ದಾವಣಗೆರೆ, ಆ. 3; ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವಕ್ಕೆ ಬಲ ತುಂಬುವ ಪ್ರಯತ್ನ ಸಫಲವಾಯಿತು. 75 ನೇ ಜನ್ಮ ದಿನದ ಸಿದ್ದರಾಮೋತ್ಸವ ಸಂಪೂರ್ಣ ಸಿದ್ದರಾಮಯ್ಯ ಮಯವಾಗಿತ್ತು.
ವಿಧಾನಸಭೆ ಚುನಾವಣೆಗೂ 8 ತಿಂಗಳು ಮುನ್ನ ನಡೆದ ಸಮಾವೇಶ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಲಕ್ಷಾಂತರ ಜನರ ಭಾವನೆಗಳಿಗೆ ಈ ಸಮಾವೇಶ ಮೆರಗು ನೀಡಿತು.
ಜನ ಸಾಗರದ ಮೂಲಕ ದಾವಣಗೆರೆಯ ಎಸ್.ಎಸ್. ಮೈದಾನ ಇತಿಹಾಸ ಪುಟ ಸೇರಿತು. ರಾಜ್ಯಕ್ಕೆ, ವಿಶೇಷವಾಗಿ ಬಿಜೆಪಿ ಮತ್ತು ಜೆಡಿಎಸ್ ಗೆ ರಾಜಕೀಯವಾಗಿ ಸಂದೇಶ ರವಾನಿಸಿದೆ. ಮುಂದಿನ ವಿಧಾನಸಭಾ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಣಕಹಳೆ ಮೊಳಗಿಸಿತು.
ಕಾಂಗ್ರೆಸ್ ವರಿಷ್ಠ ರಾಹುಲ್ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಅಬ್ಬರಿಸಿದರು. ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಆಶಯಕ್ಕೆ ಈ ಸಮಾವೇಶ ಪುಷ್ಟಿ ನೀಡಿದೆ.
ರಾಜ್ಯದ ಎಲ್ಲಾ ಭಾಗಗಳಿಂದ ಜನ ಪ್ರವಾಹೋಪಾದಿಯಲ್ಲಿ ಬಂದಿದ್ದು, ಇದು ಸಿದ್ದರಾಮಯ್ಯ ಜನಪ್ರಿಯತೆ, ಗಟ್ಟಿ ನಾಯಕತ್ವಕ್ಕೆ ಈ ಸಮಾವೇಶ ಸಾಕ್ಷಿಯಾಯಿತು. ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧೆಡೆಗಳಿಂದ ನೂರಾರು ವಾಹನಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ದಾವಣಗೆರೆಗೆ ಬಂದರು. ಸಮಾವೇಶ ಮುಗಿಯುತ್ತಿದ್ದರೂ ಜನ ಪ್ರವಾಹ ನಿಂತಿರಲಿಲ್ಲ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಗಳು ಮೊಳಗುತ್ತಲೇ ಇತ್ತು. ಎಲ್ಲರಲ್ಲೂ ಇದೇ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಎಲ್ಲರಲ್ಲೂ ಉತ್ಸಾಹ ಇಮ್ಮಡಿಸಿತ್ತು. ಈ ಕಾರ್ಯಕ್ರಮವನ್ನು ಕಾಂಗ್ರೆಸ್ನ ಎಲ್ಲಾ ನಾಯಕರುಗಳು ಭಾಗಿಯಾಗುವ ಮೂಲಕ ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಿದ್ದು, ಮುಂದಿನ ಚುನಾವಣೆಯಲ್ಲೂ ಇದೇ ಒಗ್ಗಟ್ಟನ್ನು ಕಾಪಾಡಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ತೊಟ್ಟರು.
ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬರಿಗೂ ಉಪಹಾರ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಆದರೆ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಒಂದಷ್ಟು ಜನ ಅಡುಗೆ ಮಾಡುವ ಸ್ಥಳಕ್ಕೆ ದಾಳಿ ಇಟ್ಟಿದ್ದರಿಂದ ಸಮಸ್ಯೆ ಸೃಷ್ಟಿಯಾಯಿತು. ಪೊಲೀಸರು ಸಕಾಲಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಮಾವೇಶಕ್ಕೆ ಲಕ್ಷಾಂತರ ಮಂದಿ ಬಂದಿದ್ದು, ಸಮಾವೇಶ ನಡೆಯುವ ಸ್ಥಳಕ್ಕೆ ತಲುಪಲು ಕಾರ್ಯಕರ್ತರು, ಅಭಿಮಾನಿಗಳು ಹರಸಾಹಸ ಪಡುತ್ತಿದ್ದು, ಸಮಾವೇಶದ ಸ್ಥಳದಿಂದ ೩ ಕಿಲೋ ಮೀಟರ್ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡೇ ಸಮಾವೇಶ ಸ್ಥಳ ತಲುಪಿದರು. ಪ್ರತಿಯೊಬ್ಬ ಕಾರ್ಯಕರ್ತರು, ಅಭಿಮಾನಿಗಳು ದಾರಿಯುದ್ದಕ್ಕೂ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಪರ ಜೈಕಾರ, ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಸಿದ್ದರಾಮೋತ್ಸವದ ಬೃಹತ್ ವೇದಿಕೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೂ ಮಳೆಯ ಅದ್ದೂರಿ ಸ್ವಾಗತ ಕೋರಿದರು. ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಶಾಸಕರು, ಸಂಸದರು, ಮುಖಂಡರುಗಳು ಮುಗಿ ಬಿದ್ದರು. ಎಲ್ಲರೂ ಸಿದ್ದರಾಮಯ್ಯನವರ ಕೈ ಕುಲುಕಿ ಹುಟ್ಟುಹಬ್ಬದ ಶುಭಾಶಯ ಹೇಳಿದರು. ಮತ್ತೆ ಕೆಲವು ಅಭಿಮಾನಿಗಳು ಸಿದ್ದರಾಮಯ್ಯನವರಿಗೆ ಹಾರ ಹಾಕಿ, ಪೇಟ ತೊಡಿಸಿ ತಮ್ಮ ಅಭಿಮಾನ ಮೆರೆದರು.
ಕುರಿ ಮರಿ ಕಾಣಿಕೆ: ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ರಾಯಚೂರಿನ ಅಭಿಮಾನಿಯೊಬ್ಬ ಕುರಿ ಮರಿ ತಂದಿದ್ದು, ಅದನ್ನು ಸಿದ್ದರಾಮಯ್ಯನವರಿಗೆ ನೀಡಿ ಸಂತಸ ಪಟ್ಟರು.
ಸಮಾವೇಶದಲ್ಲಿ ಡೊಳ್ಳು ಕುಣಿತ ಸೇರಿದಂತೆ ಜಾನಪದ ವಾದ್ಯಗಳು ಜನರನ್ನು ರಂಜಿಸಿದ್ದು, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ ಸಹ ತಮ್ಮ ಗಾನಸಿರಿಯಿಂದ ನೆರೆದಿದ್ದವರಿಗೆ ಮನರಂಜನೆ ನೀಡಿದರು.
ದೇಗುಲ-ದರ್ಗಾಕ್ಕೆ ಭೇಟಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯಯನವರು ಸಿದ್ದರಾಮೋತ್ಸವದ ವೇದಿಕೆಗೆ ಆಗಮಿಸುವ ಮೊದಲು ದಾವಣಗೆರೆಯ ದುರ್ಗಾಂಬೆ ದೇಗುಲ ಹಾಗೂ ಹಜರತ್ ಅಲಿ ಷಾ ದರ್ಗಾಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ದಾವಣಗೆರೆ, ಆ. 3; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರೇಷ್ಮೆ ಶಾಲು ಹೊದಿಸಿ, ಇಂದಿರಾ ಗಾಂಧಿ ಪುಸ್ತಕ ನೀಡಿ ಗೌರವಿಸಿದರು. ಇಬ್ಬರೂ ಒಗ್ಗಟ್ಟು ಪ್ರದರ್ಶಿಸಿದರು.
ಇಬ್ಬರೂ ಕೈ ಎತ್ತಿ ನಾವು ಒಟ್ಟಿಗೆ ಇದ್ದೇವೆ ಎಂಬ ಸಂದೇಶ ರವಾನಿಸಿದರು. ಅಷ್ಟೇ ಅಲ್ಲ ಒಂದಲ್ಲಾ ಎರಡು ಬಾರಿ ಆಲಿಂಗನ ಮಾಡಿ ಶುಭ ಕೋರಿದರು.
ಈ ಬೆಳವಣಿಗೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಹ ತಮ್ಮ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಇಬ್ಬರೂ ಮುಖಂಡರು ವರ್ತಿಸಿದ ರೀತಿ ಹಾಗೂ ಪರಸ್ಪರ ಆಲಿಂಗನ ಮಾಡಿಕೊಂಡಿದ್ದು ತಮಗೆ ಸಂತಸ ತಂದಿದೆ ಎಂದರು.
