ಶಿವಮೊಗ್ಗ, ಆ.22:
ಇತ್ತೀಚಿಗಷ್ಟೇ ಗೂಡಂಗಡಿ ತೆರವುಗೊಳಿಸಿದ್ದ ಹಿನ್ನೆಲೆಯಲ್ಲಿ ನೊಂದಿದ್ದ ಅಲ್ಲಿನ ಪೆಟ್ಟಿಗೆ ಅಂಗಡಿಯ ಚಂದ್ರಶೇಖರ್ ಎಂಬಾತ ನಿನ್ನೆ ರಾತ್ರಿ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಸಾವು ಕಂಡಿದ್ದಾರೆ.
ಶಿವಮೊಗ್ಗದ ಶುಭಮಂಗಳ ಕಲ್ಯಾಣಮಂದಿರ ಪಕ್ಕದ ಪಾಲಿಕೆಯ ಜಾಗ ಎನ್ನುವ ಹಾಗೆಯೇ ಇದು ಖಾಸಗಿ ಸ್ವತ್ತು ಎಂದೂ ಬಿಂಬಿತವಾಗುವ ನಿವೇಶನಗಳಲ್ಲಿ ಇದ್ದ ಹಲವು ಗೂಡಂಗಡಿಗಳನ್ನು ಕಳೆದ ಆಗಸ್ಟ್ 19ರಂದು ಶಿವಮೊಗ್ಗ ಮಹಾನಗರ ಪಾಲಿಕೆ, ಪೊಲೀಸರ ಸಹಾಯದಿಂದ ತೆರವುಗೊಳಿಸಿದ್ದು ಇದಕ್ಕೆ ಗೂಡಂಗಡಿ ಮಾಲೀಕರು ಹಾಗೂ ಹಲವು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಬೊಮ್ಮನಕಟ್ಟೆ ನಿವಾಸಿಯಾಗಿದ್ದ ಚಂದ್ರಶೇಖರ್ ಇಲ್ಲಿನ ಪಟ್ಟಿಗೆ ಅಂಗಡಿಯೊಂದರಲ್ಲಿ ಇಸ್ತ್ರಿ ಮಾಡುತ್ತಾ ಹೊಟ್ಟೆಹೊರೆಯುತ್ತಿದ್ದರು. ಅವರಿಗೆ ಇಬ್ಬರು ಚಿಕ್ಕ ಹೆಣ್ಣುಮಕ್ಕಳಿದ್ದಾರೆ. ಅಂಗಡಿ ತೆರವುಗೊಂಡ ತಕ್ಷಣದಿಂದ ಆತಂಕದಿಂದ ನೊಂದ ಅವರು ಮುಂದಿನ ಬದುಕ ಬಗ್ಗೆ ಚಿಂತಿಸಿ ಭಯಬೀತರಾಗಿದ್ದರೆನ್ನಲಾಗಿದೆ.
ಎರಡು ಮುಖ ತೋರಿದ ಈಶ್ವರಪ್ಪ!
ಇಲ್ಲಿನ ಮಾಜಿ ಮಹಾನಗರ ಪಾಲಿಕೆ ಸದಸ್ಯ ಹೆಚ್ ಪಾಲಾಕ್ಷಿ ಅವರ ಪ್ರಕಾರ ಈ ಜಾಗ ನಗರಪಾಲಿಕೆಯ ಸ್ವತ್ತಲ್ಲ. ಇದು ಖಾಸಗಿ ಸ್ವತ್ತು. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಇದನ್ನು ಮಹಾನಗರ ಪಾಲಿಕೆ ಪಾರ್ಕ್ ಎಂದು ನಮೂದಿಸಿತ್ತು. ಇದು ಕಾನೂನಲ್ಲಿ ಅಸಂಬದ್ಧ. ಅಲ್ಲಿನ ನಿವೇಶನಗಳ ಮಾಲೀಕರು ಈಗಲೂ ತಮ್ಮಜಾಗ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಈ ಖಾಲಿ ನಿವೇಶನಗಳಲ್ಲಿ ಗೂಡಂಗಡಿ ಕಚ್ಚಿಕೊಂಡು ಬದುಕು ಸಾಗಿಸುತ್ತಿದ್ದ ಜನರ ಮೇಲೆ ಏಕಾಏಕಿ ದಾಳಿ ನಡೆಸಿದ್ದು ಸರಿಯಲ್ಲ. ಕೆರೆಗಳನ್ನು, ದೊಡ್ಡ ದೊಡ್ಡ ನಿವೇಶನಗಳನ್ನು ಬೇಕಾಬಿಟ್ಟಿ ಬಿಕರಿಯಾಗಿ ಬಿಟ್ಟಿರುವ ಮಹಾನಗರ ಪಾಲಿಕೆ, ಅದರಲ್ಲೂ ಸಚಿವ ಈಶ್ವರಪ್ಪ ಅವರ ನೇತೃತ್ವದಲ್್ಲ್ಲ ಈ ಅಕ್ರಮದ ವಿರುದ್ದ ದಾಳಿ ನಡೆಸಿದ್ದದು ಅತ್ಯಂತ ಅಪಾಯಕಾರಿ. ಇದೇ ವಾರ್ಡ್ನಲ್ಲಿ ಆಗಬೇಕಾದ ಕಾರ್ಯಗಳನ್ನು, ಉಳಿಸಬಹುದಾದ ಜಾಗಗಳನ್ನು, ಯೋಚಿಸದ ಪಾಲಿಕೆ ಸದಸ್ಯ ರಾಹುಲ್ ಬಿದರೆ ಅವರು ಕೇವಲ ಈ ಗೂಡಂಗಡಿಗಳ ತೆರವಿಗೆ ಒತ್ತಾಯಿಸಿದ್ದು ಎಷ್ಟರ ಮಟ್ಟಿಗೆ ಸರಿ? ಬಡಪಾಯಿಯ ಜೀವ ತೆಗೆಯುವ ನಿಟ್ಟಿನಲ್ಲಿ ಇಂತಹ ಕ್ರಮ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ .
ಇದೇ ವಿನೋಬನಗರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಗೂಡಂಗಡಿ ತೆರವು ಗೊಳಿಸಲು ಅಂದಿನ ಆಯುಕ್ತೆ ತುಷಾರ ಮಣಿ ಅವರು ಮುಂದಾಗಿದ್ದಾಗ ಇದೇ ಈಶ್ವರಪ್ಪ ದಿನವಿಡೀ ಪ್ರತಿಭಟನೆಗಿಳಿದಿದ್ದು ಮರೆತು ಹೋಯಿತೇ..? ತಮ್ಮ ಚೇಲಾಗಳ ಜಾಗ ಉಳಿಸಲು ಹೋರಾಡಿದವರಿಗೆ, ಬಡಪಾಯಿಗಳ ನೋವು ಕೇಳಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಡಪಾಯಿ ಕುಟುಂಬಕ್ಕೆ ನ್ಯಾಯ ನೀಡಲು ಶ್ರೀಪಾಲ್ ಆಗ್ರಹ
ವಕೀಲ ಕೆ. ಪಿ. ಶ್ರೀಪಾಲ್ ಅವರ ಪ್ರಕಾರ ಇದು ನಗರಪಾಲಿಕೆಯ ಜಾಗವಲ್ಲ. ಗೂಡಂಗಡಿಗಳ ಮೇಲೆ ಗದಾಪ್ರಹಾರ ಮಾಡಿದ ಕ್ರಮ ಸರಿಯಲ್ಲ. ಈಗ ಜನುಮ ಕಳೆದುಕೊಂಡ ಚಂದ್ರಶೇಖರ್ ಕುಟುಂಬ ಅನಾಥವಾಗಿದೆ. ಬದುಕಿಗೆ ಬೇರೆ ಜಾಗವನ್ನಾದರೂ ನೀಡಿ ತೆರವು ಮಾಡಬಹುದಿತ್ತು. ಇದಕ್ಕೆ ಪಾಲಿಕೆ ಸದಸ್ಯ ಇಷ್ಟೊಂದು ಒತ್ತಾಯಿಸಿದ್ದ ನ್ನು ನೋಡಿದರೆ ವ್ಯಕ್ತಿಗತವಾಗಿ ಇದು ವೈಯಕ್ತಿಕ ಕಾರಣದಿಂದ ಎನಿಸುತ್ತದೆ.
