ಶಿವಮೊಗ್ಗ: ತಾಲ್ಲೂಕಿನ ಬೀರನಕೆರೆ ಕೆರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಪಿಯುಸಿ ವಿದ್ಯಾರ್ಥಿ ರವಿನಾಯ್ಕ್ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವಂತೆ ಕೋರಿ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬೀರನಕೆರೆ ತಾಂಡಾದ ಪಿಯುಸಿ ವಿದ್ಯಾರ್ಥಿ ರವಿನಾಯ್ಕ್ ಸೆ. 25 ರಂದು ಕೆರೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋಗಿ ನಿಯಂತ್ರಣ ತಪ್ಪಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು, ಕಡುಬಡತನದಿಂದ ಕೂಡಿದ ಇವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪೋಷಕರಿಗೆ ಏಕೈಕ ಮಗನಾಗಿ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಉಜ್ವಲ ಭವಿಷ್ಯದ ಕನಸು ಹೊತ್ತಿದ್ದ ರವಿನಾಯ್ಕ್ ಆಗಲಿಕೆಯಿಂದಾಗಿ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ವಾಸಿಸಲು ಯೋಗ್ಯವಾದ ಮನೆ ಇಲ್ಲದಷ್ಟು ಕಡುಬಡತನದಿಂದ ಕೂಡಿರುವ ಇವರ ಕುಟುಂಬಕ್ಕೆ ಕುಂಚೇನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ನಿವೇಶನ ಒದಗಿಸಿ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ಕೂಡಲೇ ಈ ಕುರಿತಾಗಿ ಅಗತ್ಯ ಕ್ರಮ ಕೈಗೊಂಡು ತೀವ್ರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗಬೇಕೆಂದು ವಿನಂತಿಸಿದರು.
ಪ್ರತಿಭಟನೆಯಲ್ಲಿ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್, ಮಂಜುನಾಯ್ಕ್, ಕಲ್ಲೇಶ್ ನಾಯ್ಕ್, ವಿನಾಯಕ ನಾಯ್ಕ್, ಧನಲಕ್ಷ್ಮಿಬಾಯಿ, ಬೇಬಿಬಾಯಿ, ಕವಿತಾಬಾಯಿ, ಶೋಭಾ ಬಾಯಿ ಬೀರನಕೆರೆ ತಾಂಡಾದ ಗ್ರಾಮಸ್ಥರು ಭಾಗವಹಿಸಿದ್ದರು.