ಅಕ್ರಮ ಕಲ್ಲುಗಣಿಗಾರಿಕೆ ತಡೆಯಲಾಗದ ಭ್ರಷ್ಟ ವ್ಯವಸ್ಥೆ ವಿರುದ್ದ ಆಕ್ರೋಶ
ಸಂದೀಪ್, ತೀರ್ಥಹಳ್ಳಿ
ತೀರ್ಥಹಳ್ಳಿ,ಆ.31 :
ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದಿಷ್ಟು ಕಲ್ಲು ಬಂಡೆಗಳು ನಿತ್ಯ ಸಿಡಿದೇಳುತ್ತವೆ…!
ಆಶ್ಚರ್ಯವಾಯ್ತೇ….? ಇದು ದೇವರ ಹೋಗಲಿ ದೆವ್ಬದ ಆಟವಲ್ಲ. ಒಂದೆರಡು ಸಕ್ರಮದ ಸುಳಿವಿನ ದಾರದೊಳಗೆ ಬಾರೀ ಪ್ರಮಾಣದ ಅಕ್ರಮದ ವಾಸನೆ ಬರುವಂತಹ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಈ ಕಲ್ಲು ಬಂಡೆಗಳಲ್ಲಿ ಶೇ30% ಭಾಗದಷ್ಟು ಮಾತ್ರ ಸರ್ಕಾರದಿಂದ ಅನುಮತಿ ಪಡೆದ ಕಲ್ಲು ಕೋರೆಗಳು.
ಇನ್ನುಳಿದವುಗಳು ಅಕ್ರಮ ಕಲ್ಲು ಕ್ವಾರಿ ನಡೆಸುವವರಿಗೆ ಕೊರತೆ ಇಲ್ಲ,
ಯಂತ್ರಗಳನ್ನು ಬಳಸಿ ಮಣ್ಣು ತೆಗೆದು ಅಕ್ರಮ ಕಲ್ಲು ಕೋರೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿ, ಪ್ರತಿ ದಿನ ಟನ್ ಗಟ್ಟಲೆ ಕಲ್ಲುಗಳನ್ನು ಸಾಗಾಟ ಮಾಡಿ, ಪ್ರತಿದಿನ ಲಕ್ಷಾಂತರ ವ್ಯವಹಾರ ನಡೆಸಿ,ತೆರಿಗೆ ವಂಚನೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ತೀರ್ಥಹಳ್ಳಿ ಮೇಲಿನಕುರುವಳ್ಳಿ ಕಲ್ಲು ಕ್ವಾರೆಗಳಲ್ಲಿ ಬೆಳ್ಳಂ ಬೆಳಗ್ಗೆಯಿಂದ ಪ್ರತಿ ಗಂಟೆಗೊಮ್ಮೆ ಎಂಬಂತೆ ಸಂಜೆಯಿಂದ ಮದ್ಯ ರಾತ್ರಿಯವರೆಗೆ ಭಾರಿ ಶಬ್ದ ಭರಿತ, ಡೈನಾಮೆಟ್ ಬ್ಲಾಸ್ಟ್ ನಡೆಯುತ್ತಲೇ ಇರುತ್ತೆ.
ಸ್ಥಳೀಯರ ವಿರೋಧದ ನಡುವೆಯೂ ಬ್ಲಾಸ್ಟಿಂಗ್ ನಡೆಯುತ್ತಿದ್ದು ಕಂಡೂ ಕಾಣದಂತಾದ ನಿದ್ರಾವಸ್ಥೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತಾಲೂಕು ಆಡಳಿತ,ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಇಲ್ಲಿ ಸೀಮಿತ ಅವಧಿಯಲ್ಲಿ ಬೇಟಿ ಮಾಡಿ ಅದೇನು ಕಡಿದು ಹೋಗುತ್ತಾರೋ ಭಗವಂತನೇ ಬಲ್ಲ.
ಅಕ್ರಮಗಳನ್ನು ಪ್ರಶ್ನಿಸುವವರಿಗೆ ಬೆದರಿಕೆ ಹಾಕಿ ಇಲ್ಲಸಲ್ಲದ ಆರೋಪ ಮಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ಮುಂದಿನ ಪೀಳಿಗೆಗೆ ಬೇಕಾಗುವಂತಹ ಸಂಪನ್ಮೂಲವನ್ನು ಈಗಲೇ ಲೂಟಿ ಮಾಡಿ, ನಿರಂತರ ಅಕ್ರಮ ಕಲ್ಲು ಕ್ವಾರಿಗಳಲ್ಲಿ ಡೈನಾಮೆಟ್ ಬ್ಲಾಸ್ಟ್ ಮಾಡಿ, ಬಡವರ ಮನೆ,ಕುಡಿಯುವ ನೀರಿನ ಬಾವಿ,ರೈತರ ಜಮೀನು,ಜಲಚರ ಜೀವಿ, ಪ್ರಾಣಿ ಪಕ್ಷಿ, ಸಂಕುಲಗಳಿಗೆ ಹಾನಿ ಉಂಟು ಮಾಡಿ ವಂಚಿಸುತ್ತಿದ್ದಾರೆ.
