ಜಗತ್ತಿನ ಕ್ರೀಡೆಗಳಲ್ಲಿ ಪುಟ್ಬಾಲ್ ನಂತರದ ಹೆಚ್ಚು ಆಕರ್ಷಣೀಯ ಕ್ರೀಡೆ ಟೆನಿಸ್. ಬಾಕ್ಸಿಂಗ್ ಗಾಲ್ಫ್ ಬ್ಯಾಸ್ಕೆಟ್ ಬಾಲ್ ಹಾಕಿ ಕ್ರಿಕೆಟ್ ಅಥ್ಲೆಟಿಕ್ಸ್ ಚೆಸ್ ಹೀಗೆ ನೂರಾರು ಆಟಗಳ ನಡುವೆ ಟೆನ್ನಿಸ್ ಸಹ ದೇಹ ಮನಸ್ಸುಗಳಿಗೆ ಬಹುದೊಡ್ಡ ಸವಾಲು ಒಡ್ಡುತ್ತದೆ. ಕ್ರೀಡೆ ಎಂಬುದೇ ಒಂದು ರೋಮಾಂಚನಕಾರಿ ಸ್ಪರ್ಧೆ. ಅಲ್ಲಿ ಸಾಮಾನ್ಯವಾಗಿ ಯಾವುದೇ ಅಡ್ಡ ದಾರಿ ಇರುವುದಿಲ್ಲ. ಶ್ರಮ ಅಭ್ಯಾಸ ಪ್ರತಿಭೆ ಅದೃಷ್ಟಗಳ ಸಮ್ಮಿಲನ ಬಹುಮುಖ್ಯ. ಬಹುತೇಕ ಯುದ್ಧದ ರೀತಿಯ ಸಂಯೋಜನೆ ಇಲ್ಲಿ ಕಾಣಬಹುದು.

ಅಂತಹವರಲ್ಲಿ ಒಬ್ಬರು ನಿನ್ನೆಯಷ್ಟೇ ನಿವೃತ್ತಿಯಾದ ಸ್ವಿಟ್ಜರ್ಲೆಂಡ್‌‌ ನ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್.

ಅಂಕಿಅಂಶಗಳ ದೃಷ್ಟಿಯಿಂದ ಇವರು ಟೆನ್ನಿಸ್ ಜಗತ್ತಿನ ಶ್ರೇಷ್ಠರೇನಲ್ಲ. ಒಟ್ಟು ಪ್ರಶಸ್ತಿಗಳಲ್ಲಿ ಜಿಮ್ಮಿ ಕಾರ್ನಸ್, ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಜೋಕೋವಿಕ್, ನಡಾಲ್ ಇವರಿಗಿಂತ ಮುಂದಿದ್ದಾರೆ. ಆದರೆ ಟೆನಿಸ್‌ ಆಟದ ಕಲಾತ್ಮಕತೆ ಮತ್ತು ಧ್ಯಾನಸ್ಥ ಮನಸ್ಥಿತಿ ಫೆಡರರ್ ಅವರನ್ನು ಅದ್ವಿತೀಯವಾಗಿಸಿದೆ.

ನಿಮ್ಮಲ್ಲಿ ಯಾರಾದರು ದೀರ್ಘಕಾಲದಿಂದ ಯಾವುದಾದರು ಸಮಸ್ಯೆಗೆ ಸಿಲುಕಿ ಅಂದರೆ ಆರ್ಥಿಕ ದೈಹಿಕ ಕೌಟುಂಬಿಕ ಅಥವಾ ಇನ್ನಾವುದೇ ಸೋಲುಗಳು ಬಾದಿಸುತ್ತಿದ್ದು ಇನ್ನು ಭವಿಷ್ಯ ಮುಗಿಯಿತು ಎನ್ನುವವರಿಗೆ ಸ್ಪೂರ್ತಿದಾಯಕ ಟಾನಿಕ್ ನಂತಿದ್ದಾನೆ ಸ್ವಿಟ್ಜರ್ಲೆಂಡ್‌‌ ನಾ ಈ ಅತ್ಯದ್ಭುತ ಟೆನಿಸ್ ಆಟಗಾರ.

