ಶಿವಮೊಗ್ಗ: ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದನ್ನು ಮಹಿಳೆಯರು ಸೇರಿದಂತೆ, ಕೌಶಲ್ಯನಿರತರು ಸಮರ್ಥವಾಗಿ ಬಳಸಿಕೊಂಡರೆ ಈ ಯೋಜನೆ ಫಲಪ್ರದವಾಗಲು ಸಾಧ್ಯ ಎಂದು ಕುವೆಂಪು ವಿವಿಯ ಕುಲಸಚಿವರಾದ ಜಿ. ಅನುರಾಧ ಅಭಿಪ್ರಾಯಪಟ್ಟರು. 

ಇಂದು ಜನಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿವಿಧ ಕೌಶಲ್ಯ ತರಬೇತಿಗಳ ಉದ್ಘಾಟನೆ ಮತ್ತು ಘಟಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಕೌಶಲ್ಯ ಎಂಬುದು ಬಹಳ ಮಹತ್ವವಾಗಿದ್ದು, ಕೇವಲ ಪದವಿ ಮಾತ್ರವಲ್ಲ.  ನಮ್ಮಲ್ಲಿರುವ ಚಾಕಚಕ್ಯತೆ, ಕೌಶಲ್ಯ, ಚತುರತೆಯನ್ನು ಹೊರಗೆಡಹಲು ವೇದಿಕೆ ಬಹಳ ಮುಖ್ಯ. ಈ ವೇದಿಕೆಯನ್ನು ಜನಶಿಕ್ಷಣ ಸಂಸ್ಥೆ ಒದಗಿಸುತ್ತಿದೆ ಎಂದು ಹೇಳಿದರು.  

ಕೇವಲ ಓದಿ ಪದವಿ ಪಡೆಯಬೇಕೆಂಬ ನಿಟ್ಟಿನಲ್ಲಿ ಮಹಿಳೆಯರು ಯೋಚಿಸದೇ, ಕೌಶಲ್ಯತೆಯನ್ನು ಸಮರ್ಥವಾಗಿ ಬಳಸಿಕೊಂಡು ಆ ಮೂಲಕ ಅವಕಾಶವಾಗಿ ಬಳಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.  

ಹಲವಾರು ಜನರು ವೇತನದಲ್ಲಿ ತಾರತಮ್ಯ ಕಾಣುವಂತಾಗಿದೆ. ಹೀಗಾಗಿ ನುರಿತವರಿಗೆ ತರಬೇತಿ ಮತ್ತು ನಿರ್ದಿಷ್ಟವಾದ ಸಂಸ್ಥೆ ಮೂಲಕ ಪ್ರಮಾಣಪತ್ರ ನೀಡಿದಾಗ ಕೌಶಲ್ಯದ ಮೂಲಕ ಜೀವನದ ಏಳಿಗೆಗೆ ಸಹಕಾರಿಯಾಗುತ್ತದೆ. ಇಂತಹ ಸಂಸ್ಥೆಗಳ ತರಬೇತಿ ಮತ್ತು ಪ್ರಮಾಣ ಪತ್ರಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ. ಅರುಣಾದೇವಿ ಮಾತನಾಡಿ, ಜನಶಿಕ್ಷಣ ಸಂಸ್ಥೆಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದರೂ ಕೂಡ ಯೂನೆಸ್ಕೋ ಪ್ರಶಸ್ತಿ ಪಡೆಯಬೇಕೆಂಬ ಆಶಯ ನನ್ನದಾಗಿತ್ತು. ಈ ಆಶಯ, ಕನಸು ಫಲಾನುಭವಿಗಳಿಗೆ ನೀಡುವ ತರಬೇತಿ ಮೂಲಕ ಈಡೇರಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.  

ಇಂಜಿನಿಯರಿಂಗ್ ಕಲಿಕೆಯಂತೆಯೇ ಕೌಶಲ್ಯಾಭಿವೃದ್ಧಿ ಕಲಿಕೆ ಕೂಡ ಚೆನ್ನಾಗಿರಬೇಕೆಂಬ ಆಶಯ ನಮ್ಮದಾಗಿದೆ. ಮಹಿಳೆಯರು ಕಲಿಕೆಗೆ ಹೆಚ್ಚು ಒತ್ತು ನೀಡುವ ಕುರಿತು ಕಾರ್ಯೋನ್ಮುಖರಾಗಬೇಕು.  ಮದುವೆ, ಬಾಣಂತನ ಸೇರಿದಂತೆ, ಬೇರೆ ಬೇರೆ ಕೆಲಸಗಳ ನಡುವೆಯೂ ನಮ್ಮ ಕಾಲ ಮೇಲೆ ನಾವು ದುಡಿಮೆ ಮಾಡುವಂತಾದರೆ ಅದು ಸಾಧನೆಯಾಗುತ್ತದೆ.  ಈ ಮೂಲಕ ಜನಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕೌಶಲ್ಯ ಹೊಂದಿದ ಮಹಿಳೆಯರೇ ಕಾರಣ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 

  

ಜೆಎಸ್ಎಸ್ ಆಡಳಿತ ಮಂಡಳಿ ಸದಸ್ಯೆ ಸೌಮ್ಯ ಗುರುರಾಜ್ ಮಾತನಾಡಿ, ಇಲ್ಲಿರುವ ಫಲಾನುಭವಿಗಳು ಕೇವಲ ತರಬೇತಿ, ಪ್ರಮಾಣ ಪತ್ರ ತೆಗೆದುಕೊಂಡು ಸುಮ್ಮನಿರದೇ ಯಾವುದಾದರೊಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಏನಾದರೊಂದು ಸಾಧಿಸುವ ಬಗ್ಗೆ ಯೋಚಿಸಿ, ಯೋಜಿಸಿ ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ವಿವಿಧ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡುವ ಮೂಲಕ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜನಶಿಕ್ಷಣ ಸಂಸ್ಥೆ ಅಧ್ಯಕ್ಷ ಮತ್ತು ಕುವೆಂಪು ವಿವಿ ನಿವೃತ್ತ ರಿಜಿಸ್ಟ್ರಾರ್ ಪ್ರೊ. ಎಸ್.ಬಿ. ಕಮಲಾಕರ್, ಜೆ.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಸುಮನಾ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!