ಸೊರಬ,ಆ.17:
ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೋಮವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಪರಾಧ ಕೃತ್ಯ ಹಿನ್ನೆಲೆಯುಳ್ಳವರ ಪೆರೇಡ್ ನಡೆಸಲಾಯಿತು.
ಪೊಲೀಸ್ ಸಬ್ ಇನ್ಸ್‌ಫೆಕ್ಟರ್ ಟಿ.ಬಿ. ಪ್ರಶಾಂತ್ ಕುಮಾರ್ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕಳ್ಳತನ, ಸರಗಳ್ಳತನ, ಬಂಗಾರ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡವರು ಪುನಃ, ಇಂತಹ ಕೃತ್ಯದಲ್ಲಿ ಪಾಲ್ಗೊಳ್ಳದೇ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಬೇಕು. ಗಾಂಜಾ ಮಾರಾಟ, ಮನೆಗಳ್ಳತನ ಮತ್ತಿತರರ ಪ್ರಕರಣಗಳಲ್ಲಿ ಕಂಡು ಬಂದಾಗ ಕಾನೂನು ಕ್ರಮ ಕೈಗೊಳ್ಳಲಾಗುವುದು. ಉತ್ತಮ ನಡುವಳಿಕೆ ರೂಢಿಸಿಕೊಳ್ಳಬೇಕು. ಜನತೆ ನಿರ್ಭೀತಿಯಿಂದ ಬದುಕುವ ಸ್ಥಿತಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಅಪರಾಧ ಕೃತ್ಯ ಹಿನ್ನೆಲೆಯುಳ್ಳವರ ಪಿರೇಡ್ ನಡೆಸಲಾಗುತ್ತದೆ ಎಂದರು.
ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಎಎಸ್‌ಐ ಚಿನ್ನಪ್ಪ, ಕಾನ್ಸ್‌ಟೇಬಲ್ ದಿನೇಶ್, ಸಲ್ಮಾನ್ ಖಾನ್, ಸಂದೀಪ್ ಇದ್ದರು.
ಸಾರ್ವಜನಿಕರ ಸಹಕಾರ ಅಗತ್ಯ ಅತ್ಯಗತ್ಯ
ಸಾರ್ವಜನಿಕರು ತಮ್ಮ ವಾಹನಗಳನ್ನು ರಾತ್ರಿ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸದೇ ತಮ್ಮ ಮನೆಯಲ್ಲಿ ಅಥವಾ ಮನೆಯ ಆವರಣದಲ್ಲಿ ನಿಲ್ಲಿಸಬೇಕು. ಬೈಕ್‌ಗಳಿಗೆ ಹ್ಯಾಂಡಲ್ ಲಾಕ್ ಮಾಡುವುದು ಮರೆಯಬಾರದು. ಯಾರಾದರೂ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಚಿನ್ನಾ-ಬೆಳ್ಳಿ ವರ್ತಕರು ತಮ್ಮ ಮಳಿಗೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೊಳ್ಳಬೇಕು. ಮನೆಗೆ ಬೀಗ ಹಾಕಿ ಕುಟುಂಬ ಸಮೇತರಾಗಿ ಮೂರ್‍ನಾಲ್ಕು ದಿನ ಪ್ರವಾಸ ಹೋಗುವುದಾದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಜೊತೆಗೆ ಜನತೆ ಜಾಗೃತಿ ವಹಿಸಬೇಕು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಪಿಎಸ್‌ಐ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದರೆ ಕ್ರಮ
ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಉಳವಿ-ಸಾಗರ ರಸ್ತೆಯಲ್ಲಿ ವ್ಯಾಪಾರಸ್ಥರು ಅಡ್ಡಾದಿಟ್ಟಿ ವಾಹನ ನಿಲ್ಲಿಸಿದರೆ ಇನ್ನು ಮುಂದೆ ಮೋಟಾರು ವಾಹನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುವುದು. ಹಲವು ಅಪಘಾತ ಪ್ರಕರಣಗಳಲ್ಲಿ ಚಾಲನಾ ಪರವಾನಗಿ ಮತ್ತು ವಾಹನಗಳಿಗೆ ವಿಮೆ ಇಲ್ಲದಿರುವುದು ಕಂಡು ಬಂದಿದೆ. ಚಾಲನಾ ಪರವಾನಗಿ ಇಲ್ಲದವರಿಗೆ ವಾಹನಗಳನ್ನು ನೀಡಿದರೆ ವಾಹನಗಳ ಮಾಲಿಕರೇ ನೇರ ಹೊಣೆ ಹೊರಬೇಕಾಗುತ್ತದೆ. ಜೊತೆಯಲ್ಲಿ ಉಳವಿ-ಸಾಗರ ರಸ್ತೆಯಲ್ಲಿ ಗ್ಯಾರೇಜ್‌ಗಳ ಮಾಲೀಕರು ರಸ್ತೆಗಳಲ್ಲಿಯೇ ವಾಹನಗಳನ್ನು ರಿಪೇರಿ ಮಾಡುತ್ತಾ, ಸಂಚಾರಕ್ಕೆ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಗ್ಯಾರೇಜ್ ಮಾಲೀಕರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಾಗುವುದು.

ತುಂಗಾತರಂಗ ದಿನಪತ್ರಿಕೆ, ಶಿವಮೊಗ್ಗ

94482 56183

By admin

ನಿಮ್ಮದೊಂದು ಉತ್ತರ

error: Content is protected !!