ಸಿದ್ದರಾಮಯ್ಯ ಅವರು ಸಹ ತಮ್ಮ ಹಾಗೂ ಡಿ.ಕೆ.ಶಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವು ಒಟ್ಟಿಗೆ ಇದ್ದೇವೆ. ಪ್ರತಿಪಕ್ಷಗಳು ಹಾಗೂ ಕೆಲವು ಮಾಧ್ಯಮಗಳು ನನ್ನ ಹುಟ್ಟು ಹಬ್ಬಕ್ಕೆ ಡಿ.ಕೆ.ಶಿ ವಿರೋಧ ಮಾಡುತ್ತಿದ್ದಾರೆ ಎಂದು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿವೆ. ನಾನು ಶಿವಕುಮಾರ್ ಒಟ್ಟಾಗಿ ಇದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಒಟ್ಟಿಗೆ ಇದ್ದೇವೆ ಎಂದು ಹೇಳಿದರು.
ಸ್ವತಃ ಡಿ.ಕೆ. ಶಿವಕುಮಾರ್ ಅವರು ಸಹ ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು. ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕ ಎಂದು ಪರಿಗಣಿಸಬೇಡಿ. ಅವರು ಎಲ್ಲ ಧರ್ಮ ಹಾಗೂ ವರ್ಗಗಳ ನಾಯಕ. ರಾಜ್ಯದ ಜನರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಸಿಗಲಿ ಎಂದು ಶುಭ ಹಾರೈಸಿದರು.
ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ಸೋನಿಯಾ ಗಾಂಧಿ ಅವರ ಕೈ ಬಲಪಡಿಸಿ, ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡೋಣ ಎಂದರು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದರಿಸೋಣ. ಈ ರಾಜ್ಯಕ್ಕೆ ನ್ಯಾಯ ಒದಗಿಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲು ನಾವೆಲ್ಲರೂ ಇಂದು ಸಂಕಲ್ಪ ಮಾಡೋಣ ಎಂದರು.
ರಾಜ್ಯದಲ್ಲಿ ಯುವಕರು, ರೈತರು, ಬಡವರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಇದಕ್ಕೆ ಅಂತ್ಯವಾಡಿ ಅವರಿಗೆ ನ್ಯಾಯ ಒದಗಿಸಬೇಕು ಎಂದರೆ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋಣ. ಇಂದು ನಾವೆಲ್ಲರೂ ಆ ಪ್ರತಿಜ್ಞೆ ಮಾಡೋಣ. ಇಂದು ನಾವು ನೀವೆಲ್ಲರೂ ಪುಣ್ಯವಂತರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಅದೇ ಕಾಲದಲ್ಲಿ ನಮ್ಮ, ನಿಮ್ಮೆಲ್ಲರ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ. ದೇಶಕ್ಕೂ ಸಂಭ್ರಮ, ಕಾಂಗ್ರೆಸಿಗರಿಗೂ ಸಂಭ್ರಮ, ಸಿದ್ದರಾಮಯ್ಯ ಅವರಿಗೂ ಸಂಭ್ರಮ, ನಿಮಗೆ ಹಾಗೂ ನಮಗೂ ಸಂಭ್ರಮ ಎಂದರು.
ನಮ್ಮ ಉದ್ದೇಶ ರಾಜ್ಯಕ್ಕೆ ನ್ಯಾಯ ಒದಗಿಸುವುದು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಸಿದ್ದರಾಮಯ್ಯ ಅವರ ಅಧಿಕಾರ ನಾವೆಲ್ಲ ನೋಡಿದ್ದೇವೆ. 2013ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು. ಬಸವ ಜಯಂತಿ ದಿನ ಅವರು ಅಧಿಕಾರ ಸ್ವೀಕರಿಸಿದರು. ಬಸವಣ್ಣನವರ ತತ್ವವೇ ಕಾಂಗ್ರೆಸ್ ಪಕ್ಷದ ತತ್ವ. ಅವರು ಅಧಿಕಾರ ಸ್ವೀಕರಿಸಿದ ನಂತರ ಈ ರಾಜ್ಯಕ್ಕೆ ಕೊಟ್ಟಿರುವ ಕಾರ್ಯಕ್ರಮ ಮೆಲುಕು ಹಾಕಲು ಇಲ್ಲಿದ್ದೇವೆ.
