ಶಿವಮೊಗ್ಗ, ಜೂ.27:
ಆ್ಯಂಟಿಬಯೋಟಿಕ್ ಇಂಜೆಕ್ಷನ್ ಪಡೆದ ಸಾಗರದ 14 ಮಕ್ಕಳು ಅಸ್ವಸ್ಥಗೊಂಡಿದ್ದ ಘಟನೆ ವರದಿಯಾಗಿದೆ. ಪ್ರಸ್ತುತ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಸಾಗರದ ಸರಕಾರಿ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕಳು ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಜ್ವರ, ಶೀತ ಮತ್ತು ಇತರೆ ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಚಿಕಿತ್ಸೆಯ ರೂಪದಲ್ಲಿ ಮಾಮೂಲಿಯಂತೆ ನೀಡಲಾಗುತ್ತಿದ್ದ ಆ್ಯಂಟಿಬಯೋಟಿಕ್ ಇಂಜೆಕ್ಷನ್ ನಿಂದ ಮಕ್ಕಳು ಅಸ್ವಸ್ಥಗೊಂಡಿದ್ದರು ಎನ್ನಲಾಗಿತ್ತು. ಇದರಲ್ಲಿ ನಾಲ್ವರು ತುಂಬಾ ಸುಸ್ತಾಗಿದ್ದು ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿತ್ತು.
ಎಲ್ಲಾ ಮಕ್ಕಳು ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದರು.
ಆದರೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಹರತಾಳು ಹಾಲಪ್ಪ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪೋಷಕರು, ವೈದ್ಯರಿಂದ ಶಾಸಕರು ಮಾಹಿತಿ ಪಡೆದರು. ಈ ರೀತಿ ಅಸ್ವಸ್ಥಗೊಳ್ಳಲು ಕಾರಣವೇನು, ಎಂಬ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಶಾಸಕರು ಸೂಚಿಸಿದ್ದಾರೆ.