ಶಿವಮೊಗ್ಗ,
ನಗರದಲ್ಲಿ ಬಿಜೆಪಿಯವರು ಏನೇ ಮಾಡಿದರೂ ಅದನ್ನು ಪ್ರ್ರಶ್ನಿಸುವ ಶಕ್ತಿಯನ್ನು ಪೊಲೀಸ್ ಇಲಾಖೆ ಕಳೆದುಕೊಂಡಂತಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.


ಅವರು ಇಂದು ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿರಂತರವಾಗಿ ನಿಷೇಧಾಜ್ಞೆ ವಿಧಿಸುತ್ತಿರುವುದರಿಂದ ವ್ಯಾಪಾರ ಉದ್ಯಮಕ್ಕೆ ಕಷ್ಟವಾಗಿದೆ. ಪ್ರತಿನಿತ್ಯ ದುಡಿದು ತಿನ್ನುವವರಿಗೆ ಕಷ್ಟವಾಗಿದೆ. ಸೆಕ್ಷನ್ ವಿಧಿಸಿದರೂ ಮುಂಚಿತವಾಗಿಯೇ ಅಘೋಷಿತವಾಗಿ ಬಂದ್ ಮಾಡಿಸಲಾಗುತ್ತಿದೆ ಎಂದರು.


ನಗರದಲ್ಲಿ ಗಲಾಟೆ ನಡೆದಾಗಲೆಲ್ಲಾ ಬಿಜೆಪಿ ಕಾರ್ಯಕರ್ತರು ಕಣ್ಣಿಗೆ ಕಾಣಿಸುತ್ತಿಲ್ಲ. ಬೇರೆಯವರನ್ನೇ ಗುರಿ ಮಾಡಿ ಬಂಧಿಸಲಾಗುತ್ತಿದೆ. ತಾರತಮ್ಯದ ರೀತಿಯಲ್ಲಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ.

ಕೈಕೆಲಸ ಮಾಡು ವವರು, ತಳ್ಳುಗಾಡಿ ವ್ಯಾಪಾರಸ್ಥರು ಕೂಡ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಇದನ್ನು ಪೊಲೀಸರು ಪರಿಗಣಿಸುತ್ತಿಲ್ಲ ಎಂದು ಹೇಳಿದರು. ಛೇಂಬರ್ ಆಫ್ ಕಾಮರ್ಸ್ ನವರು ಕೂಡ ಪೊಲೀಸ್ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವ್ಯಾಪಾರ ನಡೆಸದೆ ಮಳಿಗೆ ಬಾಡಿಗೆ, ತೆರಿಗೆ ಕಟ್ಟುವುದು ದುಸ್ತರವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದರು.


ಆಗಸ್ಟ್ ೧೫ ರಂದು ನಗರದಲ್ಲಿ ನಡೆದ ಘಟನೆ ದಿನಕ್ಕೊಂದು ತಿರುವು ಪಡೆಯುತ್ತಿರುವುದು ಆತಂಕದ ಸಂಗತಿ ಎಂದ ಅವರು, ಶಿವಪ್ಪ ನಾಯಕ ಮಾರುಕಟ್ಟೆಯಲ್ಲಿ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದವರೊಂದಿಗೆ ನಮ್ಮ ಪಕ್ಷದ ಮುಖಂಡರು ಮಾತನಾಡಿ, ಸೂಕ್ತ ತಿಳುವಳಿಕೆ ನೀಡಿದ್ದರು. ಅಷ್ಟರಲ್ಲಿ ಅವರ ಬಂಧನವೂ ಆಗಿತ್ತು ಎಂದರು.


ಪೊಲೀಸ್ ಇಲಾಖೆ ತಾರತಮ್ಯ ಎಸಗದೇ ಸಾರ್ವಜನಿಕರ ಹಿತರಕ್ಷಣೆಯ ಕಡೆಗೆ ಗಮನ ಕೊಡಬೇಕು. ಎಲ್ಲಾ ಸಾರ್ವಜನಿಕರು ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ, ಪೊಲೀಸರ ಇತ್ತೀಚಿನ ನಡವಳಿಕೆ ಸಂಶಯ ತರುವಂತಿದೆ. ಎಎಸ್‌ಐಗೆ ಮೇಲೆ ಹಲ್ಲೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತನ ಬಂಧನವಾಗಿಲ್ಲ.

ಎಫ್‌ಐಆರ್ ಕೂಡ ದಾಖಲಾಗಿಲ್ಲ. ಒಂದು ಕಡೆಯವರ ಮೇಲೆ ಮಾತ್ರ ಪೊಲೀಸರ ಕಾರ್ಯಾಚರಣೆ ಕಣ್ಣಿಗೆ ಕಾಣುತ್ತಿದೆ. ಶಿಸ್ತುಕ್ರಮದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ತಪ್ಪು ಯಾರೇ ಮಾಡಿದರೂ ಕೂಡ ತಾರತಮ್ಯ ಮಾಡದೇ ಪೊಲೀಸರು ಕ್ರಮ ಕೈಗೊಳ್ಳಬೇಕು. ೧೪೪ ಸೆಕ್ಷನ್ ಎಂದರೆ ಬಾಗಿಲು ಹಾಕಿಸುವುದಲ್ಲ. ಮನೆಗೆ ಹೋಗಿ ಎಂದು ಜೋರು ಮಾಡಿದ ಕೂಡಲೇ ಪೊಲೀಸರ ಕರ್ತವ್ಯ ಮುಗಿಯುವುದಿಲ್ಲ.

ಜನ ನಿಮ್ಮ ಕಾರ್ಯ ವೈಖರಿಯನ್ನು ಗಮನಿಸುತ್ತಿದ್ದಾರೆ. ಶಿವಮೊಗ್ಗ ನಗರ ಶಾಸಕರ ವೈಫಲ್ಯ ಎದ್ದುಕಾಣುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯು. ಶಿವಾನಂದ, ಲಕ್ಷ್ಮಣ, ಮಂಜುನಾಥ ಬೊಮ್ಮನಕಟ್ಟೆ, ಶಿವಾನಂದ, ಎಸ್.ಕೆ. ಶಿವಾನಂದ, ಶ್ಯಾಮ್‌ಸುಂದರ್, ದೀಪಕ್ ಸಿಂಗ್, ರಾಘು, ಜಗನ್ನಾಥ, ಆರೀಫ್, ಸ್ವಾಮಿನಾಥ್, ಪ್ರಸನ್ನ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!