ಶಿವಮೊಗ್ಗ,ಸೆ.14:

ಕಾಶಿ ವಿಶ್ವನಾಥ ದೇವಸ್ಥಾನ ಹಿಂದೂಗಳ ಪವಿತ್ರ ಪೂಜಸ್ಥಾನವಾಗಿದ್ದು, ಅಲ್ಲಿನ ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಶಿವಲಿಂಗ, ಶೃಂಗಾರ ಗೌರಿ, ಗಣಪತಿ ನಂದಿ ವಿಗ್ರಹಗಳಿದ್ದು, ಪೂಜೆಗೆ ಅವಕಾಶ ನೀಡಬೇಕೆಂಬ ಹಿಂದೂಗಳ ಬೇಡಿಕೆಗೆ ನ್ಯಾಯಾಲಯ ವರ್ಷಕ್ಕೊಂದು ಬಾರಿ ಮಾತ್ರ ಅವಕಾಶ ನೀಡಿತ್ತು. ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ ಹಿಂದೂ ಮಹಿಳೆಯರ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿರುವುದು ಸಂತೋಷ ತಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸಲ್ಮಾನರು ಅಯೋಧ್ಯೆ ವಿಚಾರದಲ್ಲಿ ಸಹಕಾರ ನೀಡಿದ್ದಾರೆ. ಅದೇ ರೀತಿ ಕಾಶಿ ಮತ್ತು ಮಥುರಾದಲ್ಲೂ ಕೂಡ ಸಹಕಾರ ನೀಡಬೇಕು. ದೇಶದಲ್ಲಿ ಪ್ರಮುಖ 350 ಕ್ಕೂ ಹೆಚ್ಚು ಪ್ರಸಿದ್ಧ ದೇವಾಲಯಗಳನ್ನು ಒಡೆದು ಮಸೀದಿ ಕಟ್ಟಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದನ್ನು ಮುಸ್ಲಿಂ ಮುಖಂಡರು ಚರ್ಚಿಸಿ ಹಿಂದೂಗಳ ಪವಿತ್ರ ಸ್ಥಳಗಳನ್ನು ಅವರಿಗೆ ವಾಪಸ್ ನೀಡಲು ಸಹಕಾರ ಕೊಡಬೇಕು ಎಂದರು.

ದೇಶದಲ್ಲಿ ಹೊಸದಾಗಿ ನಿರ್ಮಾಣಗೊಂಡ ಯಾವುದೇ ಮಸೀದಿಗಳ ತಂಟೆಗೆ ಹಿಂದೂಗಳು ಬರುವುದಿಲ್ಲ. ಆದರೆ, ಪವಿತ್ರ ದೇವಾಲಯಗಳನ್ನು ಒಡೆದು ಮಸೀದಿ ನಿರ್ಮಾಣ ಮಾಡಿದ್ದನ್ನು ಮುಸ್ಲಿಂ ಹಿರಿಯರೇ ಹಿಂದೂಗಳಿಗೆ ಒಪ್ಪಿಸಿ ಹಿಂದೂ ಮುಸ್ಲಿಂ ಸಹೋದರತ್ವವನ್ನು ದೇಶದಲ್ಲಿ ಕಾಪಾಡಬೇಕು ಎಂದರು.

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಎಲ್ಲಾ ಧರ್ಮದವರ ಸಹಕಾರದಿಂದ ನಗರದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮುಂದೆ ಕೂಡ ಎಲ್ಲರೂ ಸಹಕಾರ ನೀಡಬೇಕೆಂದು ಶಾಸಕನಾಗಿ ನಾನು ವಿನಂತಿಸುತ್ತೇನೆ. ನಗರದಲ್ಲಿ 100 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಸಮುದಾಯ ಭವನ, ಡ್ರೈನೇಜ್ ನಿರ್ಮಾಣ ರಸ್ತೆ ಕಾಮಗಾರಿ ಮೊದಲಾದವರು ನಡೆಯುತ್ತಿದ್ದು, ಕೆಲವು ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ಕಾಲು ನೋವಿನ ಕಾರಣದಿಂದ ಅಧಿವೇಶನದಲ್ಲಿ ಭಾಗವಹಿಸಲು ಆಗಲಿಲ್ಲ. ಸಿದ್ಧರಾಮಯ್ಯನವರ ಟೀಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಕಾಂಗ್ರೆಸ್ ಆರೋಪಗಳಿಗೆ ಒಂದೇ ಒಂದು ಸಾಕ್ಷಿ ಒದಗಿಸಿಲ್ಲ. ರಾಜ್ಯದ ಜನತೆ ಕಾಂಗ್ರೆಸ್ ಆರೋಪವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!