ತಾಲೂಕಿನ ಬರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಳಕೆರೆ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಕುಟುಂಬ ವೊಂದಕ್ಕೆ ಬಹಿಷ್ಕಾರ ಹಾಕಿರುವ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ.
ಪೂಜಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಗೆ ಜಾಗ ಮಂಜೂರಾಗಿರುವ ಬಗ್ಗೆ ಮಾಹಿತಿ ನೀಡಿದರು.
ಜೊತೆಗೆ ಶಾಲೆ ತುಂಬ ಚಿಕ್ಕದಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಗ್ರಾಮದ ಸರ್ವೇ ನಂ. ೧೭ ರಲ್ಲಿ ಶಾಲೆ ನಿರ್ಮಾಣಕ್ಕಾಗಿ ೩ ಎಕರೆ ಜಾಗವನ್ನು ಮೀಸಲು ಇರಿಸಲಾಗಿತ್ತು. ಇದೀಗ ಜಾಗವನ್ನು ರಮೇಶ್ ಅವರು ತಮಗೆ ಮಂಜೂರು ಆಗಿದೆ ಎಂದು ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ, ನಾವು ಯಾವುದೇ ರೀತಿಯ ಬಹಿಷ್ಕಾರ ಹಾಕಿಲ್ಲ. ಮಕ್ಕಳಿಗೆ ಅನುಕೂಲ ವಾಗುವಂತೆ ಶಾಲೆಗೆ ಜಮೀನು ಮಂಜೂರು ಮಾಡಲು ಮನವಿ ಮಾಡಿದರು.
ಬಹಿಷ್ಕಾರ ಹಾಕಿದ್ದಾರೆ ಎಂದು ದೂರಿರುವ ಸಂತ್ರಸ್ತೆ ಜಯಲಕ್ಷ್ಮೀ ರಮೇಶ್, ಈ ಜಾಗವು ೨೦೦೩-೦೪ ರಲ್ಲಿ ನಮಗೆ ಮಂಜೂರಾಗಿದ್ದು ೨೦೨೦ ರಲ್ಲಿ ನಮ್ಮ ಹೆಸರಿಗೆ ಖಾತೆಯಾಗಿದೆ. ಕಳೆದ ಹಲವು ವರ್ಷಗಳಿಂದ ನಾವು ಇಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಈಗ ಶಾಲೆಗೆ ಜಾಗ ಬಿಟ್ಟುಕೊಟ್ಟಿಲ್ಲ ಎಂದು ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿದರು.