ಪೊಲೀಸರೇ
ಈ ನೆಲದ ಋಣ ತೀರಿಸಿ,
ಸಂವಿಧಾನಾತ್ಮಕ ಕರ್ತವ್ಯ ಪಾಲಿಸಿ,
ಜನರ ನಂಬಿಕೆ ಉಳಿಸಿಕೊಳ್ಳಿ.
ನಮಗೆ ದಯವಿಟ್ಟು ಸತ್ಯ ತಿಳಿಸಿ,…
ಮಾಧ್ಯಮಗಳ ಸುದ್ದಿಯ ಆಧಾರದ ಮೇಲೆ ಸಾಮಾನ್ಯ ಜನರಾದ ನಾವು ಯಾವ ತೀರ್ಮಾನ ಕೈಗೊಳ್ಳಬಹುದು…. ಇದರ ವಿವಿಧ ಆಯಾಮಗಳ ಪರಿಶೀಲನೆ ಅಗತ್ಯ.
ಮೊದಲನೆಯದಾಗಿ,…
ಸನ್ಯಾಸ, ವಿರಕ್ತ, ಸರ್ವಸಂಗ ಪರಿತ್ಯಾಗ, ಬ್ರಹ್ಮಚರ್ಯ, ಅವಿವಾಹಿತ ಮುಂತಾದ ಬದುಕಿನ ಕ್ರಮಗಳೇ ವಿಶೇಷ ಸಂದರ್ಭ ಹೊರತುಪಡಿಸಿ ಅಸಹಜ – ಅಸ್ವಾಭಾವಿಕ – ಕ್ರಮಬದ್ಧವಲ್ಲದ ಒತ್ತಡ – ಅನಿವಾರ್ಯ ತೋರಿಕೆಯ ಬಲವಂತ ಪ್ರದರ್ಶನ ಎಂದೇ ಪರಿಗಣಿಸಬಹುದು.
ಲೈಂಗಿಕತೆ ಎಂಬುದು ಜೀವಿಗಳ ಒಂದು ಸಹಜ ಕ್ರಿಯೆ. ಆರೋಗ್ಯವಂತ ಮನುಷ್ಯನ ಊಟ ನಿದ್ರೆ ವಿಸರ್ಜನೆ ಮೈಥುನ ಎಲ್ಲವೂ ದೇಹದ ಸಹಜ ಮತ್ತು ಅನಿವಾರ್ಯ ಕರ್ಮಗಳು. ಅದರಲ್ಲಿ ಯಾವುದೇ ಅಶ್ಲೀಲ, ವಿಶೇಷತೆ, ಮುಚ್ಚುಮರೆ, ಇತರರಿಗಿಂತ ಭಿನ್ನ ಎಂಬುದು ಯಾವುದೂ ಇರುವುದಿಲ್ಲ. ನಾಗರಿಕ ಸಮಾಜದಲ್ಲಿ ಇದಕ್ಕೆ ಕೆಲವು ನೀತಿ ನಿಯಮಗಳು – ಕಟ್ಟುಪಾಡುಗಳು ಇರಬಹುದು. ಆದರೆ ಯಾವುದೂ ಅಸಹಜವಲ್ಲ ಕಾನೂನಿಗೆ ವಿರುದ್ಧವಾದ ನಡವಳಿಕೆಗಳನ್ನು ಹೊರತುಪಡಿಸಿ.
ಆದರೆ ಈ ಸ್ವಾಮೀಜಿ, ಪಾದ್ರಿ, ಮೌಲ್ವಿ ಮುಂತಾದ ಕೆಲವು ಧಾರ್ಮಿಕ ಕಟ್ಟುಪಾಡುಗಳಲ್ಲಿ ಕೆಲವರನ್ನು ಹೊರತುಪಡಿಸಿ ಬಹುತೇಕರು ಲೈಂಗಿಕತೆ ಅಪರಾಧ ಎಂದು ಪರಿಗಣಿಸಿ ಹೆಣ್ಣು ಅಥವಾ ಗಂಡಿನ ಸಂಪರ್ಕ ತಿರಸ್ಕರಿಸಿ ಕೌಟುಂಬಿಕ ವ್ಯವಸ್ಥೆಯನ್ನು ದಿಕ್ಕರಿಸಿ ವಿಶೇಷ ಸಂಕಲ್ಪದೊಂದಿಗೆ ದೈವಿಕ ಮಹತ್ವ ಪಡೆಯುವ ಭ್ರಮೆಗೆ ಒಳಗಾಗುತ್ತಾರೆ. ಊಟ ಬಟ್ಟೆ ವಸತಿ ನಿದ್ರೆ ವಿಸರ್ಜನೆ ರೋಗ ರುಜಿನಗಳು, ದ್ವೇಷ ಅಸೂಯೆಗಳು ಎಲ್ಲವೂ ಸಾಮಾನ್ಯರಂತೆ ಇದ್ದರೂ, ಕೇವಲ ಕೆಲವು ಧಾರ್ಮಿಕ ಗ್ರಂಥಗಳ ಪಠಣ ಮತ್ತು ಆಚರಣೆಗಳ ಮೂಲಕ ಸಾಮಾನ್ಯ ಜನರಿಗಿಂತ ಭಿನ್ನ ಎಂದು ತೋರಿಸಿಕೊಂಡು ಒಂದು ಭ್ರಮಾತ್ಮಕ ಭಕ್ತಿಯ ಅಧಿಕಾರದಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳುತ್ತಾರೆ. ಆ ಮೂಲಕ ಜನರಿಂದ ಗೌರವ, ಹಣ, ಭಕ್ತಿ ಪಡೆದು ಕೆಲವು ಸಂಸ್ಥೆಗಳನ್ನು ಬೆಳೆಸಿ ಸೇವೆಯ ಹೆಸರಿನಲ್ಲಿ – ಧರ್ಮದ ಪ್ರಚಾರದ ಹೆಸರಿನಲ್ಲಿ ಜೀವನ ನಡೆಸುತ್ತಾರೆ. ಜನರೂ ಸಹ ಇವರನ್ನು ವಿಶೇಷ ವ್ಯಕ್ತಿಗಳೆಂದು ಪರಿಗಣಿಸುತ್ತಾರೆ.
ಅಂತಹವರು ಜನರ ನಂಬಿಕೆಗಳಿಗೆ ವಿರುದ್ಧವಾಗಿ ವರ್ತಿಸಿದಾಗ ಜನರು ಅದೊಂದು ಗಂಭೀರ ಅಪರಾಧ ಮತ್ತು ಅನೈತಿಕತೆ ಎಂದು ಭಾವಿಸಿ ಸಾಮಾನ್ಯರಿಗಿಂತ ಹೆಚ್ಚಿನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವರೂ ನಮ್ಮಂತೆ ಮನುಷ್ಯರು ಎಂದು ಭಾವಿಸುವುದಿಲ್ಲ. ಆ ಕಾರಣದಿಂದಾಗಿ ಇಂದು ಸ್ವಾಮೀಜಿಗಳ ಸಹಜ ಬದುಕು ಸಹ ಅಸಹಜವಾಗಿಯೇ ಕಾಣುತ್ತದೆ.
ಎರಡನೆಯದಾಗಿ,
ಯಾವುದೇ ಒಪ್ಪಿತ, ವಯಸ್ಕ ಗಂಡು ಹೆಣ್ಣಿನ ನಡುವಿನ ಲೈಂಗಿಕತೆ ಅಪರಾಧವಲ್ಲ ಮತ್ತು ಸ್ವಾಮೀಜಿಗಳ ವಿಷಯದಲ್ಲಿಯೂ ಇದನ್ನು ಖಾಸಗಿ ಎಂದು ಪರಿಗಣಿಸಿ ನಾಲ್ಕು ಗೋಡೆಯ ನಡುವಿನ ವಿಷಯವನ್ನು ನಿರ್ಲಕ್ಷಿಸಬಹುದು. ಆದರೆ ಅಪ್ರಾಪ್ತ, ಸಲಿಂಗ, ಒತ್ತಾಯದ, ಆಸೆ ಆಮಿಷಗಳ, ಅನಾಥ ಬಡ ಮಕ್ಕಳ ಮೇಲಿನ ಯಾವುದೇ ರೀತಿಯ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಶಿಕ್ಷಾರ್ಹ ಅಪರಾಧ.