ನಮ್ಮಲ್ಲಿಯೂ ಈ ರೀತಿಯ ಸಾಧಕರು ಇರಬಹುದಾದರು ಸದ್ಯದ ವಿಶ್ವ ಕ್ರೀಡಾಲೋಕದ ಈ ದಿಗ್ಗಜನ ಸಾಧನೆ ಒಮ್ಮೆ ಗಮನಿಸಿ.
2003 ರಿಂದ 2012 ರವರೆಗೆ 17 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದ. ಆಗ ಈತನ ವಯಸ್ಸು 31. ತದನಂತರ ಸುಮಾರು 4 ವರ್ಷ ಯಾವುದೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆಯಲು ವಿಫಲನಾದ. ಎಂದಿನಂತೆ ಕ್ರೀಡಾ ವಿಮರ್ಶಕರು ಮತ್ತು ತಲೆಹರಟೆ ಪತ್ರಕರ್ತರು ಆತನನ್ನು ಯಾವಾಗ ನಿವೃತ್ತಿ , ಇನ್ನು ನಿಮ್ಮ ಆಟ ಮುಗಿಯಿತು ಎಂದು ಕಿಚಾಯಿಸತೊಡಗಿದರು. ಅದೂ ಅಲ್ಲದೆ ಈ ನಿರಾಸೆಯ ಮಧ್ಯೆ ಒಂದು ಶಸ್ತ್ರಚಿಕಿತ್ಸೆಗು ಒಳಗಾಗಿ ಸುಮಾರು 6 ತಿಂಗಳು ಮೈದಾನದಿಂದ ಹೊರಗಿದ್ದ.
ನಂತರ ಚೇತರಿಸಿಕೊಂಡು ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು 18 ನೇ ನಂಬರ್ ತಲುಪಿದ ಮತ್ತು ನಂತರ ಒಟ್ಟು 20 ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಪಡೆದ. ಅದೂ ತನ್ನ 36 ನೆಯ ವಯಸ್ಸಿನಲ್ಲಿ ಒಂದು ಗ್ರಾಂಡ್ ಸ್ಲಾಮ್ !.

ಇನ್ನೊಂದು ವಿಶೇಷವೆಂದರೆ ಇಲ್ಲಿಯವರೆಗೂ Arthar ash ಎಂಬ ಮತ್ತೊಬ್ಬ ಟಿನಿಸ್ ಪ್ರತಿಭೆ 1973 ರಲ್ಲಿ ಒಂದೂ ಸೆಟ್ ಎದುರಾಳಿಗಳಿಗೆ ಬಿಟ್ಟುಕೊಡದೆ ಗೆದ್ದ ನಂತರ ಫೆಡರರ್ 36 ನೆಯ ವಯಸ್ಸಿನಲ್ಲಿ ಮತ್ತೆ ಅದೇ ಸಾಧನೆ ಪುನರಾವರ್ತಿಸಿರುವುದು.
ನೆನಪಿರಲಿ ಟೆನಿಸ್ ಎಂಬ ಏಕ ವ್ಯಕ್ತಿಯ ಆಟ ಅಪಾರ Stamina – Energy – Reflection – power – technique ಬಯಸುವ ಅತ್ಯಂತ ಶ್ರಮದಾಯಕ ಕ್ರೀಡೆ ಮತ್ತು ಇದರಲ್ಲಿ ನೀವು ವಿಶ್ವದ ಶ್ರೇಷ್ಠರಾಗಬೇಕು. ಅಲ್ಲದೆ ಯಾವುದೇ ವೈಯಕ್ತಿಕ ಕ್ರೀಡೆಯಲ್ಲಿ 30 ವಯಸ್ಸಿನ ನಂತರ ಇನ್ನೂ ಯುವಕರಿಗೆ ಸ್ಪರ್ಧೆ ನೀಡಿ ಆಡಬೇಕೆಂದರೆ ಅಸಾಮಾನ್ಯ ಸಾಮರ್ಥ್ಯ ಇರಬೇಕು ಮತ್ತೂ ವಿಶೇಷವೆಂದರೆ Raffle Nadal ಎಂಬ ಅಪ್ರತಿಮ – ಬಲಿಷ್ಠ ಆಟಗಾರರನ ಸಮಕಾಲೀನನಾಗಿ ಈ ಸಾಧನೆ ಮಾಡುವುದಕ್ಕೆ ಅಪಾರ ಮಾನಸಿಕ ಸ್ಥಿರತೆ ಬೇಕಾಗಿರುತ್ತದೆ. ಅಲ್ಲಿಯೇ ಫೆಡರರ್ ನಮಗೆ ಸ್ಪೂರ್ತಿಯಾಗುವುದು.

( ಈ ನಡಾಲ್ ಕೂಡ ಅತ್ಯಂತ ಮಾನವೀಯ ವ್ಯಕ್ತಿ. ಈತ 12 Grand slam ಪಡೆದ ನಂತರ ಆಟದಲ್ಲಿ ಒಂದಷ್ಟು ಮಂಕಾಗಿ ವಿಫಲನಾಗುತ್ತಾನೆ. ಆಗ ಎಲ್ಲರೂ ಅಲ್ಲಿಯವರೆಗೂ ಅವನಿಗೆ ಕೋಚ್ ಆಗಿದ್ದ ಅವನ ಚಿಕ್ಕಪ್ಪನನ್ನು ಬದಲಾಯಿಸಿ ಬೇರೆ ಕೋಚ್ ನೇಮಿಸಿಕೊಳ್ಳುವಂತೆ ಟೆನಿಸ್ ದಿಗ್ಗಜರು ಸಲಹೆ ನೀಡುತ್ತಾರೆ. ಆಗ ನಡಾಲ್ ಏನೆಂದ ಗೊತ್ತೆ. ” ನಾನು ಈಗಾಗಲೇ ನನ್ನ ಚಿಕ್ಕಪ್ಪನ ತರಬೇತಿಯಿಂದ 12 Grand slam ಪ್ರಶಸ್ತಿ ಗೆದ್ದಿದ್ದೇನೆ. ಇನ್ನು ಮುಂದೆ ಒಂದೂ ಪ್ರಶಸ್ತಿ ಗೆಲ್ಲಲಾಗದಿದ್ದರೂ ಪರವಾಗಿಲ್ಲ. ನನ್ನ ಚಿಕ್ಕಪ್ಪನನ್ನು ಕೋಚ್ ಹುದ್ದೆಯಿಂದ ತೆಗೆಯಲಾರೆ ” ಎಂದು ಹೇಳಿದ. ಆ ನಿರ್ಧಾರ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ನನಗಂತೂ ತುಂಬಾ ಇಷ್ಟವಾಯಿತು. ತದನಂತರ ಆತ ಈಗಾಗಲೇ 22 ಪ್ರಶಸ್ತಿ ಗೆದ್ದು ಮತ್ತಷ್ಟು ನಿರೀಕ್ಷೆಯಲ್ಲಿದ್ದಾನೆ.)

ಫೆಡರರ್ ನ ಕ್ರೀಡಾಂಗಣದ ವರ್ತನೆ ಕೂಡ ತುಂಬಾ ಆದರ್ಶಪ್ರಾಯ. ಈ ಫೆಡರರ್ ಗೆ ಮಿರ್ಕಾ ಎಂಬ ಹೆಂಡತಿ ಇದ್ದು ಆಕೆಯ ಎರಡು ಹೆರಿಗೆಯಿಂದ 4 ಮಕ್ಕಳು ಜನಿಸಿವೆ. ಮೊದಲು 2 ಹೆಣ್ಣು ಮತ್ತು ಆಮೇಲೆ ಎರಡು ಗಂಡು ( Twins ).

ಅದೇನೆ ಇರಲಿ ಶ್ರಮ ಶ್ರದ್ದೇ ತಾಳ್ಮೆ ಒಳ್ಳೆಯತನ ನಿರಂತರ ಪ್ರಯತ್ನ ಮತ್ತು ಮುಖ್ಯವಾಗಿ ನಮ್ಮ ವಿಶಾಲ ಮನಸ್ಸು ಮತ್ತು ಅರಿವು ಜೊತೆಗೆ ಅರಿಷಡ್ವರ್ಗಗಳ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೇ ಆದರೆ ಬಹುತೇಕ ಬದುಕು ಯಶಸ್ವಿಯಾಗುವುದು ಖಚಿತ ಅಥವಾ ಕನಿಷ್ಠವೆಂದರೂ ಒಂದಷ್ಟು ನೆಮ್ಮದಿಯಂತೂ ಶತಸಿದ್ದ.
ಇದು ನಮ್ಮ ನಿಮ್ಮ ಬದುಕಿನಲ್ಲಿ ಒಂದಷ್ಟು ಆಶಾಕಿರಣ ಮೂಡಿಸಲಿ ಎಂದು ಆಶಿಸುತ್ತಾ…

