ಟಿಎಂಎಇಎಸ್- ವೈದ್ಯ ರತ್ನಂ, ನಿಮಾ ಆಯೋಜನೆ- ಆಯುರ್ವೇದದಲ್ಲಿ ಹೊಸ ಆವಿಷ್ಕಾರಗಳ ಅನಾವರಣ
ಕೇರಳದ ವೈದ್ಯ ರತ್ನಂ ಔಷಧಾಲಯ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನಿಮಾ) ಮತ್ತು ಟಿಎಂಎಇಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಜೂನ್ 26ರಂದು ಭಾನುವಾರ ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಿಮಾ ಕಾ ಅಮೃತ್ ಮಹೋತ್ಸವ್ ಎಂಬ ರಾಜ್ಯ ಮಟ್ಟದ ಒಂದು ದಿನದ ಆಯುರ್ವೇದ ವಿಚಾರ ಸಂಕಿರಣ ನಡೆಯಲಿದ್ದು, ನಾಡಿನ ನಾನಾ ಭಾಗಗಳಿಂದ ನೂರಾರು ವೈದ್ಯರು ಪಾಲ್ಗೊಳ್ಳಲಿದ್ದಾರೆ. ತನ್ನಿಮಿತ್ತ ಈ ಲೇಖನ.
ಆಯುರ್ವೇದ ಭಾರತೀಯ ಪಾರಂಪರಿಕ ಔಷಧ ಮತ್ತು ಚಿಕಿತ್ಸಾ ಪದ್ಧತಿಯಾಗಿದೆ. ಆಯುರ್ವೇದ ಆಧಾರಿತ ಚಿಕಿತ್ಸೆಯು ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಆಧರಿಸಿ ರೂಪಿಸಲಾಗುತ್ತದೆ. ಇದು ಅಡ್ಡ ಪರಿಣಾಮಗಳಿಂದ ಮುಕ್ತವಾಗಿರುತ್ತದೆ. ಆಧುನಿಕ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ.
ಆಧುನಿಕ ಔಷಧಿಗಳು ರೋಗಲಕ್ಷಣಗಳ ಮೇಲೆ ಗಮನ ಕೇಂದ್ರೀಕರಿಸಿ ಅವುಗಳ ನಿರ್ಮೂಲನೆಗೆ ಪ್ರಯತ್ನಿಸಿದರೆ ಆಯುರ್ವೇದವು ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದ ಜೀವಕೋಶಗಳನ್ನು ಒಳಗಿನಿಂದ ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತವೆ. ಇದರಿಂದಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಚೇತರಿಕೆಗೆ ಅನುವಾಗುತ್ತದೆ.
ಆಯುರ್ವೇದ ಚಿಕಿತ್ಸೆಗಳು: ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ (ಆರೋಗ್ಯವಂತರಲ್ಲಿ ಆರೋಗ್ಯ ಉಳಿಸುವುದು) ಆತುರಸ್ಯ ವಿಕಾರ ಪ್ರಶಮನಂ(ಕಾಯಿಲೆ ಉಳ್ಳವರಿಗೆ ಚಿಕಿತ್ಸೆ ಕೊಡಿಸುವುದು) ಎಂಬುದು ಆಯುರ್ವೇದದ ಆಶಯ. ಈ ಹಿನ್ನೆಲೆಯಲ್ಲಿ ಆಯುರ್ವೇದಲ್ಲಿ ವಿವಿಧ ಬಗೆಯ ಚಿಕಿತ್ಸಾ ಪದ್ಧತಿಗಳಿವೆ. ಪಂಚಕರ್ಮ ಚಿಕಿತ್ಸೆ, ಪಥ್ಯ (ಸೇವಿಸುವ ಆಹಾರದ ನಿಯಂತ್ರಣ), ಉಲ್ಲಾಸ ನೀಡುವ ಮಸಾಜ್‌ಗಳು, ಹಬೆಯಲ್ಲಿ ಸ್ನಾನ ಮಾಡುವುದು ಮತ್ತು ಇತರ ಚಿಕಿತ್ಸೆಗಳು ನಮ್ಮ ದೇಹವನ್ನು ಪುನಃಚೇತನಗೊಳಿಸುತ್ತವೆ.
