ಶಿವಮೊಗ್ಗ,ಸೆ.02:
ಅನಿವಾರ್ಯವಾಗಿ ಅಗತ್ಯವಿದ್ದಾಗ ಸಾಲ ಪಡೆಯುವ ಇಲ್ಲವೇ, ಕೊಡು ಕೊಳ್ಳುವಿಕೆ ವ್ಯವಹಾರ ನಡೆಯುವುದು ಸಹಜ. ಆದರೆ, ಶಿವಮೊಗ್ಗದ ಹಲವು ಕಿರಾತಕ ಮನಸುಗಳು ಬರೋಬ್ಬರಿ ಹತ್ತು ಹದಿನೈದು ಪರ್ಸಂಟೇಜಿಗೆ ಸಾಲ ಕೊಡ್ತಾರೆ.
ಅದೂ ದಿಕ್ಕಿಲ್ಲದ ಮನೆಗಳನ್ನು ಹುಡುಕಿಕೊಡ್ತಾರೆ. ಇಂತಹ ವಿಚಾರಗಳಲ್ಲಿ ಅದೆಷ್ಟೋ ಜನ ಮನೆ ಮಠ ಮಾರಿಕೊಂಡಿದ್ದಾರೆ. ಮತ್ತೆಷ್ಟೋ ಜನ ಮಾನ ಮರ್ವಾದೆ ಹರಾಜು ಹಾಕಿಸಿಕೊಂಡಿದ್ದಾರೆ.
ಸಾಲವಲ್ಲ ಅದರ ಬಡ್ಡಿ ಕೊಡಲಾಗದೇ ಸೆರಗು ಹಾಸಿರುವ ಪ್ರಕರಣಗಳು ನಡೆಯುತ್ತಲೇ ಇವೆ.
ಅಂತಹ ಸಾಲಿನಲ್ಲಿ ನಿಲ್ಲುವ ಮತ್ತೊಂದು ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿನ ಲಿಮಿಟ್ ನಲ್ಲಿ ನಡೆದಿದೆ.
ದೂರಿನ ವಿವರ
ಇಲ್ಲಿ ವಿಧವೆ ಮಹಿಳೆಯೋರ್ವಳಿಗೆ ಬಡ್ಡಿ ವಿಚಾರದಲ್ಲಿ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ನಾಲ್ವರ ಕಿರುಕುಳಕ್ಕೆ ಬೇಸತ್ತು ಮೆಗ್ಗಾನ್ ನಲ್ಲಿ ಹೊರಗುತ್ತಿಗೆ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಯತ್ನಿಸಿದ ಮಹಿಳೆಯನ್ನ ಭಾರತಿ ಎಂದು ಗುರುತಿಸಲಾಗಿದ್ದು ಮಹಿಳೆಯು ಮೆಗ್ಗಾನ್ ನಲ್ಲಿ ಹೊರಗುತ್ತಿಗೆ ಕೆಲಸ ಮಾಡಿಕೊಂಡಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಅಶೋಕ ನಗರದಲ್ಲಿ ಮನೆ ಮಾಡಿಕೊಂಡಿರುವ ಮಹಿಳೆ ಗಂಡನನ್ನ ಕಳೆದುಕೊಂಡಿದ್ದಾರೆ.
ಅಶೋಕ ಎಂಬಾತನ ಬಳಿ ಶೇ.10 ರಷ್ಟು ಬಡ್ಡಿಯಂತೆ 20 ಸಾವಿರ ರೂ ಹಣ ಸಾಲ ಪಡೆದ ಮಹಿಳೆಯ ಗಂಡ 2021 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡನನ್ನ ಕಳೆದುಕೊಂಡ 6 ತಿಂಗಳ ನಂತರ ಮಹಿಳೆ ಪಡೆದ ಸಾಲಕ್ಕೆ ಚಕ್ರ ಬಡ್ಡಿ ಕೊಡು ಎಂಬುದು ಸಾಲ ನೀಡಿದವನ ಒತ್ತಡವಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಸಾಲ ನೀಡಿದ ಅಶೋಕ್ ಜೊತೆಗೆ ನಿಖಿಲ್, ಚಂದ್ರಮ್ಮ ಮತ್ತು ಲತಾ ಎಂಬುವರು ಸಾತ್ ನೀಡಿದ್ದಾರೆ ಎಂದೂ ಸಹ ಆರೋಪಿಸಲಾಗಿದೆ.
ಹೆಚ್ಚಿನ ಬಡ್ಡಿಗಾಗಿ ಅಶೋಕ್ ಮಹಿಳೆಗೆ ಲೈಂಗಿಕ ಕಿರುಕುಳ ಸಹ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆಗೆ ರಸ್ತೆಯಲ್ಲಿ ಅವಮಾನ ಮಾಡಿದ್ದಲ್ಲದೇ, ಜಾತಿ ನಿಂದನೆ,ಲೈಂಗಿಕ ಕಿರುಕುಳ, ಚಪ್ಪಲಿಯಲ್ಲಿ ಹೊಡೆತ ನೀಡಿದ್ದಾರೆಂದು ಆರೋಪಿಸಲಾಗಿದೆ.
ಇವರ ದೌರ್ಜನ್ಯದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮಹಿಳೆ ಪೊಲೀಸರ ಬಳಿ ಈ ಹೇಳಿಕೆ ನೀಡಿದ್ದಾರೆ.
ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ ಅಶೋಕ್, ನಿಖಿಲ್, ಚಂದ್ರಮ್ಮ ಮತ್ತು ಲತಾರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಹಿಳೆ ದೊಡ್ಡಪೇಟೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ



