ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಮಠದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ೬ ದಿನಗಳ ಬಳಿಕ ಇದೀಗ ಚಿತ್ರದುರ್ಗ ಪೊಲೀಸರು ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ್ದಾರೆ.
ಮೈಸೂರು ಪೊಲೀಸರು ಈ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಿದ್ದರು. ಇದೀಗ ಪೊಲೀಸರು ಶ್ರೀಗಳನ್ನು ಬಂಧಿಸಿದ್ದು, ಸಿಪಿಐ ಬಾಲಚಂದ್ರ ನಾಯಕ್, ಸಿಪಿಐ ಸತೀಶ್ ಚಂದ್ರನ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿ ಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರನ್ನು ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗ ಪೊಲೀಸರು ರಾತ್ರೋರಾತ್ರಿ ಬಂಧಿಸಿ ಮುಂಜಾನೆಯವರೆಗೆ ಜೈಲಿನಲ್ಲಿದ್ದ ಶ್ರೀಗಳನ್ನು ಎದೆನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.

ಇಂದು ಬೆಳಗ್ಗೆ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಜಿಲ್ಲಾಸ್ಪತ್ರೆಗೆ ಶ್ರೀಗಳನ್ನು ಕರೆತರಲಾಗಿದ್ದು ವೈದ್ಯರು ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ.

ಜೈಲಿನ ಕೋಣೆಯಲ್ಲಿ ನಿದ್ದೆ ಮಾಡದೇ ಚಡಪಡಿಸುತ್ತಿದ್ದ ಸ್ವಾಮೀಜಿ, ಕೋಣೆಯಲ್ಲಿ ಅಡ್ಡಾಡಿದರು ಎಂದು ತಿಳಿದುಬಂದಿದೆ. ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಕೇಳುವ ಸಾಧ್ಯತೆಗಳಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಕೋರುವ ಪೊಲೀಸರು, ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ.
ಇಂದು ಬೆಳಗ್ಗೆ ಆಸ್ಪತ್ರೆಗೆ ಸಹ ಮೈತುಂಬಾ ಬಿಳಿಬಟ್ಟೆಯನ್ನು ಹೊದ್ದುಕೊಂಡೇ ಬಂದರು. ಅಗತ್ಯಬಿದ್ದರೆ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಎದೆನೋವು ಎಂದು ಸಮಸ್ಯೆ ಹೇಳಿಕೊಂಡು ಬಂದ ಶ್ರೀಗಳಿಗೆ ಇಸಿಜಿ ಮಾಡಲಾಗಿದೆ. ಆಸ್ಪತ್ರೆಯ ಮೂವರು ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ.