ಹಿಂದೂ ಧರ್ಮವನ್ನು ಒಡೆಯಲು ಹಾಗೂ ಪಠ್ಯ ಪುಸ್ತಕ ವಿಚಾರವನ್ನು ರಾಜಕೀಯಗೊಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಪರವಾಗಿ ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಮತ ಯಾಚಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲ ಸಮಯದಲ್ಲೂ ಯಾವುದೇ ಪರಿಷ್ಕರಣೆಯಾದಾಗ ಗೊಂದಲಗಳಿರುತ್ತವೆ. ವೈಚಾರಿಕವಾಗಿ ವಸ್ತುನಿಷ್ಠವಾಗಿ ವಾದ ಮಾಡಲು ಹತಾಶರಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ನವರು ಹಿಜಾಬ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಪ್ರಯತ್ನಿಸಿ ವಿಫಲರಾದರು. ಕೋವಿಡ್ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸಿದಾಗ ಈ ರೀತಿಯ ಮಾತುಗಳನ್ನಾಡಿ ವಿಫಲರಾದರು. ಉತ್ತರ ಪ್ರದೇಶ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಎಲ್ಲೂ ಇಲ್ಲದಾಗಿಬಿಡುತ್ತದೆಯೋ ಎಂಬ ಭಯ ಶುರುವಾಗಿ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಶಿಕ್ಷಣದಲ್ಲಿ ವೈಚಾರಿಕ ಹೋರಾಟಗಳು ನಡೆಯಲಿ. ಭಿನ್ನತೆ ಯಾವತ್ತೂ ಇರುತ್ತದೆ. ತಾತ್ವಿಕ ಭಿನ್ನತೆಯ ಚರ್ಚೆಗೆ ಸಿದ್ಧರಿದ್ದೇವೆ. ಸುಳ್ಳನ್ನು ದಿನ ಪ್ರಚಾರ ಮಾಡಿ ಸುಳ್ಳನ್ನು ನಿಜ ಮಾಡುತ್ತೇವೆ ಎಂದು ಹೋದಾಗ ಜವಾಬ್ದಾರಿಯುತ ಸರ್ಕಾರವಾಗಿ ಹೇಳಲಾಗಿದೆ. ಪರಿಷ್ಕರಣಾ ಸಮಿತಿ ರಚನೆ ಮಾಡಿ 8 ತಿಂಗಳಾಗಿದ್ದು ಪಠ್ಯ ಕೈಬಿಟ್ಟಿದ್ದಾರೆ ಎಂಬ ಸುಳ್ಳು ಆರೋಪವನ್ನು ಮಾಡಿದರು. ಆದರೆ, ಪಠ್ಯ ಪುಸ್ತಕ ಆಚೆ ಬಂದು ಕಾಂಗ್ರೆಸ್ ನವರು ಹೇಳಿದ್ದೆಲ್ಲ ಸುಳ್ಳು ಎಂದು ಯಾವಾಗ ಗೊತ್ತಾಯಿತೋ ಆಗ ಟಿಪ್ಪು ಸುಲ್ತಾನ್, ಭಗತ್ ಸಿಂಗ್, ನಾರಾಯಣ ಗುರು, ಬಸವಣ್ಣ, ಕುವೆಂಪು ಅವರನ್ನು ಪಠ್ಯದಿಂದ ಕೈ ಬಿಡಲಾಗಿದೆ ಎಂದು ಆರೋಪಿಸಲಾಯಿತು. ಈ ಆರೋಪಗಳೆಲ್ಲ ಸುಳ್ಳು ಎಂದು ಗೊತ್ತಾದಾಗ ಕೊನೆಗೆ ಜಾತಿಯ ಹೋರಾಟಕ್ಕೆ ಮುಂದಾದರು ಎಂದರು.