ತಾಯಿಮರಣ ಪ್ರಮಾಣ ಕಡಿಮೆ ಮಾಡುವಂತೆ ಡಿಸಿ ಸೂಚನೆ
ಶಿವಮೊಗ್ಗ ಜೂನ್ 24:
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಸೂತಿ ವಿಭಾಗದ ವೈದ್ಯರು ಅವರ ಕರ್ತವ್ಯಾನುಸಾರ ಲಭ್ಯವಿದ್ದು, ತಕ್ಷಣ ಗರ್ಭಿಣಿಯರನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಾಯಿಮರಣ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಎಂಎಂಆರ್(ಮ್ಯಾಟರ್ನಲ್ ಮಾರ್ಟಾಲಿಟಿ ರೇಷಿಯೋ) ಮತ್ತು ಇತರೆ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸೂತಿ ತಜ್ಞರು/ವೈದ್ಯರು ಗರ್ಭಿಣಿಯರು ಆಸ್ಪತ್ರೆಗೆ ದಾಖಲಾದ ವೇಳೆ ತಕ್ಷಣ ತಪಾಸಣೆ ನಡೆಸಿ, ಅವರ ಆರೋಗ್ಯದ ಸ್ಥಿತಿ, ಗಂಭೀರತೆ ಏನಾದರೂ ಇದ್ದರೆ ಅದರ ಕುರಿತು ಸಮರ್ಪಕವಾಗಿ ಕೇಸ್‍ಶೀಟ್‍ನಲ್ಲಿ ದಾಖಲಿಸಬೇಕು ಹಾಗೂ ತ್ವರಿತವಾಗಿ ಮುಂದಿನ ಚಿಕಿತ್ಸೆ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.
ಡೆತ್ ಆಡಿಟ್ ಸಮಿತಿಯು ತಾಯಿ ಮರಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮರಣಕ್ಕೆ ಸೂಕ್ತ ಕಾರಣ ತಿಳಿದು ಕ್ರಮ ವಹಿಸಬೇಕು. ವೈದ್ಯರ ನಿರ್ಲಕ್ಷ್ಯ ಅಥವಾ ಇನ್ನಾವುದೇ ಗಂಭೀರ ಪ್ರಕರಣಗಳು ಇದ್ದಲ್ಲಿ ವಿಚಾರಣೆ ನಡೆಸಿ ತಮಗೆ ವರದಿ ಸಲ್ಲಿಸಬೇಕೆಂದರು.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಮಗು ನೋಡಲು ಹಾಗೂ ಸಿಬ್ಬಂದಿ ತಮ್ಮ ಇತರೆ ಕರ್ತವ್ಯ ನಿರ್ವಹಿಸಿದ್ದಕ್ಕೆ ರೋಗಿಗಳ ಕಡೆಯವರಿಂದ ಹಣ ಕೇಳುತ್ತಾರೆ. ಹಾಗೂ ತಮಗೆ ಬೇಕಾದವರಿಗೆ ಮಾತ್ರ ಒಳಗೆ ಪ್ರವೇಶ ನೀಡುತ್ತಾರೆಂದು ರೋಗಿ ಕುಟುಂಬದವರು ದೂರಿದ್ದು, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಆಸ್ಪತ್ರೆಯ ಎಲ್ಲ ಮೂಲೆಗಳಲ್ಲಿ ಹಣ ಕೇಳಿದರೆ ದೂರು ನೀಡಲು ಸಂಪರ್ಕಿಸಬಹುದಾದ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಇಂತಹ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಸಿಬ್ಬಂದಿಗಳು ಈ ರೀತಿ ವರ್ತಿಸುವುದಕ್ಕೆ ಕಡಿವಾಣ ಹಾಕಿ, ಮುಂದೆ ಹೀಗೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದರು. ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಎಂದು ಕಾರಣ ನೀಡಿ ರೋಗಿಗಳನ್ನು ಅಲೆದಾಡಿಸಬಾರದು ಎಂದು ಹೇಳಿದರು.
ಇನ್ನು ಮುಂದೆ ಪ್ರತಿ ತಿಂಗಳು ಎಂಎಂಆರ್ ಪರಿಶೀಲನೆ ಸಭೆ ನಡೆಸಬೇಕು. ಎಂಎಂಆರ್‍ನ್ನು ಸಮರ್ಪಕವಾಗಿ ದಾಖಲಿಸಿ ವರದಿ ಸಲ್ಲಿಸಬೇಕೆಂದು ತಿಳಿಸಿದರು.
ಜಿಲ್ಲಾ ಏಡ್ಸ್ ತಡೆಗಟ್ಟುವ ಕಾರ್ಯಕ್ರಮದಡಿ ಬರುವ ಐದು ಎನ್‍ಜಿಓ ಗಳ ಪ್ರಗತಿ ಪರಿಶೀಲಿಸಿದ ಅವರು ಎನ್‍ಜಿಓಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಡಿಹೆಚ್‍ಓ ಎಲ್ಲರೂ ಸಮನ್ವಯ ಸಾಧಿಸಿ ಪರಿಣಾಮಕಾರಿಯಾಗಿ ಹೆಚ್‍ಐವಿ/ಏಡ್ಸ್ ನಿಯಂತ್ರಣಕ್ಕೆ ಯೋಜನೆ ರೂಪಿಸಬೇಕು. ಲೈಂಗಿಕ ಕಾರ್ಯಕರ್ತರ ಚಟುವಟಿಕೆ ತಾಣಗಳನ್ನು ಗುರುತಿಸಿ, ಮಾಹಿತಿ, ಶಿಕ್ಷಣ ಮತ್ತು ಸಂಹವನ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಎನ್‍ಜಿಓ ಗಳು ವೈದ್ಯಾಧಿಕಾರಿಗಳ ಸಹಯೋಗದೊಂದಿಗೆ ಹೆಚ್‍ಐವಿ/ಏಡ್ಸ್ ತಡೆ ಕುರಿತು ಮಾಹಿತಿ ನೀಡಿ ಅರಿವು ಮೂಡಿಸುವ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕು. ಎನ್‍ಜಿಓ ಗಳು ಹೆಚ್‍ಐವಿ ರೋಗಿಗಳಿಗೆ ನಿಯಮಿತವಾಗಿ ಎಆರ್‍ಟಿ ಚಿಕಿತ್ಸೆ, ಜಾಗೃತಿ ಕಾರ್ಯಕ್ರಮ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಬೇಕೆಂದು ತಿಳಿಸಿದ ಅವರು ಜಿಲ್ಲೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸರ್ಕಾರದಿಂದ ಗುರುತಿಸಿಕೊಂಡಿರುವ ಶಂಕರ ಕಣ್ಣಿನ ಆಸ್ಪತ್ರೆ, ಉಡುಪಿ, ಮಣಿಪಾಲ ಕೇಂದ್ರ ಸೇರಿದಂತೆ ನಾಲ್ಕು ಆಸ್ಪತ್ರೆಗಳು ಸಮುದಾಯದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ಶಿಕ್ಷಣ ನೀಡಿ, ಸೌಲಭ್ಯ ನೀಡಬೇಕೆಂದರು.
ಸಭೆಯಲ್ಲಿ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ, ಇತರೆ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.