ಆಯುರ್ವೇದದಲ್ಲಿ ಮನುಷ್ಯನ ಹಲವಾರು ರೋಗಗಳಿಗೆ ಉತ್ತಮ ಗುಣಮಟ್ಟದ ಔಷಧಗಳಿವೆ. ಆದರೆ ಅನ್ಯ ಬಗೆಯ ವೈದ್ಯಕೀಯ ಪದ್ದತಿಯಲ್ಲಿ ರೋಗ ಹೋಗಲಾಡಿಸಲು ಔಷಧ ತೆಗೆದುಕೊಂಡಾಗ ರೋಗ ವಾಸಿಯಾಗುವುದರ ಜೊತೆಗೆ ಅಡ್ಡ ಪರಿಣಾಮದಿಂದಾಗಿ ಇನ್ನೊಂದು ರೋಗ ಉಡುಗೊರೆಯಾಗಿ ಸಿಗುತ್ತದೆ. ಆದರೆ ಆಯುರ್ವೇದದಲ್ಲಿ ಅಂತಹ ಯಾವುದೇ ಅಡ್ಡ ಪರಿಣಾಮ ಅಥವಾ ದುಷ್ಪರಿಣಾಮಗಳು ಇರುವುದಿಲ್ಲ.
ಕೊಟ್ಟ ಔಷಧಿಗೆ ಖಾಯಿಲೆ ವಾಸಿಯಾಗಬೇಕೆ ಹೊರತು ಇನ್ನೊಂದು ಖಾಯಿಲೆ ಉಚಿತವಾಗಿ ಬರಬಾರದು. ಆದ್ದರಿಂದ ಜನರಲ್ಲಿ ಆಯುರ್ವೇದ ಔಷಧ ನಿಧಾನಗತಿಯಲ್ಲಿ ರೋಗ ನಿವಾರಣೆ ಮಾಡುತ್ತದೆ ಎಂಬ ತಾತ್ಸರ ಬೇಡ. ಆಯುರ್ವೇದ ಔಷಧ ಖಾಯಿಲೆ ವಾಸಿ ಮಾಡುವುದು ನಿಧಾನವಾದರೂ ಅದನ್ನು ಬುಡಸಮೇತ ವಾಸಿ ಮಾಡುತ್ತದೆ.
ಆಯುರ್ವೇದ ಔಷಧೀಯ ಪ್ರಕ್ರಿಯೆ ಹಾಗೂ ಗಿಡಮೂಲಿಕೆ ಮೇಲೆ ನಮ್ಮ ಭಾರತದ ಪೂರ್ವಜರು, ಋಷಿಮುನಿಗಳು ಸಾವಿರಾರು ವರ್ಷಗಳಿಂದ ನಿರಂತರವಾಗಿ ಸಂಶೋಧನೆ ಮಾಡುತ್ತಾ ಬಂದಿದ್ದಾರೆ. ಅವರ ಪರಿಶ್ರಮದಿಂದಾಗಿ ಇಂದು ಭಾರತ ಆಯುರ್ವೇದ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಆಯುರ್ವೇದದಲ್ಲಿ ಭಾರತ ವಿಶ್ವ ಗುರುವಾಗಿ ರಾರಾಜಿಸುತ್ತಿದೆ.
ಆಯುರ್ವೇದದಲ್ಲಿ ಅನಾದಿ ಕಾಲದಿಂದಲೂ ಸಂಶೋಧನೆ ನಿತ್ಯ ನಿರಂತರ. ಹಳೆಯ ಕಾಯಿಲೆಗಳೊಂದಿಗೆ ಕೋವಿಡ್‌ನಂತಹ ಹೊಸ,ಹೊಸ ಕಾಯಿಲೆಗಳಿಗೂ ಚಿಕಿತ್ಸೆ ಕಂಡು ಹಿಡಿಯಲು ಪ್ರಯತ್ನಿಸಲಾಗುತ್ತದೆ. ಇದರಲ್ಲಿ ಸಾಕಷ್ಟು ಯಶಸ್ಸನ್ನೂ ಸಹ ಸಾಧಿಸುತ್ತಾ ಬರಲಾಗುತ್ತಿದೆ.
