ್ಬ ಆರೋಪಿ ಅಪ್ರಾಪ್ತನಾದ ಕಾರಣ ಆತನ ವಿಚಾರಣೆ ಶಿವಮೊಗ್ಗದ ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗದೆ ಬಿಡುಗಡೆ ಮಾಡಲಾಗಿತ್ತು. ಉಳಿದ ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.


ಈ ತೀರ್ಪನ್ನು ಮಹಮ್ಮದ್ ಅಲಿ ಹಾಗೂ ಶಾಹಿದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಿ ತಡೆಯಾಜ್ಞೆ ಪಡೆದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇಲ್ಲಿನ ನ್ಯಾಯಾಲಯ ನೀಡಿರುವ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ಕಾರಣ ಮಹ್ಮಮದ್ ಅಲಿ ಹಾಗೂ ಶಾಹಿದ್ ಅವರನ್ನು ಶುಕ್ರವಾರ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದ ಆರೋಪಿಗಳು ಈಗಾಗಲೇ ಧಾರವಾಡದ ಕಾರಾಗೃಹದಲ್ಲಿ ಜೈಲು ವಾಸದಲ್ಲಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!