ಜಗತ್ತಿನ ಮಾನವ ಸಮಾಜದ ನಿಜವಾದ ಹೀರೋಗಳು ಯಾರು ?
ರಾಜಕಾರಣಿಗಳೇ – ಖಂಡಿತ ಅಲ್ಲ.
ಸಮಾಜ ಸೇವಕರೇ – ಖಂಡಿತ ಅಲ್ಲ.
ಧರ್ಮ ಗುರುಗಳೇ – ಖಂಡಿತ ಅಲ್ಲ.
ಸಾಹಿತಿ ಕಲಾವಿದರೇ – ಖಂಡಿತ ಅಲ್ಲ.
ವಿಜ್ಞಾನಿಗಳೇ – ಖಂಡಿತ ಅಲ್ಲ.
ಸಿನಿಮಾ ನಟನಟಿಯರೇ – ಖಂಡಿತ ಅಲ್ಲ.
ಕೃಷಿಕರೇ – ಭಾವನಾತ್ಮಕವಾಗಿ ಹೌದು,
ಸೈನಿಕರೇ – ಸಾಂದರ್ಭಿಕವಾಗಿ ಹೌದು,
ಹೋರಾಟಗಾರರೇ – ಭಾಗಶಃ ಹೌದು,
ಆದರೆ ನಿಜವಾದ ಹೀರೋಗಳು – ವಿಶ್ವ ಚಾಂಪಿಯನ್ ಆದ ಕ್ರೀಡಾಪಟುಗಳು.

ಸೈನಿಕರು ಸಂದರ್ಭದ ಒತ್ತಡದಲ್ಲಿ ತಮ್ಮ ಜೀವದ ಹಂಗುತೊರೆದು ಹೋರಾಡುತ್ತಾರೆ. ಆದರೆ ಅದುವೇ ವಿಶ್ವ ಶ್ರೇಷ್ಠ ಎನ್ನುವುದು ಕಷ್ಟ.
ಹೋರಾಟಗಾರರು ಒಂದು ನೆಲದ ಅಥವಾ ಸಮುದಾಯದ ಪರವಾಗಿ ಹೋರಾಡುತ್ತಾರೆ. ಅವರು ಆ ಸಮುದಾಯದ ನಾಯಕರು ಮಾತ್ರ. ಇಡೀ ವಿಶ್ವಕ್ಕೆ ಅವರು ನಾಯಕರು ಎಂದು ಒಪ್ಪಲಾಗುವುದಿಲ್ಲ.
ಆದರೆ ಕ್ರೀಡಾಕ್ಷೇತ್ರದಲ್ಲಿ ಹಾಗಲ್ಲ. ನೀವು ವಿಶ್ವ ಚಾಂಪಿಯನ್ ಆಗಬೇಕಾದರೆ ಆ ಸ್ಪರ್ಧೆಯಲ್ಲಿ ಭೂಮಂಡಲದ 750 ಕೋಟಿ ಜನರಲ್ಲಿ ಮೊದಲಿಗರಾಗಿ ಮೂಡಿಬರಬೇಕು..ಮೈದಾನದಲ್ಲಿ ಎಲ್ಲರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಬೇಕು..ಇಲ್ಲಿ ಜಾತಿ, ಧರ್ಮ, ಭಾಷೆ, ಪ್ರದೇಶ, ಪ್ರಭಾವ ಏನೂ ಗಣನೆಗೆ ಬರುವುದಿಲ್ಲ. ಯಾವ ಸಿದ್ಧಾಂತಗಳು, ಮೌಲ್ಯಗಳು, ಪಂಥಗಳು, ಮೋಸ ವಂಚನೆಗಳು ನಿಮಗೆ ನೆರವು ನೀಡಲಾರದು.

