ಶಿವಮೊಗ್ಗ, ಜು.31:
ಈ ಜನಕ್ಕೆ ಎಷ್ಟು ಹೇಳಿದರೂ, ಎಷ್ಟೇ ಅವಘಡ ನೋಡಿದ್ದರೂ, ಮೋಸಗಾರರ ಬಗ್ಗೆ ತಿಳಿದುಕೊಂಡಿದ್ದರೂ ಬುದ್ದಿ ಬರೊಲ್ಲ
ಯಾಕಂದ್ರೆ, ನಿತ್ಯ ನಿರಂತರ ಚಿನ್ನದ ಆಭರಣಗಳ ಮೂಲಕ ಪಾಲಿಶ್ ಮಾಡುತ್ತೇವೆ ಎಂದು ಮೋಸ ಮಾಡಿ ಆಭರಣ ದೋಚಿರುವ ಘಟನೆ ಕೇಳಿದ್ದರೂ ಇಲ್ಲಿ ಮತ್ತೊರ್ವ ಮಹಿಳೆ ಮೋಸ ಹೋಗಿರುವ ಘಟನೆ ವರದಿಯಾಗಿದೆ.
ಮೊದಲಿಗೆ ಸಣ್ಣಪುಟ್ಟ ವಸ್ತುಗಳಿಗೆ ಪಾಲಿಶ್ ಹಾಕುವಂತೆ ಮಾಡಿ ಮಹಿಳೆಯರ ಮಾಂಗಲ್ಯ ಸರಕ್ಕೆ ಕನ್ನ ಹಾಕುವ ಈ ಪಾಲಿಶ್ ಬಿಸಿನೆಸ್ ಗ್ರಾಮಾಂತರ ಭಾಗಗಳಲ್ಲಿ ಮಾರಕವೆನಿಸಿದೆ.
ಭದ್ರಾವತಿ ತಾರೀಕಟ್ಟೆಯ ಕೆಂಪಮ್ಮ ಎಂಬುವರ ಮನೆ ಮುಂದೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚತ ವ್ಯಕ್ತಿಗಳು ಬೆಳ್ಳಿ ಸಾಮಾನು ಮತ್ತು ಹಿತ್ತಾಳೆ, ವಸ್ತುಗಳನ್ನ ತೆಗೆದುಕೊಂಡು ಬನ್ನಿ ಪಾಲಿಶ್ ಹಾಕಿಕೊಡುತ್ತೇವೆ ಎಂದು ಕೇಳಿದ್ದಾರೆ. ಕೆಂಪಮ್ಮ ಬೆಳ್ಳಿ ಕಾಲ್ಚೈನು ಮತ್ತು ದೇವರ ಮನೆಯ ಹಿತ್ತಾಳೆ ಸಾಮಾಗ್ರಿಗಳನ್ನ ತಂದು ಕೊಟ್ಟಿದ್ದಾರೆ.
ಈ ಎರಡು ವಸ್ತುಗಳಿಗೆ ಪಾಲಿಶ್ ಹಾಕಿದ್ದಾರೆ. ನಂತರ ಕೆಂಪಮ್ಮನೇ ಕಿವಿಯ ಓಲೆಗಳನ್ನ ನೀಡಿ ಪಾಲಿಶ್ ಹಾಕಿಕೊಡಿ ಎಂದಿದ್ದಾರೆ. ಕೈಯಲ್ಲಿ ಹಿಡಿದ ಓರ್ವನು ಇದು ಬೇಡ ಎಂದಿದ್ದಾನೆ. ಕೊರಳಿನಲ್ಲಿರುವ ಮಾಂಗಲ್ಯ ಸರವನ್ನಕಂಡು ಇದನ್ನ ಕೊಡಿ ಪಾಲಿಶ್ ಮಾಡುವೆ ಎಂದಿದ್ದಾನೆ.
ಕೊರಳಲಿದ್ದ ಮಾಂಗಲ್ಯ ಸರವನ್ನ ಕೆಂಪಮ್ಮ ಬಿಚ್ಚಿಕೊಟ್ಟಿದ್ದಾಳೆ. ಮಾಂಗಲ್ಯ ಸರವನ್ನ ಕೈಯಲ್ಲಿ ಹಿಡಿದುಕೊಂಡು ಕೆಂಪಮ್ಮಳಿಗೆ ಪೌಡರ್ ಪ್ಯಾಕೆಟ್ ಕೊಟ್ಟು ಒಂದು ಲೋಟ ನೀರು ತೆಗೆದುಕೊಂಡು ಬನ್ನಿ ಎಂದಿದ್ದಾನೆ. ನೀರು ತರುವುದರಲ್ಲಿ ಬೈಕ್ ನಲ್ಲಿ ಬಂದ ಪಾಲಿಶ್ ಮ್ಯಾನ್ ಗಳು ಪರಾರಿಯಾಗಿದ್ದಾರೆ.
ಕೆಂಪಮ್ಮನವರ ಮಗ ಅಶೋಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು 47 ಗ್ರಾಂ ಮಾಂಗಲ್ಯ ಸರವನ್ನ ಕೊಡಿಸಿದ್ದನು. ಮಗ ಕೊಡಿಸಿದ್ದ ಮಾಂಗಲ್ಯ ಸರ ಅನ್ಯಾಯವಾಗಿ ಬೇರೆಯವರ ಕೈಸೇರಿದ್ದು ಬೇಸರಿಸಿಕೊಂಡ ಕೆಂಪಮ್ಮ ಘಟನೆ ನಡೆದು ಎರಡು ದಿನದ ಬಳಿಕ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.