ಶಿವಮೊಗ್ಗ,ಆ.21:
ಹಿಂದೂ ಮಹಾಸಭಾ ಗಣಪತಿ ಸೇರಿದಂತೆ ಜಿಲ್ಲೆಯ (ಎರಡು ಗಣಪ ಹೊರತುಪಡಿಸಿ) ಎಲ್ಲಾ ಗಣಪತಿಗಳನ್ನ ನಾಳೆ ಪ್ರತಿಷ್ಠಾಪಿಸಿ ನಾಳೆಯೇ ವಿಸರ್ಜಿಸುವಂತೆ ಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಕಾಂತರಾಜು ಅವರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದರಿಂದ ನಿನ್ನೆಯ ವರೆಗೆ ಇದ್ದ ಎಲ್ಲಾ ಗೊಂದಲಗಳಿಗೆ ಇಂದು ನಡೆದ ಸಭೆಯಲ್ಲಿ ಅಂತ್ಯಗೊಂಡಿದೆ. ಇಂದು ಸಭೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಸಮಿತಿಯ ಚನ್ನಬಸಪ್ಪ, ಬಸವೇಶ್ವರ ಗಣಪತಿ ಸಮಿತಿ ಸುಭಾಷ್, ರಾಮಣ್ಣ ಶ್ರೇಷ್ಠಿ ಪಾರ್ಕ್ ನ ವಿದ್ಯಾಗಣಪತಿ ಹನುಮಂತಪ್ಪ ಸೇರಿದಂತೆ ಇತರೆ ಗಣಪತಿ ಸಮಿತಿಯ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ಆರಂಭದಲ್ಲಿ ಬಸವೇಶ್ವರ ಗಣಪತಿ ಸಮಿತಿ ಸುಭಾಷ್ ಮಾತನಾಡಿ ಹಿಂದೂ ಮಹಾಸಭಾ ಗಣಪತಿ ಸಮಿತಿಯವರಯವರು 11 ದಿನ ಪ್ರತಿಷ್ಠಾಪನೆ ಮಾಡುವುದಾಗಿ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿವೆ. ಈ ಬಗ್ಗೆ ಸೂಕ್ತ ನಿರ್ಧಾರವನ್ನ ನೀವೇ ತಿಳಿಸಿ ಎಂದು ಸಚಿವರಿಗೆ ಕೇಳಿಕೊಂಡರು.
ಆಗ ಮಾತನಾಡಿದ ಜಿಲ್ಲಾಧಿಕಾರಿಗಳು ಕೊರೋನ ಹಿನ್ನಲೆಯಲ್ಲಿ ಗಣಪತಿಯನ್ನ ಬೆಳಿಗ್ಗೆ ಪ್ರತಿಷ್ಠಾಪಿಸಿ ಸಂಜೆ ವಿಸರ್ಜಿಸುವಂತೆ ಕೋರಲಾಗಿತ್ತು. ಬಹಳ ದಿನಗಳ ವರೆಗೆ ಗಣಪತಿ ಇದ್ದರೆ ನೋಡಲು ಬರುವವರ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ ಗಣಪತಿಯನ್ನ ಒಂದೇ ದಿನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಸಚಿವ ಈಶ್ವರಪ್ಪ ಮಾತನಾಡಿ ನಮ್ಮ ನಗರದಲ್ಲಿ ಹಿಂದೂ ಮಹಾಸಭಾ ಗಣಪತಿಗೆ ಅವಕಾಶ ನೀಡಿದರೆ ಉಳಿದ ಗಣಪ ಸಮಿತಿಗಳು, ಅನ್ಯ ತಾಲೂಕಿನವರೂ ಪ್ರಶ್ನಿಸುತ್ತಾರೆ. ಈ ಹಿನ್ನಲೆಯಲ್ಲಿ ಸಭೆಯೇ ತೀರ್ಮಾನಿಸಲಿ ಎಂದರು.
ರಾಮಣ್ಣ ಶ್ರೇಷ್ಠಿ ಪಾರ್ಕ್ ನ ವಿದ್ಯಾಗಣಪತಿ ಸಮಿತಿ ಹನುಮಂತಪ್ಪ ಮಾತನಾಡಿ ಚಂದ್ರ ಮುಳಗಿದ ನಂತರ ನಮ್ಮಲ್ಲಿ ಗಣಪತಿ ವಿಸರ್ಜಿಸುವುದು ನಮ್ಮ ಸಂಪ್ರದಾಯವಾಗಿದೆ. ಹಬ್ಬದ ದಿನ ಚಂದ್ರ ಮುಳುಗುವುದು ರಾತ್ರಿ 8 ಗಂಟೆ ಆಗಲಿದೆ. ರಾತ್ರಿಯ ನಂತರ ನದಿ ಕಡೆ ಹೋಗುವುದನ್ನ ನಿಷೇಧಿಸಲಾಗಿದೆ. ಆದುದರಿಂದ ಮರುದಿನ ಬೆಳಿಗ್ಗೆ ಗಣಪತಿ ವಿಸರ್ಜಿಸಲಿದ್ದೇವೆ ಎಂದರು.
ಬಸವೇಶ್ವರ ದೇವಸ್ಥಾನ ಸಮಿತಿಯ ಮುಖಂಡ ಸುಭಾಷ್ ಮಾತನಾಡಿ ಗೌರಿಯೊಂದಿಗೆ ಗಣಪತಿ ಬಿಡುವುದು ನಮ್ಮ ಪದ್ಧತಿ. ಅಲ್ಲದೆ ಹೊಸದಾಗಿ ಮದುವೆ ಆದವರು ನಮ್ಮ ದೇವಸ್ಥಾನಕ್ಕೆ ಬಂದು ಬಾಗಿನಕೊಡುವುದು ನಮ್ಮ ಸಂಪ್ರದಾಯ. ಈ ಹಿನ್ನಲೆಯಲ್ಲಿ ಮರುದಿನ (ಭಾನುವಾರ) ಸಂಜೆ ಗಣಪತಿ ಬಿಡುವುದಾಗಿ ತಿಳಿಸಿದರು.
ಹಿಂದೂ ಮಹಾಸಭಾ ಗಣಪತಿ ಸಮಿತಿಯ ಚನ್ನಬಸಪ್ಪ ಮಾತನಾಡಿ ನಾವು ಒಂದೇ ದಿನ ಗಣಪತಿ ಪ್ರತಿಷ್ಠಾಪಿಸಿ ಅಂದೇ ಬಿಡುತ್ತೇವೆ. ಈ ಹಿಂದೆ ನಡೆದ ಸಭೆಯಲ್ಲಿ ನಮ್ಮ ಅಭಿಪ್ರಾಯ ತಿಳಿಸಲಾಗಿತ್ತು ಎಂದರು.
ನಂತರ ಸಚಿವ ಈಶ್ವರಪ್ಪ ಮಾತನಾಡಿ ಈ ಎರಡೂ ಗಣಪತಿಯನ್ನ ಹೊರತು ಪಡಿಸಿ ಉಳಿದ ಎಲ್ಲಾ ಗಣಪತಿಯನ್ನ ಒಂದೇ ದಿನ ಪ್ರತಿಷ್ಠಾಪಿಸಿ ವಿಸರ್ಜಿಸುವಂತೆ ತೀರ್ಮಾನಿಸಿದರು. ಇದಕ್ಕೆ ಸಭೆ ಒಪ್ಪಿಕೊಂಡಿತು.
ಹಿಂದೂ ಮಹಾಸಭಾ ಸಮಿತಿ ಅಧ್ಯಕ್ಷ ಎಂ.ಕೆ. ಸುರೇಶ್ ಕುಮಾರ್ ಒಂದೇ ದಿನದ ಮಹೋತ್ಸವಕ್ಕೆ ಒಪ್ಪಿಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!