ನಿಮ್ಮ ದೈಹಿಕ ಸಾಮರ್ಥ್ಯ, ಮಾನಸಿಕ ಗುಣಮಟ್ಟ, ನಿಮ್ಮ ಆತ್ಮವಿಶ್ವಾಸ, ನಿಮ್ಮ ಕಠಿಣ ಶ್ರಮ ಮಾತ್ರವೇ ಇಲ್ಲಿ ಮುಖ್ಯವಾಗುತ್ತದೆ. ಅದೇ ನಿಮ್ಮನ್ನು ವಿಶ್ವದ ಶ್ರೇಷ್ಠನನ್ನಾಗಿ ಮಾಡುತ್ತದೆ ಮತ್ತು ಅದು ಆ ಕ್ಷಣದ ಸಾಮರ್ಥ್ಯ ಮಾತ್ರವಾಗಿರದೆ ಹಲವು ವರ್ಷಗಳ ನಿರಂತರತೆಯೂ ಬೇಕಾಗುತ್ತದೆ.
ಆ ಕಾರಣಕ್ಕಾಗಿಯೇ ವಿಶ್ವ ಚಾಂಪಿಯನ್ ಕ್ರೀಡಾಪಟುಗಳನ್ನು ಮಾನವ ಜನಾಂಗದ ನಿಜವಾದ ಹಿರೋಗಳು ಎಂದು ಹೇಳುವುದು.
ಆ ರೀತಿಯ ಕೆಲವು ವಿಶ್ವಶ್ರೇಷ್ಠ ಕ್ರೀಡಾಪಟುಗಳೆಂದರೆ,

ರೋಜರ್ ಫೆಡರರ್ ( ಟೆನಿಸ್ )
ನಾಡಿಯಾ ಕೊಮಿನಿ ( ಜಿಮ್ನಾಸ್ಟಿಕ್ )
ಧ್ಯಾನ್ ಚಂದ್ ( ಹಾಕಿ )
ಡಾನ್ ಬ್ರಾಡ್ಮನ್ ( ಕ್ರಿಕೆಟ್ )
ಪೀಲೆ ( ಪುಟ್ ಬಾಲ್ )
ಮೈಕೆಲ್ ಷೂಮೇಕರ್ ( ಫಾರ್ಮುಲಾ ಕಾರ್ರೇಸ್ )
ಚೆಸ್ ( ಗ್ಯಾರಿ ಕಾಸ್ಪರೋವ್ )
ಬ್ಯಾಸ್ಕೆಟ್ ಬಾಲ್ ( ಮೈಕೆಲ್ ಜೋರ್ಡಾನ್ )
ಅಥ್ಲೆಟಿಕ್ಸ್ ( ಜೆಸ್ಸಿ ಒವೆನ್ಸ್ / ಉಸೇನ್ ಬೋಲ್ಟ್ )
ಈಜು ( ಮೈಕೆಲ್ ಫ್ಲೆಕ್ಸ್)
ಗಾಲ್ಫ್ ( ಟೈಗರ್ ವುಡ್ಸ್ )
ಮಹಮದ್ ಅಲಿ ( ಬಾಕ್ಸಿಂಗ್ )
ಬಾಬ್ ಬೀಮನ್ ( ಲಾಂಗ್ ಜಂಪ್ )
ಸರ್ಗೈ ಬುಬ್ಕಾ ( ಪೋಲ್ ವಾಲ್ಟ್ )
ಇನ್ನೂ ಒಂದಷ್ಟು ಜನ ಈ ಪಟ್ಟಿಯಲ್ಲಿದ್ದಾರೆ.

ನಮ್ಮ ಬದುಕಿನ ಅತ್ಯಂತ ಕಷ್ಟದ – ಸವಾಲಿನ ಸಮಯಗಳಲ್ಲಿ ಇವರುಗಳ ಸಾಧನೆ ನಮಗೆ ಸ್ಪೂರ್ತಿಯಾಗಲಿ, ಅವರ ಏಕಾಗ್ರತೆ, ತಾಳ್ಮೆ, ಛಲ, ಅಭ್ಯಾಸ,
ನಮಗೆ ಮಾರ್ಗದರ್ಶನವಾಗಲಿ, ನಮ್ಮೊಳಗಿನ ನಾಗರೀಕ ಪ್ರಜ್ಞೆ – ಕ್ರಿಯಾತ್ಮಕ ಚಟುವಟಿಕೆ ಜಾಗೃತವಾಗಲಿ ಎಂದು ಆಶಿಸುತ್ತಾ ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

By admin

ನಿಮ್ಮದೊಂದು ಉತ್ತರ

You missed

error: Content is protected !!