ಜನರ ಒತ್ತಾಯದ ಹಿನ್ನೆಲೆ, ಗೂಡಂಗಡಿ ತೆರವು
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಲಿಕೆ ಸದಸ್ಯ ರಾಹುಲ್ ಬಿಟ್ಟರೆ ಹೇಳುವುದಿಷ್ಟು…, ಅದು ನಗರಪಾಲಿಕೆಯ ಜಾಗ. ಅದು ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಸದಾ ಕೇಳಿಬರುತ್ತಿತ್ತು. ಅಲ್ಲಿನ ಚಹಾ ಸಿಗರೇಟಿನ ಅಂಗಡಿ ಬಳಿ ಹಲವರು ಸೇರುತ್ತಿದ್ದರು. ಅವರು ಬಾಗಿಲು ಹಾಕಿಕೊಂಡು ಹೋದ ಮೇಲೆ ರಾತ್ರಿಯಿಡೀ ಕಟ್ಟೆಯ ಮೇಲೆ ಕುಳಿತು ಕೆಲವರು ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದರು. ಕೂಗಾಡುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆಗೆ ಗೂಡಂಗಡಿಗೆ ತೆರವಿಗೆ ಒತ್ತಾಯಿಸಿದ್ದೆ. ಅಂತೆಯೇ ಕೂಡ ಈ ಜಾಗ ಸ್ಮಾರ್ಟ್ ಸಿಟಿಯಲ್ಲಿ ಅಭಿವೃದ್ಧಿ ಹೊಂದುತ್ತದೆ. ಮೊದಲ ಮೂರು ನಿವೇಶನಗಳು ಪಾಲಿಕೆಯವು ಎಂದಿದ್ದಾರೆ. ಒಟ್ಟಾರೆ ಗೂಡಂಗಡಿ ತೆರವು ಓರ್ವನ ಅಂತ್ಯವನ್ನು ಕಂಡಿದೆ ಆತನ ಕುಟುಂಬದ ಮುಂದಿನ ಕಥೆಯೇನು? ಮಹಾ ನಗರಪಾಲಿಕೆ ತಾನು ನಡೆಸುವ ಕಾರ್ಯಗಳನ್ನು ಮುಂದಾಲೋಚನೆಯಿಲ್ಲದೆ ಮಾಡುವುದು ಸರಿಯಲ್ಲ. ಸಾರ್ವಜನಿಕರ ಆಕ್ರೋಶ ಒಳ್ಳೆಯದಲ್ಲ. ಅಕ್ರಮಗಳನ್ನು ನಿರ್ಬಂಧಿಸಿ, ಆದರೆ ಅದೇ ಲೆಕ್ಕ ತೋರಿಸಲು, ಪಾಲಿಕೆ ಇದೆ ಎಂದು ಹೇಳಿಕೊಳ್ಳಲು ಬಡಪಾಯಿಗಳ ಮೇಲೆ ಗದಾಪ್ರಹಾರ ಸರಿಯಲ್ಲ. ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಕರ್ತವ್ಯ ನಿರ್ವಹಿಸುತ್ತಾರಾ? ಇಲ್ಲವೇ ಇದು ಕನಸಿನ ಮಾತಾ?. ಜನರಿಗೆ ವಾಸ್ತವಾಂಶ ನೀಡುವುದಷ್ಟೆ ತುಂಗಾತರಂಗ ಕೆಲಸ.