ಈ ನಿಟ್ಟಿನಲ್ಲಿ ವಿಚಾರ ವಿನಿಮಯ, ಜ್ಞಾನದ ಹಂಚಿಕೆ ಅಗತ್ಯ. ಈ ಕಾರಣಕ್ಕಾಗಿ ಶಿವಮೊಗ್ಗದಲ್ಲಿ ಮೊಟ್ಟ ಮೊದಲ ರಾಜ್ಯ ಮಟ್ಟದ ಆಯುರ್ವೇದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ನುರಿತ ತಜ್ಞ ಆಯುರ್ವೇದ ವೈದ್ಯರು ಪ್ರಚಲಿತ ರೋಗಗಳಿಗೆ ಪರಿಣಾಮಕಾರಿ ಆಯುರ್ವೇದ ಚಿಕಿತ್ಸಾ ಕ್ರಮ ಮತ್ತು ವೈಜ್ಞಾನಿಕ ದಾಖಲೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ತೆಗ್ಗಿನಮಠ ಶ್ರೀಗಳು- ಸಿದ್ಧಲಿಂಗ ಶ್ರೀಗಳ ಕೃಪಾಶೀರ್ವಾದ
ಆಯುರ್ವೇದದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂಬ ನಿಲುವನ್ನು ಹೊಂದಿರುವ ಹರಪನಹಳ್ಳಿಯ ತೆಗ್ಗಿನಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಷ||ಬ್ರ|| ಶ್ರೀ ವರಸದ್ಯೋಜಾತ ಶಿವಾಚಾರ್ಯರು ಧಾರ್ಮಿಕ ಕಾರ್ಯಗಳೊಂದಿಗೆ ಆರೋಗ್ಯ ಕ್ಷೇತ್ರದ ಸುಧಾರಣೆಯಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಒತ್ತು ನೀಡುತ್ತಾ ಬರುತ್ತಿದ್ದಾರೆ.
ಇವರಿಗೆ ಗೋಣಿಬೀಡು ಶ್ರೀ ಶೀಲಸಂಪಾದನಾ ಮಠ ಹಾಗೂ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗಾಶ್ರಮದ ಪೀಠಾಧ್ಯಕ್ಷರಾದ ನಿರಂಜನ ಪ್ರಣವ ಸ್ವರೂಪಿ, ಮಹಾನ್ ತಪಸ್ವಿ ಡಾ.ಸಿದ್ಧಲಿಂಗ ಸ್ವಾಮೀಜಿ ಒತ್ತಾಸೆಯಾಗಿ ನಿಂತಿದ್ದಾರೆ. ಹರಪನಹಳ್ಳಿಯಂತಹ ಬಯಲು ಸೀಮೆಯ ತೆಗ್ಗಿನಮಠ ಪೀಠವು ಧರ್ಮ, ಶಿಕ್ಷಣ, ಆಯುರ್ವೇದ, ಆರೋಗ್ಯ ಮತ್ತಿತರೆ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಮಲೆನಾಡಿನಲ್ಲೂ ವಿಸ್ತರಿಸಲು ಒತ್ತಾಸೆಯಾಗಿ ನಿಂತಿದ್ದಾರೆ. ಮಠಗಳು ಮತ್ತು ಪೀಠಾಧಿಪತಿಗಳ ನಡುವೆ ಸಮನ್ವಯತೆ ಇದ್ದರೆ ಕಾರ್ಯ ಸಾಧನೆ ಹೇಗೆ ಮಾಡಬಹುದು ಎಂಬುದಕ್ಕೆ ಶ್ರೀದ್ವಯರು ರಾಜ್ಯಕ್ಕೇ ಮಾದರಿಯಾಗಿದ್ದಾರೆ.
ಜೂನ್ ೨೬ರಂದು ನಡೆಯಲಿರುವ ರಾಜ್ಯ ಮಟ್ಟದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ ಶ್ರೀದ್ವಯರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಆಗಮಿಸಲಿದ್ದಾರೆ. ಈ ವಿಚಾರ ಸಂಕಿರಣವು ಆಯುರ್ವೇದ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಅನಾವರಣಗೊಳಿಸುವಂತಾಗಲಿ.