ಶಿವಮೊಗ್ಗ: ಪ್ರಧಾನಿ ಮೋದಿ ಕ್ರೀಡೆಗೆ ಒತ್ತು ನೀಡುತ್ತಿದ್ದು, ಸಾಕ್ಷಿಯಾಗಿ ಇತ್ತೀಚಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಅನೇಕ ಪದಕ ಗಳಿಸಿ ಉತ್ತಮ ಸಾಧನೆ ತೋರಿದೆ ಎಂದು ಶಾಸಕ ಡಿ.ಎಸ್. ಅರುಣ್ ಹೇಳಿದ್ದಾರೆ.
ಅವರು ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ ಮಕ್ಕಳ ದಸರಾ ಉತ್ಸವ -2022 ಅಂಗವಾಗಿ ನಗರದ ಸಮಸ್ತ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ದಸರಾ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿವಮೊಗ್ಗ ದಸರಾ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾಕ್ಕೆ ಅತಿ ಹೆಚ್ಚಿನ ಜನ ಸೇರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ದಸರಾದಲ್ಲೇ ವಿವಿಧ ವಿನೂತನ ಸ್ಪರ್ಧೆಗಳು ಮತ್ತು ಆಟೋಟ ಹಮ್ಮಿಕೊಳ್ಳಲಾಗಿದೆ ಎಂದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ. ಇದರಿಂದ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ದೈಹಿಕ ಕ್ಷಮತೆ ವೃದ್ಧೊಯಾಗುತ್ತದೆ. ನೀವೆಲ್ಲರೂ ಉತ್ತಮ ಕ್ರೀಡಾಪಟುಗಳಾಗಿ ದೇಶದ ಕೀರ್ತಿ ಪತಾಕೆ ಹಾರಿಸಿ ಎಂದರು.
ಖ್ಯಾತ ಕ್ರೀಡಾಪಟು ಕು. ಗೌತಮಿ ಕ್ರೀಡಾಕೂಟ ಉದ್ಘಾಟಿಸಿ ಕ್ರೀಡಾಜ್ಯೋತಿಯನ್ನು ಲತಾ ಗಣೇಶ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ಲತಾ ಗಣೇಶ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಸುರೇಖಾ ಮುರುಳೀಧರ್, ಜ್ಞಾನೇಶ್ವರ್, ಚನ್ನಬಸಪ್ಪ, ಸುವರ್ಣಾ ಶಂಕರ್, ವಿಶ್ವನಾಥ್, ಇ. ವಿಶ್ವಾಶ್, ಆರತಿ ಅ.ಮ. ಪ್ರಕಾಶ್, ಆಯುಕ್ತ ಮಾಯಣ್ಣ ಗೌಡ ಇದ್ದರು.