ಶಿವಮೊಗ್ಗ: ಸಿದ್ಧರಾಮಯ್ಯ ಆರ್.ಎಸ್.ಎಸ್. ಕಾರ್ಯಕರ್ತರ ಪಾದದ ಧೂಳಿಗೂ ಸಮ ಅಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.


ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ಆರ್.ಎಸ್.ಎಸ್. ಕುರಿತು ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಹಗುರವಾಗಿ ಮಾತನಾಡಿದ್ದಾರೆ. ತಮ್ಮ ತೆವಲಿಗಾಗಿ ಆರ್.ಎಸ್.ಎಸ್. ದೂರಿದ್ದಾರೆ. ಆರ್.ಎಸ್.ಎಸ್. ಬಗ್ಗೆ ಅವರಿಗೇನು ಗೊತ್ತು. ಅವರು ಒಮ್ಮೆ ಶಾಖೆಗೆ ಬರಲಿ. ನಾನೇ ಕರೆದುಕೊಂಡು ಹೋಗುತ್ತೇನೆ. ಆಮೇಲೆ ಮಾತನಾಡಲಿ ಎಂದರು.


ಆರ್.ಎಸ್.ಎಸ್. ಎಂಬುದು ಸ್ವಾಭಿಮಾನ ಕಲಿಸಿದೆ. ದೇಶಾಭಿಮಾನ ಬೆಳೆಸಿದೆ. ಮೊದಲು ಆರ್.ಎಸ್.ಎಸ್. ಸ್ವಯಂಸೇವಕರ ಬಗ್ಗೆ ಸಿದ್ಧರಾಮಯ್ಯ ತಿಳಿದುಕೊಳ್ಳಲಿ. ಅವರಿಗೆ ಆ ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ. ಈ ದೇಶದ ಆಶಾಕಿರಣವೇ ಆರ್.ಎಸ್.ಎಸ್., ಇಲ್ಲಿ ಕಾಂಗ್ರೆಸ್ ನಲ್ಲಿರುವಂತೆ ಗುಂಪುಗಾರಿಕೆ ಇಲ್ಲ. ಸಿದ್ಧರಾಮಯ್ಯ ತಕ್ಷಣವೇ ಕ್ಷಮೆ ಕೇಳಬೇಕು ಎಂದರು.


ಕಾಂಗ್ರೆಸ್ ನಲ್ಲಿ ಈಗಾಗಲೇ ಗುಂಪುಗಾರಿಕೆ ಮಿತಿಮೀರಿದೆ. ಒಕ್ಕಲಿಗರು, ಕುರುಬರು ಎಂದು ಜಾತಿಯ ಆಧಾರದ ಮೇಲೆ ಕಾಂಗ್ರೆಸ್ ನವರು ಬೆಳೆಯಲು ಹೊರಟಿದ್ದಾರೆ. ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ಸರ್ಕಾರ ಹತ್ಯೆಕೋರರನ್ನು ಕೇವಲ ೨೪ ಗಂಟೆಯೊಳಗೆ ಬಂಧಿಸಿದೆ. ಸಿದ್ಧರಾಮಯ್ಯ ಸರ್ಕಾರದಲ್ಲಿ ೩೨ ಜನ ಹಿಂದೂ ಕಾರ್ಯಕರ್ತರ ಕೊಲೆಯಾಯಿತಲ್ಲ. ಆಗ ಅವರು ರಾಜೀನಾಮೆ ಕೊಟ್ಟಿದ್ದರೇ? ಅವರು ರಾಜೀನಾಮೆ ಕೇಳಲು ಅರ್ಥವೇ ಇಲ್ಲ ಎಂದರು.


ಕಾಂಗ್ರೆಸ್ ನವರು ಬಳಸುವ ಭಾಷೆ ನೋಡಿದರೆ ರಕ್ತ ಕುದಿಯುತ್ತದೆ. ಪತ್ರಿಕೆಗಳನ್ನು ಓದುತ್ತಾ ಹೋದರೆ ಕಾಂಗ್ರೆಸ್ ವಿರುದ್ಧವೇ ಇಡೀ ದಿನ ಪತ್ರಿಕಾಗೋಷ್ಠಿ ಮಾಡಬಹುದು. ಶೇಕಡ ೮೦ ರಷ್ಟು ಇರುವ ಹಿಂದೂಗಳ ದೇಶದಲ್ಲಿ ಶೇಕಡ ೨೦ ರಷ್ಟು ಇರುವು ಮುಸ್ಲಿಮರು ಕೊಲೆ ಮಾಡುತ್ತಾರೆ ಎಂದರೆ ಆಕ್ರೋಶ ಬಾರದೇ ಇರುವುದೇ? ಇದರ ಹಿಂದೆ ಕಾಂಗ್ರೆಸಿಗರು ಇದ್ದಾರೆ ಎಂಬುದು ಅಷ್ಟೇ ಸತ್ಯ. ರಾಷ್ಟ್ರದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಲೇ ಬಂದಿದೆ ಎಂದು ಟೀಕಿಸಿದರು.


ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಅವರಿಗೇಕೆ ಪತ್ರಕರ್ತರ ಮೇಲೆ ಸಿಟ್ಟು? ಇದು ಗೂಂಡಾಗಿರಿಯಲ್ಲವೇ? ತಕ್ಷಣವೇ ರಮೇಶ್ ಕುಮಾರ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ನಾಗರಾಜ್, ಜ್ಞಾನೇಶ್ವರ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ. ಅಣ್ಣಪ್ಪ, ಹೃಷಿಕೇಶ್ ಪೈ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!