ಶಿವಮೊಗ್ಗ,ಸೆ.19:
ಸಾಮಾನ್ಯವಾಗಿ ಯಾರಾದರೂ ತೀರಿಕೊಂಡಾಗ ಅಶೌಚ ಸಮಯದಲ್ಲಿ ಇದನ್ನು ಹೇಳುವುದುಂಟು. ಹಾಗಾಗಿಯೇ ಬೇರೆ ಸಮಯದಲ್ಲಿ ಇದನ್ನು ಕೇಳಬಾರದು ಅಥವಾ ಓದಬಾರದು ಎಂಬ ಪ್ರತೀತಿಯು ಇದೆ.
ಆದರೆ ಗರುಡ ಪುರಾಣದಲ್ಲಿ ಇರುವುದು ಮನುಷ್ಯ ತನ್ನ ಜೀವಿತದಲ್ಲಿ ಯಾವ ತಪ್ಪನ್ನು ಅಥವಾ ಪಾಪವನ್ನು ಮಾಡಿದರೆ ಮುಂದೆ ನರಕದಲ್ಲಿ ಯಾವ ಶಿಕ್ಷೆ ಕಾದಿದೆ ಎಂಬುದನ್ನು ತಿಳಿಯಹೇಳುವುದು. ಇಂತಿಂಥ ತಪ್ಪಿಗೆ ಇಂತಿಂಥ ಘೋರ ಶಿಕ್ಷೆ ಕಾದಿದೆ ಎಂಬುದನ್ನು ಗರುಡ ಪುರಾಣ ವಿಶದಪಡಿಸುತ್ತದೆ.
ವಾಸ್ತವ ಸ್ಥಿತಿ ಹೀಗಿರುವಾಗ ನಮ್ಮ ಜೀವಿತಾವಧಿಯಲ್ಲಿ ಯಾವ ಪಾಪವನ್ನು ಅಥವಾ ಪ್ರಮಾದವನ್ನು ಮಾಡಬಾರದು ಎಂದು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಈ ಕಾರಣದಿಂದಾಗಿ ಗರುಡ ಪುರಾಣವನ್ನು ಅವಶ್ಯವಾಗಿ ಎಲ್ಲರೂ ಓದಬೇಕು ಅಥವಾ ಕೇಳಬೇಕು. ಇದಕ್ಕೆ ಸಮಯದ ನಿಗದಿ ಎಂಬುದಿಲ್ಲ.
ಇದೇ ಉದ್ದೇಶವನ್ನು ಇಟ್ಟುಕೊಂಡು ಅಜೇಯ ಸಂಸ್ಕೃತಿ ಬಳಗವು ಇದೇ ಸೆ. 22ರ ಗುರುವಾರ ಹಾಗೂ 23ರ ಶುಕ್ರವಾರ ಗರುಡ ಪುರಾಣ ಎಲ್ಲರಿಗಾಗಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ.
ಮಹಾನ್ ವಿದ್ವಾಂಸರಾದ ಶ್ರೀ ಆಯನೂರು ಮಧುಸೂದನಾಚಾರ್ಯ ಅವರು ಗರುಡ ಪುರಾಣವನ್ನು ಮತ್ತು ಅದರ ಸಾರ್ವಕಾಲಿಕತೆಯನ್ನು ಜಿಜ್ಞಾಸುಗಳ ಮುಂದೆ ಪ್ರಸ್ತುತಪಡಿಸಲಿದ್ದಾರೆ.
ಬಿಹೆಚ್ ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಎರಡು ದಿನವೂ ಸಂಜೆ 6-15ರಿಂದ 8-15ರವರೆಗೆ ಈ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು ಎಲ್ಲರಿಗೂ ಸ್ವಾಗತವಿದೆ.
ಪಾಪ ಪುಣ್ಯ ಒಳಿತು ಕೆಡುಕು ಮೋಸ ದಾನ ಅನ್ಯಾಯ ನ್ಯಾಯ ಇಂಥ ವಿಷಯಗಳ ಬಗ್ಗೆ ಪರಿಶೀಲನಾತ್ಮಕವಾದ ಮನಸ್ಸುಳ್ಳ ಎಲ್ಲರಿಗೂ ಈ ಉಪನ್ಯಾಸ ತೃಪ್ತಿ ತರುತ್ತದೆ ಎಂದು ಭಾವಿಸಿದ್ದೇವೆ.
ಪಕ್ಷ ಮಾಸದ ಪ್ರಯುಕ್ತ ಶಿವಮೊಗ್ಗ ಯ ನಾಗರಿಕರಿಗೆ ಇದು ಅಜೇಯ ಸಂಸ್ಕೃತಿ ಬಳಗದ ವಿಶೇಷ ಕೊಡುಗೆ.
ಹಿಂದೆ ಶೌನಕಾದಿ ಮಹರ್ಷಿಗಳು ನೈಮಿಷಾರಣ್ಯದಲ್ಲಿ ಜ್ಞಾನಯಜ್ಞವನ್ನು ಮಾಡುತ್ತಿದ್ದಾಗ ಸೂತ ಪುರಾಣಿಕರು ಅವರಿಗೆ ಹೇಳಿದ ಪುರಾಣವಿದು. ಇದಕ್ಕೂ ಹಿಂದೆ ಸ್ವತಃ ಶ್ರೀಹರಿಯೇ ಗರುಡನನ್ನು ಕುರಿತು ಈ ಪುರಾಣವನ್ನು ಹೇಳಿದ್ದನು.
ವ್ಯಾಸ ಪ್ರಣೀತ 18 ಮಹಾಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದು 19,000 ಶ್ಲೋಕಗಳಿಂದ ಕೂಡಿದ ಬೃಹತ್ ಪುರಾಣವು. ಭಗವಾನ್ ವಿಷ್ಣುವು ಗರುಡನಿಗೆ ಇದನ್ನು ಹೇಳಿದ್ದರಿಂದ ಇದಕ್ಕೆ ಗರುಡ ಪುರಾಣವೆಂಬ ಹೆಸರು.