ಶಿವಮೊಗ್ಗ: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸ್ಪಂದನಾ ಸಮಾವೇಶ ರಾಜಕೀಯ ಪ್ರೇರಿತ ಅಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸ್ಪಂದನಾ ಸಮಾವೇಶದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ಬಿಜೆಪಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ದಾವಣಗೆರೆಯಲ್ಲಿ 75 ಕೋಟಿ ರೂ. ಖರ್ಚು ಮಾಡಿ ಸಿದ್ಧರಾಮೋತ್ಸವ ಮಾಡಿದ್ದು ಅದು ರಾಜಕೀಯ ಪ್ರೇರಿತ. ಮೊದಲು ಅದರ ಲೆಕ್ಕ ಕೊಡಲಿ ಎಂದರು. 

ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಬಗ್ಗೆ ಜನತೆಗೆ ತಿಳಿಸಲು ಜನಸ್ಪಂದನಾ ಸಮಾವೇಶ ನಡೆಸಲಾಗಿದೆ. ಸಿದ್ಧರಾಮಯ್ಯ ಅವರು ಸಮಾವೇಶ ಮಾಡಿದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅಂತಹ ನೂರಾರು ಸಮಾವೇಶಗಳನ್ನು ಬಿಜೆಪಿ ಮಾಡಿದೆ. ಇನ್ನುಮುಂದೆ ಕೂಡ ಸಮಾವೇಶ ಮಾಡಲಿದ್ದೇವೆ. ಪ್ರಧಾನಿಯವರ ಮಂಗಳೂರು ಸಮಾವೇಶ ಭಾರಿ ಯಶಸ್ವಿಯಾಗಿದೆ ಎಂದರು.

ಕಾಲು ನೋವಿನಿಂದಾಗಿ ನಾನು ಇಂದಿನ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ. ನಿನ್ನೆಯ ಶಿವಮೊಗ್ಗದ ಹಿಂದೂ ಮಹಾಸಭಾ ವಿಸರ್ಜನಾ ಮೆರವಣಿಗೆ ಹಿಂದೆಂದೂ ಕಾಣದಂತಹ ಅಪಾರ ಜನಸ್ತೋಮ ಭಾಗವಹಿಸುವುದರ ಮೂಲಕ ಯಶಸ್ವಿಯಾಗಿದೆ. ಶಾಂತಿಯುತವಾಗಿ ಮೆರವಣಿಗೆ ಪೂರ್ಣಗೊಂಡಿದ್ದು, ಯಾವುದೇ ಗೊಂದಲ ಆಗದಂತೆ ಅದ್ಧೂರಿಯಾಗಿ ಸಂಭ್ರಮದಿಂದ ಎಲ್ಲಾ ವಯಸ್ಸಿನವರೂ ಭಾಗವಹಿಸುವುದರ ಮೂಲಕ ದಾಖಲೆ ನಿರ್ಮಿಸಿದೆ ಎಂದರು.

ನಿನ್ನೆಯ ವೈಭವ ಮತ್ತು ಅಷ್ಟು ದೊಡ್ಡ ಜನಸಂಖ್ಯೆ ಶಿವಮೊಗ್ಗದಲ್ಲೇ ಹುಟ್ಟಿ ಬೆಳೆದ ನಾನು ಇದುವರೆಗೂ ಕಂಡಿಲ್ಲ. ಶಿವಮೊಗ್ಗದಲ್ಲಿ ಇನ್ನುಮುಂದೆಯೂ ಕೂಡ ಎಲ್ಲಾ ಸಮಾರಂಭಗಳು ಶಾಂತಿಯುತವಾಗಿ ನಡೆಯಲಿವೆ ಎಂಬ ಆಶಯ ವ್ಯಕ್ತಪಡಿಸಿದರು.

ಕೆಲವು ಕಿಡಿಗೇಡಿಗಳ ಕೃತ್ಯಗಳಿಗೆ ಸರ್ಕಾರ ತಕ್ಕ ಪಾಠ ಕಲಿಸಿದೆ. ಹಿರಿಯರು ಕೂಡ ಅವರಿಗೆ ಬುದ್ಧಿ ಹೇಳಿದ್ದಾರೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದರು.

By admin

ನಿಮ್ಮದೊಂದು ಉತ್ತರ

You missed

error: Content is protected !!