ಬಂಡೆ ಕೆಲವುಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ N.H169 ಹೊಂದಿಕೊಂಡಂತೆ ಪಕ್ಕದಲ್ಲೇ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಂತೂ ಕಣ್ಣುಮುಚ್ಚಿ ಕುಳಿತಿದ್ದಾರೆ.
ಸಾರ್ವಜನಿಕರಿಗೆ ಕಂಟಕ ಪ್ರಾಯವಾಗಿರುವ ಮೇಲಿನ ಕುರುವಳ್ಳಿ ಕೆಲವು ಅಕ್ರಮ ಕಲ್ಲು ಕ್ವಾರಿ ಮತ್ತು ಕುರುವಳ್ಳಿ ಅಗ್ರಹಾರ ಆಶ್ರಯ ಬಡಾವಣೆಯ ಸಮೀಪದಲ್ಲಿ, ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸ್ಥಳೀಯ ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ, ಪರಿಸರ ಪ್ರೇಮಿಗಳು,
ಕಂಡರೂ ಕಾಣದಂತೆ ಕುಳಿತಿರುವುದು ವಿಪರ್ಯಾಸ. ದುರಂತವೇ ಹೌದು.
ತೀರ್ಥಹಳ್ಳಿಯ ನೂತನ ಸರ್ಕಲ್ ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರು ಈ ಡೈನಾಮೆಟ್ ಬ್ಲಾಸ್ಟಿಂಗ್ ನಡೆಸುವವರ ವಿರುದ್ಧ ಕ್ರಮ ಕೈಗೊಂಡಿದ್ದರು. ಆದರೆ ತದನಂತರದಲ್ಲಿ ಇದೀಗ ಮತ್ತೆ ನಿರಂತರವಾಗಿ ಡೈನಾಮಿಕ್ ಬ್ಲಾಸ್ಟಿಂಗ್ ಬೆಳ್ಳಂಬೆಳಗ್ಗೆ ಮಾಡುತ್ತಿರುವುದರ ಹಿಂದಿನ ಮರ್ಮವೇನು ಎಂದು ತಿಳಿಯುತ್ತಿಲ್ಲ!?
ಒಟ್ಟಾರೆ ಈ ಭಾಗದಲ್ಲಿ ಅಕ್ರಮ ನಡೆಸುವರ ವಿರುದ್ಧ ಪ್ರಶ್ನಿಸುವವರ ದನಿ ಅಡಕ ಮಾಡಿ, ಕಾರ್ಮಿಕರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿರುವುದು ದುರಂತ,
ಈ ಪ್ರದೇಶದಲ್ಲಿ ತನ್ನ ದೇಹವನ್ನು ತೇಯ್ದು ಕಲ್ಲು ಒಡೆಯುವ,ಹೊರುವ ಕಾರ್ಮಿಕರಿಗೆ ಈವರೆಗೂ ಈ ಬಂಡೆಯಿಂದ ಯಾವುದೇ ಪ್ರಯೋಜನವಾಗಿಲ, ಇನ್ನು ಸ್ಥಳೀಯವಾಗಿ ಬಡವರು ಕಟ್ಟುವ ಮನೆಗಳಿಗೆ ದುಡ್ಡು ಕೊಟ್ಟರೂ ಕಲ್ಲು ಸಿಗುವುದಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ,
ಕಾರ್ಮಿಕ ಇಲಾಖೆಯಂತೂ ಪ್ರತಿದಿನ 500-600 ಮಂದಿ ಕೆಲಸ ಮಾಡುವ ಕಾರ್ಮಿಕರಿಗೆ ಮಹಾಮಾರಿ ಕೊರೊನ ಸಾಂಕ್ರಾಮಿಕ ವೈರಸ್ ಪರಿವಿಲ್ಲದ ರೀತಿ ಎಂಬಂತೆ ಮಾಸ್ಕ್ ಧರಿಸದೆ ಕೆಲಸ ನಿರ್ವಹಿಸುತ್ತಿರುವುದು ನೋಡಿದರೆ ಕಾರ್ಮಿಕರ ಇಲಾಖೆ ಮತ್ತು ಕ್ವಾರಿ ಮಾಲೀಕರ ಬೇಜವಾಬ್ದಾರಿತನವೇ… !ಎಂಬುದು ಸ್ಪಷ್ಟ ವಾಗಿ ಕಾಣುತ್ತದೆ.
ಈ ಕಲ್ಲು ಕ್ವಾರಿಗಳ ಕಾರ್ಮಿಕರ ಹಿತ ಕಾಪಾಡುವಲ್ಲಿ,ಸರ್ಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ವಿಫಲವಾಗಿರುವುದು ಇನ್ನೊಂದು ದುರಂತ.
ಇನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಕೆಲವು ಅಧಿಕಾರಿಗಳಂತೂ ಈ ಬಂಡೆಯ ಮಾಫಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು
ಅಕ್ರಮ ನಡೆಸುವವರ ಜೊತೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.