ಮೂರನೆಯದಾಗಿ,
ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯರ ವಿಷಯದಲ್ಲಿ ಅವರು ಸುಮಾರು 65/70 ವರ್ಷ ವಯಸ್ಸಿನ ವಯೋವೃದ್ದರು, ಅನುಭವಿಗಳು, ರಾಜ್ಯದ ಅತ್ಯಂತ ಪ್ರತಿಷ್ಠಿತ ಮಠದ ಸ್ವಾಮಿಗಳು, ಚಿಂತಕರು, ಸಾಹಿತಿಗಳು ಎಲ್ಲವೂ ಆಗಿದ್ದಾರೆ. ಅಲ್ಲದೇ ಈ ವಯಸ್ಸಿನ ಪುರುಷ ಪ್ರಭಾವಶಾಲಿ ವ್ಯಕ್ತಿ ತನ್ನ ಲೈಂಗಿಕ ಆಸಕ್ತಿಯನ್ನು ಗೌಪ್ಯವಾಗಿ, ಗೌರವಾನ್ವಿತವಾಗಿ, ಖಾಸಗಿಯಾಗಿ ಪೂರೈಸಿಕೊಳ್ಳಲು ಈಗಿನ ಸಂದರ್ಭದಲ್ಲಿ ಹಲವಾರು ಮಾರ್ಗಗಳು ಇರುತ್ತವೆ. ಹಣ, ಅಧಿಕಾರ, ಬುದ್ದಿವಂತಿಕೆ, ಕೊಠಡಿಯ ಸೌಕರ್ಯಗಳು, ಗೌಪ್ಯತೆಯ ದಾರಿಗಳು, ಅದಕ್ಕೆ ಸಹಕರಿಸಲು ಇಚ್ಚಿಸುವ ಸ್ವಯಂ ಒಪ್ಪಿತ ಗೆಳತಿಯರು ಮುಂತಾದ ಎಲ್ಲಾ ಸಾಧ್ಯತೆಗಳು ಇರುವಾಗ ಈ ರೀತಿಯ ತೀರಾ ಕೆಳಮಟ್ಟದ ಅಸಹ್ಯಕರ ವರ್ತನೆ ತುಂಬಾ ಆಶ್ಚರ್ಯಕರ ಎಂದು ಭಾವಿಸಬಹುದು.
ನಾಲ್ಕನೆಯದಾಗಿ…
ಇದರ ಇನ್ನೊಂದು ಮುಖವೂ ಇದೆ. ವ್ಯಕ್ತಿಯ ಸಾಮಾನ್ಯ ಲೈಂಗಿಕ ಆಸಕ್ತಿಯ ಜೊತೆಗೆ ಕೆಲವರಲ್ಲಿ ವಿಕೃತ ಕಾಮ ಸದಾ ಜಾಗೃತವಾಗಿರುತ್ತದೆ. ಆ ವಿಕೃತ ಕಾಮ ವಯಸ್ಸಾಗುತ್ತಾ ಜಾಸ್ತಿಯಾಗುತ್ತದೆ. ಅಸಾಂಪ್ರದಾಯಿಕವಾದ ಸಲಿಂಗ ಅಥವಾ ಅಸಹಾಯಕ ಚಿಕ್ಕ ಮಕ್ಕಳ ದುರುಪಯೋಗ, ಸಿಗುವ ಎಲ್ಲರೂ ಬೇಕು ಎಂಬ ವಿಕೃತಿ, ತೀರಾದ ದಾಹ, ತನ್ನಂತ ಮಹಾನ್ ವ್ಯಕ್ತಿಯ ಮುಂದೆ ಈ ಅನಾಥ ಮಕ್ಕಳು ಬೆತ್ತಲಾಗುವುದು ಯಾವ ಮಹಾ ಎಂಬ ದುರಹಂಕಾರ ಅಥವಾ ಅವರಿಗೇ ಪ್ರಚೋದಿಸಿ ಬೇರೆ ಲಾಭ ಪಡೆಯುವ ಅವರ ಸಹಚರರ ದುರ್ಬುದ್ದಿ ಹೀಗೆ ಇತರ ಕಾರಣಗಳು ಇರುತ್ತವೆ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಇವರ ಕೆಲವು ವಿರೋಧಿಗಳು ಇದನ್ನು ಅವರ ಅನುಕೂಲಕ್ಕೆ ತಕ್ಕಂತೆ ತಮ್ಮ ಸ್ವಾರ್ಥಕ್ಕಾಗಿ ಸಮಯ ಸಾಧಿಸಿ ಅವರನ್ನು ಬೆತ್ತಲು ಮಾಡಿರಲೂ ಬಹುದು.
