ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತೆ ಡಿಸಿ ಸೂಚನೆ
ಶಿವಮೊಗ್ಗ ಜುಲೈ 09:
ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಆರೆಂಜ್ ಅಲರ್ಟ್ ಇದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಮಳೆಯಿಂದ ಆಗಬಹುದಾದ ಹಾನಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆ ಹಾನಿ ನಿರ್ವಹಣೆ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು.
ಶನಿವಾರ, ಭಾನುವಾರ ರಜೆ ಎಂದು ತಿಳಿಯದೆ, ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕ್ಷೇತ್ರದಲ್ಲಿ ಸತತವಾಗಿ ಓಡಾಡುತ್ತಾ ಮಳೆಯಿಂದ ಯಾವುದೇ ರೀತಿಯಲ್ಲಿ ಆಗಬಹುದಾದ ಹಾನಿ ಎದುರಿಸಲು ಕ್ರಮ ವಹಿಸಬೇಕು. ಇನ್ನೂ ಎರಡು ದಿನ ಹೆಚ್ಚು ಮಳೆಯಾಗುವ ಸಂಭವ ಇದೆ. ಆದ್ದರಿಂದ ಅಧಿಕಾರಿಗಳು ತಂಡದಲ್ಲಿ ಕೆಲಸ ಮಾಡಬೇಕು.
ಎನ್ಡಿಆರ್ಎಫ್ ನಿಯಮದ ಪ್ರಕಾರ ಮನೆ ಹಾನಿಗೊಳಗಾದವರಿಗೆ ತಕ್ಷಣಕ್ಕೆ ರೂ.10 ಸಾವಿರ ಪರಿಹಾರ ನೀಡಬೇಕು. ಹಾಗೂ ಉಳಿದಂತೆ ಮನೆ, ಜನ-ಜಾನುವಾರು ಹಾನಿಗೊಳಗಾದವರಿಗೆ ಎನ್ಡಿಆರ್ಎಫ್ ನಿಯಮದ ಪ್ರಕಾರ ಪರಿಹಾರ ಕ್ರಮ ಕೈಗೊಳ್ಳಬೇಕು. ಹಾಗೂ ಬೆಳೆ ಹಾನಿಯಾದಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ವರದಿ ಪಡೆದು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಎಲ್ಲ ತಾಲ್ಲೂಕುಗಳಲ್ಲಿ ಮಳೆ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ನಿರ್ವಹಿಸಬೇಕು. ಅಗತ್ಯ ಕಂಡುಬಂದ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಎಲ್ಲ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಚರಂಡಿಗಳು, ರಾಜಾ ಕಾಲುವೆಗಳ ಸ್ವಚ್ಚತೆ ಮಾಡಿಸಬೇಕು. ಹೂಳಿದ್ದಲ್ಲಿ ತಕ್ಷಣ ತೆರವುಗೊಳಿಸಬೇಕು. ಮನೆಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ರಸ್ತೆ ಸಂಪರ್ಕಗಳು ಕಡಿತವಾದಲ್ಲಿ ಪರ್ಯಾಯ ಮಾರ್ಗ ವ್ಯವಸ್ಥೆಗೆ ತಕ್ಷಣ ಪ್ರಸ್ತಾವನೆ ನೀಡಬೇಕು. ಎಲ್ಲಿಯಾದರೂ ಭೂಕುಸಿತವಾದಲ್ಲಿ ತಕ್ಷಣ ಕ್ರಮ ವಹಿಸಬೇಕು ಎಂದು ಸೂಚಿಸಿದ ಅವರು ತೀರ್ಥಹಳ್ಳಿ ಆಗುಂಬೆ ಘಾಟಿ ಮತ್ತು ಹೊಸನಗರ ಹುಲಿಕಲ್ ಘಾಟಿಗಳಲ್ಲಿ ದೊಡ್ಡ ವಾಹನ ಸಂಚಾರ ಕುರಿತು ಪರಿಶೀಲಿಸುವಂತೆ ಎಸಿ ಯವರಿಗೆ ಸೂಚಿಸಿದರು.
ತಹಶೀಲ್ದಾರ್, ಇಓ ಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಿಆರ್ಇಡಿ ಇತರೆ ಇಂಜಿನಿಯರುಗಳು ಒಟ್ಟಾಗಿ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಜೊತೆಗೆ ಮಳೆಯಿಂದಾಗುವ ಮನೆ, ಜನ, ಜಾನುವಾರು ಇತರೆ ಹಾನಿ ಕುರಿತು ವಾಸ್ತವಿಕ ವರದಿಯನ್ನು ಕ್ಷಿಪ್ರವಾಗಿ ನೀಡಬೇಕು ಎಂದು ಸೂಚಿಸಿದ ಅವರು ಕರ್ತವ್ಯದಲ್ಲಿ ಲೋಪಗಳು ಕಂಡು ಬಂದಲ್ಲಿ ಎನ್ಡಿಆರ್ಎಫ್ ನಿಯಮ ಪ್ರಕಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಎಸಿ ಪ್ರಕಾಶ್, ಶಿವಮೊಗ್ಗ ತಹಶೀಲ್ದಾರ್ ಡಾ.ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.