ಶಿವಮೊಗ್ಗ ಜು. 27:
ಶಿವಮೊಗ್ಗದ ಹದಿನೆಂಟು ವರುಷ ಸಮೀಪದ ಇಬ್ಬರು ಯುವಕರು ಹಾಗೂ ಮತ್ತೊರ್ವ ಬಾಲಕ ಸೇರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಪ್ರಕರಣವನ್ನು ಜಯನಗರ ಪೊಲೀಸ್ ಇನ್ಸ್ ಸ್ಪೆಕ್ಟರ್ ಮಾದಪ್ಪ ನೇತೃತ್ವದ ತಂಡ ಪತ್ತೆ ಹಚ್ಚಿ ಸುಮಾರು ಐದು ಲಕ್ಷ ರೂ ಮೌಲ್ಯದ ವಾಹನಗಳನ್ನು ಮೂವರು ಆರೋಪಿಗಳೊಂದಿಗೆ ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಈ ಯುವಕರು ಬೈಕ್ ಕಳವು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದರು. ಪೊಲೀಸರಿಗೆ ಸಿಕ್ಕು ಈಗ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಸಮಗ್ರ ವಿವರ:
ದಿನಾಂಕಃ- 10-06-2022 ರಂದು ರಾತ್ರಿ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಆಸ್ಪತ್ರೆ ಹಿಂಭಾಗ ನಿಲ್ಲಿಸಿದ್ದ ಕೆ ಎ 14 ಇ ಯು 4625 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0047/2022 ಕಲಂ 379 ಐಪಿಸಿ ರೀತ್ಯಾ ಪ್ರಕಣ ದಾಖಲಿಸಿಕೊಳ್ಳಲಾಗಿರುತ್ತದೆ. ಜಯನಗರ ಪೊಲೀಸ್ ಠಾಣೆಯ ಪಿಐ, ಪಿಎಸ್ಐ ಮತ್ತು ಸಿಬ್ಬಂದಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ಪ್ರಕರಣದ ಆರೋಪಿತರಾದ ರಾಹುಲ್ @ ಬ್ರಹ್ಮಾಂಡ, 21 ವರ್ಷ, ಹೊಸಮನೆ, ಶಿವಮೊಗ್ಗ, ಹರ್ಷ 18 ವರ್ಷ, ಕಾಮಾಕ್ಷಿ ಬೀದಿ ಶಿವಮೊಗ್ಗ ಮತ್ತು ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು, ಅರೋಪಿತರಿಂದ ಕಳ್ಳತನ ಮಾಡಿದ ಅಂದಾಜು ಮೌಲ್ಯ 4,80,000/- ರೂಗಳ ಒಟ್ಟು 10 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