ಐದನೆಯದಾಗಿ,
ನಿಜಕ್ಕೂ ರಾಜ್ಯದ ಅತ್ಯಂತ ಪ್ರಬಲ, ಪ್ರಗತಿಪರ ಈ ಸ್ವಾಮಿಗಳನ್ನು ಬೇಕಂತಲೇ ಅವರ ಹಿತ ಶತ್ರುಗಳು ಈ ಘಟನೆಯಲ್ಲಿ ಅವರು ಮಾಡದೇ ಇರುವ ತಪ್ಪನ್ನು ಕುತಂತ್ರ ಮಾಡಿ ಸಿಕ್ಕಿ ಹಾಕಿಸಲು ಪ್ರಯತ್ನಿಸಿರಬಹುದೇ….
ಈ ಸ್ವಾಮೀಜಿಗಳಿಗೆ ರಾಜ್ಯದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸೇರಿ ಅಧಿಕಾರಸ್ಥರು ತುಂಬಾ ಹತ್ತಿರದವರು. ಅಲ್ಲದೇ ಆ ಇಬ್ಬರು ಮಕ್ಕಳನ್ನು ಲೈಂಗಿಕ ದೌರ್ಜನ್ಯದ ವಿಷಯದಲ್ಲಿ ಬಹಿರಂಗವಾಗಿ ಸುಳ್ಳು ಹೇಳಿಸಿ ಯಾರೇ ಆಗಲಿ ಅರಗಿಸಿಕೊಳ್ಳುವುದು ಕಷ್ಟ. ಈಗಿನ ವ್ಯವಸ್ಥೆಯಲ್ಲಿ ಪೋಲೀಸರು ಆ ಮಕ್ಕಳಿಂದ ಹೇಗಾದರೂ ಮಾಡಿ ನಿಜ ಹೊರ ತೆಗೆದು ಷಡ್ಯಂತ್ರ ಬಯಲು ಮಾಡುವ ಸಾಧ್ಯತೆ ಇದೆ. ಮಕ್ಕಳು ಅಷ್ಟು ಸುಲಭವಾಗಿ ಈ ವಿಷಯದಲ್ಲಿ ಸುಳ್ಳು ಹೇಳುವುದು ಕಷ್ಟ ಎಂದು ವೈಯಕ್ತಿಕವಾಗಿ ನಾನು ಭಾವಿಸುತ್ತೇನೆ. ಘಟನೆ ನಡೆದಿರುವ ಸಾಧ್ಯತೆಯೇ ಹೆಚ್ಚಾಗಿದೆ. ಮುಂದೆ ನ್ಯಾಯಾಲಯದಲ್ಲಿ ಸಾಕ್ಷ್ಯಗಳ ಕೊರತೆಯಿಂದ ಸ್ವಾಮೀಜಿ ನಿರಪರಾಧಿ ಎಂದು ಸಾಬೀತಾಗಬಹುದು. ಆದರೆ ಈ ಕ್ಷಣದಲ್ಲಿ ಒಬ್ಬ ಅತ್ಯಂತ ಪ್ರಭಾವಿ ವ್ಯಕ್ತಿಯ ಮೇಲೆ ಫೋಕ್ಸೋ ಕಾಯ್ದೆಯ ಅಡಿಯಲ್ಲಿ ಸುಳ್ಳು ಎಫ್ಐಆರ್ ದಾಖಲಿಸುವುದು ಅಷ್ಟು ಸುಲಭವಲ್ಲ.
ಕೊನೆಯದಾಗಿ,
ಸತ್ಯ ಏನೇ ಇರಲಿ, ಒಬ್ಬ ವ್ಯಕ್ತಿಯ ಮೇಲೆ ಫೋಕ್ಸೋ ಕಾಯ್ದೆಯ ಮೇಲೆ ಕೇಸು ದಾಖಲಾದ ಮೇಲೆ ಚಿತ್ರದುರ್ಗ ಪೋಲೀಸರು ಅಥವಾ ರಾಜ್ಯ ಪೋಲೀಸ್ ಮಹಾ ನಿರ್ದೇಶಕರು, ಗೃಹ ಇಲಾಖೆಯ ಸಂಬಂಧಪಟ್ಟವರ ಕಾನೂನು ಪಾಲನೆ ಅತ್ಯಂತ ಕೆಳಮಟ್ಟದಲ್ಲಿದೆ. ಎಷ್ಟೊಂದು ಶೀಘ್ರವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತೋ ಅದಕ್ಕೆ ವಿರುದ್ಧವಾಗಿ ಆರೋಪಿಗೆ ಸಹಕರಿಸಿ ತಮ್ಮ ಹುದ್ದೆಯ ಘನತೆಗೆ ಮಸಿ ಬಳಿದಿದ್ದಾರೆ.