ಈ ಕಾರ್ಯಕ್ರಮದ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿದಾಗ ನಾನೂ ಅಲ್ಲಿದ್ದೆ. ರಾಹುಲ್ ಗಾಂಧಿ ಅವರು ಒಪ್ಪಿ ಇಲ್ಲಿಗೆ ಬಂದಿದ್ದಾರೆ. ರಾಜ್ಯದ ಜನರು ಹಾಗೂ ಕಾಂಗ್ರೆಸ್ ನಾಯಕರ ಪರವಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ನಿಮ್ಮನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಗೆ ತಲುಪಿಸಬೇಕು. ಅದಕ್ಕೆ ನಾವು ನೀವೆಲ್ಲರೂ ಸೇರಿ ಭ್ರಷ್ಟ ಸರ್ಕಾರ ತೆಗೆದು ಹಾಕುವ ಸಂಕಲ್ಪ ಮಾಡಬೇಕು. ನೀವೆಲ್ಲರೂ ಈ ಸರ್ಕಾರ ತೆಗೆಯುವ ಪ್ರತಿಜ್ಞೆ ಮಾಡುತ್ತೀರ ಅಲ್ಲವೇ? ಇಂದಿನಿಂದ ಇದೇ ನಮ್ಮ ಉದ್ದೇಶ ಆಗಬೇಕು.
ಸಿದ್ದರಾಮಯ್ಯ ಅವರ ಕಾಲದಲ್ಲಿ ನಾವು ಮಂತ್ರಿಗಳಾಗಿ ಕೆಲಸ ಮಾಡಿದ್ದೇವೆ. ಅವರ ಕಾರ್ಯಕ್ರಮ ಈ ದೇಶದ ಬಡವರಿಗಾಗಿ ಕೊಟ್ಟ ಕಾರ್ಯಕ್ರಮಗಳಾಗಿದ್ದವು. ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಯಾವುದೇ ಬಡವ ಹಸಿವಿನಿಂದ ಇರಬಾರದು ಎಂದು ಎಲ್ಲ ವರ್ಗಕ್ಕೆ ಅನ್ನ ಭಾಗ್ಯ ಯೋಜನೆ ಕೊಟ್ಟ ನಾಯಕ ಎಂದರೆ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಎಂದು ಶ್ಲಾಘಿಸಿದರು.
ರೈತರಿಗೆ ಕೊಟ್ಟ ಕೃಷಿ ಭಾಗ್ಯ, ರಸ್ತೆ, ಕೈಗಾರಿಕೆ, ನೀರಾವರಿ ಯೋಜನೆ, ವಿಶ್ವದಲ್ಲೇ ಅಥಿ ದೊಡ್ಡ ಸೋಲಾರ್ ಪಾರ್ಕ್, ರೈತರಿಗೆ 7 ತಾಸು ವಿದ್ಯುತ್ ಸರಬರಾಜು ಸೇರಿದಂತೆ ಹಲವು ಜನಪರ ಯೋಜನೆ ನೀಡಿದ್ದೆವು. ಇದೆಲ್ಲದಕ್ಕೂ ಕಾರಣ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ನಾನು, ಸಿದ್ದರಾಮಯ್ಯ ಹಾಗೂ ವೇದಿಕೆ ಮೇಲಿರುವ ನಾಯಕರು ಮಾತ್ರ ಸರ್ಕಾರ ತರಲು ಸಾಧ್ಯವಿಲ್ಲ. ನೀವೆಲ್ಲರೂ ಈ ಭ್ರಷ್ಟ ಸರ್ಕಾರ ಕಿತ್ತು ಕಾಂಗ್ರೆಸ್ ಅಧಿಕಾರಕ್ಕೆ ತರಲು ಜನರಿಗೆ ತಿಳಿಸಬೇಕು ಎಂದರು.
ಇದುವರೆಗೂ ಆಗಿರುವುದು ಇತಿಹಾಸ, ಮುಂದೆ ಬರುವುದು ಭವಿಷ್ಯ. ಮುಂದಿನ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು. ಆ.15ರಂದು ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆಗೆ ಸೂಚನೆ ನೀಡಿದ್ದು, ಇಲ್ಲಿಗೆ ಬಂದಿರುವಂತೆ ಬೆಂಗಳೂರಿಗೂ ಲಕ್ಷಾಂತರ ಜನರು ಆಗಮಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಎಲ್ಲ ವರ್ಗದವರನ್ನು ನೀವು ಸಂಘಟಿಸಬೇಕು.ಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ನಾಯಕರೆಂದು ಬಿಂಬಿಸಬೇಡಿ. ಸರ್ವ ಜನಾಂಗ, ಧರ್ಮ ಹಾಗೂ ವರ್ಗಕ್ಕೂ ಸೇರಿದ ನಾಯಕ ಅವರು. ಬೆಳಕು, ಅಧಿಕಾರದ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ, ಈ ರಾಜ್ಯಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ಮಾಡುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.