ಸಾಮಾನ್ಯ ಜನ ಕೇವಲ ಹುಡುಗಿಯರನ್ನು ಚುಡಾಯಿಸಿದ ಮಾತ್ರಕ್ಕೆ ಬೀದಿಯಲ್ಲಿ ಬಟ್ಟೆ ಬಿಚ್ವಿ ಥಳಿಸುವ, ಅತ್ಯಾಚಾರ ಪ್ರಕರಣಗಳಲ್ಲಿ ನಕಲಿ ಎನ್ ಕೌಂಟರ್ ಮಾಡುವ ಪೋಲೀಸರು ಇವರ ವಿಷಯದಲ್ಲಿ ಸಾಮಾನ್ಯ ಕ್ರಮ ಸಹ ಜರುಗಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವುದು ಅಕ್ಷಮ್ಯ. ಪೋಲೀಸರು ಮೇಲಿನ ನಂಬಿಕೆ ಇನ್ನಷ್ಟು ಕಡಿಮೆಯಾಗುತ್ತದೆ. ಜನರು ಸಹ ಅತ್ಯಾಚಾರ ಎಂದರೆ ತುಂಬಾ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ತಣ್ಣಗಿದ್ದಾರೆ.
ಒಟ್ಟಿನಲ್ಲಿ ಈ ಕ್ಷಣಕ್ಕೆ ಮೇಲ್ನೋಟಕ್ಕೆ ಘಟನೆ ನಡೆದಿರುವ ಸಾಧ್ಯತೆ ಗೋಚರಿಸುತ್ತಿದೆ. ಆದರೂ ಒಂದು ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಇನ್ನಷ್ಟು ತನಿಖೆಯ ಮಾಹಿತಿಗಾಗಿ ಕಾಯೋಣ. ಆದರೆ ಸ್ವಾಮೀಜಿ ಎಂಬ ಕಾರಣದಿಂದ ಅಥವಾ ಧಾರ್ಮಿಕ ಕಾರಣದಿಂದ ಅಥವಾ ಓಟಿನ ರಾಜಕೀಯ ಕಾರಣದಿಂದ ದಯವಿಟ್ಟು ಈ ಘಟನೆಯನ್ನು ನೋಡದೆ ಪೋಲೀಸ್ ವ್ಯವಸ್ಥೆ ಯಾರ ಹಂಗಿಗೂ ಒಳಗಾಗದೆ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿ ಅತ್ಯಂತ ಪ್ರಾಮಾಣಿಕ ತನಿಖೆ ಮಾಡಲಿ. ಒಂದು ವೇಳೆ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಅಮಾಯಕರಾಗಿದ್ದು ಇದು ಒಂದು ಷಡ್ಯಂತ್ರವಾಗಿದ್ದರೆ ಖಂಡಿತ ಎಲ್ಲರೂ ಸಂತೋಷ ಪಡೋಣ. ಇಲ್ಲದಿದ್ದರೆ ಅವರಿಗೆ ಎಲ್ಲರಂತೆ ಶಿಕ್ಷೆಯಾಗಲಿ.
ಬಹುದೊಡ್ಡ ಮಾನವೀಯ ಮೌಲ್ಯಗಳನ್ನು – ಭಾರತದ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ, ಜನರಲ್ಲಿ ಭರವಸೆ ತುಂಬುವ ಬಹುದೊಡ್ಡ ಜವಾಬ್ದಾರಿ ಸಾರ್ವಜನಿಕರ ತೆರಿಗೆ ಹಣದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಉನ್ನತ ಪೋಲೀಸ್ ಅಧಿಕಾರಿಗಳ ಮೇಲಿದೆ.
ದಯವಿಟ್ಟು ನಮ್ಮಂತ ಸಾಮಾನ್ಯರಿಗೆ ಸತ್ಯವನ್ನು ತಿಳಿಸಿ ಪೋಲೀಸ್ ಅಧಿಕಾರಿಗಳೇ. ಈ ನೆಲದ ಋಣ ತೀರಿಸಿ ಮತ್ತು ಜನರ ನಂಬಿಕೆ ಉಳಿಸಿ ಧನ್ಯವಾದಗಳು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……