ಶಿವಮೊಗ್ಗ, ಮೇ.22:
ಶಿವಮೊಗ್ಗದ ಶ್ರೀಗಂಧ ಸಂಸ್ಥೆಯಿಂದ ವಿಶೇಷ ಉಪನ್ಯಾಸ-ಅಭಿನಂದನಾ ಸಮಾರಂಭ-ಪುಸ್ತಕ ಬಿಡುಗಡೆ ಹಾಗೂ ಶಿವಮೊಗ್ಗ ನಗರದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ ನೂರರಷ್ಟು ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಸಂಚಾಲಕ ಬಿ ಆರ್ ಮಧುಸೂದನರವರು ತಿಳಿಸಿದ್ದಾರೆ.
ಮೇ ತಿಂಗಳ ತಾರೀಖು 27 ರ ಶುಕ್ರವಾರ ಸಂಜೆ 6-30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಂಸ್ಥೆಯು ಒಂದು ವೈಶಿಷ್ಟ್ಯ ವಿದ್ವತ್ ಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದು ಸಂಜೆ ಖ್ಯಾತ ವಾಗ್ಮಿಗಳಾದ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ಜನಾಪೇಕ್ಷೆಯ ಮೇರೆಗೆ ಶ್ರೀ ಶ್ರೀನಿವಾಸ ಕಲ್ಯಾಣ ವಿಶೇಷ ಉಪನ್ಯಾಸ ಕಾರ್ಯಕ್ರಮದ ಜೊತೆಗೆ ಧಾರ್ಮಿಕ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಮಹೋನ್ನತ ಸೇವೆಗಾಗಿ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಗರದ ಅಂಕಣಕಾರೂ ಮತ್ತು ಶ್ರೀಗಂಧ ಸಂಸ್ಥೆಯ ಪದಾಧಿಕಾರಿಗಳೂ ಅದ ಕೆ.ಜಿ.ಕೃಷ್ಣಾನಂದ ಅವರ ಸಕಾರಾತ್ಮಕ ಲೇಖನಗಳ ಸಂಗ್ರಹ ರೂಪದ ಪುಸ್ತಕ “ಒಳಸುಳಿಯೊಳಗಿಳಿದು” ಬಿಡುಗಡೆಯೂ ನಡೆಯಲಿದೆ.
ಇಪ್ಪತ್ತಾರು ವರ್ಷಗಳ ಕೆಳಗೆ ಶ್ರೀಗಂಧ ಉದಯಿಸಿದಾಗಿನಿಂದ ಗೌರವಾದ್ಯಕ್ಷರಾಗಿ ಸಂಸ್ಥೆಗೆ ಪ್ರೇರೇಪಕ ಶಕ್ತಿಯಾಗಿದ್ದವರು ಅಂದಿನ ಪೇಜಾವರ ಮಠಾಧೀಶರಾಗಿದ್ದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಾಗಿದ್ದರೆ ಈಗಲೂ ಶ್ರೀಗಂಧದ ಎಲ್ಲಾ ಸಂಸ್ಕೃತಿಕ ಧಾರ್ಮಿಕ ಸಮಾಜ ಸೇವಾ ಕಾರ್ಯಗಳಿಗೆ ಅಂತಹ ಶಕ್ತಿಯ ಭಾಗವೇ ಆಗಿರುವ ಉಡುಪಿಯ ಶ್ರೀ ಪೇಜಾವರ ಮಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು,ಶಾಸಕರು ಮತ್ತು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರೂ ಅದ ಕೆ.ಎಸ್.ಈಶ್ವರಪ್ಪನವರು ವಹಿಸಲಿದ್ದಾರೆ.
ಸಾರ್ವಜನಿಕರು ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಸಂಸ್ಥೆಯ ಸಂಚಾಲಕರಾದ ಬಿ.ಅರ್.ಮಧುಸೂದನ ಮತ್ತು ಶ್ರೀಗಂಧ ಬಳಗ ವಿನಂತಿಸುತ್ತದೆ.
*ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಪರಿಚಯ….
ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ಮಹಾನ್ ಸಂಸ್ಕೃತ ಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ. ಆಚಾರ್ಯರು ಮಧ್ವ ತತ್ವಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ತಾಳೆಗರಿಗಳಲ್ಲಿ ಅಜ್ಞಾತವಾಗಿದ್ದ ಸಾವಿರಾರು ಸ್ತೋತ್ರ ಮತ್ತು ಮಹತ್ವದ ವಿಚಾರಗಳು ಆಚಾರ್ಯರ ಮಹತ್ವದ ಸುದೀರ್ಘ ಸಂಶೋಧನೆಗಳಿಂದ ಬೆಳಕು ಕಂಡಿವೆ. ಈಗಾಗಲೇ ಸುಮಾರು 200ರಷ್ಟು ಗ್ರಂಥಗಳ ರಚನೆ ಹಾಗೂ ಭಾಷಾಂತರಗಳನ್ನು ಆಚಾರ್ಯರು ಮಾಡಿದ್ದಾರೆ.
ವ್ಯಾಕರಣ, ಮೀಮಾಂಸೆ, ತರ್ಕ, ವೇದ, ವೇದಾಂತಗಳಲ್ಲಿ ಅಪಾರ ವಿದ್ವತ್ತನ್ನು ಹೊಂದಿರುವ ಆಚಾರ್ಯರು, ಆಚಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಮಹತ್ವಪೂರ್ಣ ಸಂಪಾದನೆಗಾಗಿ ಡಿ.ಲಿಟ್ ಪದವಿ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸಹಾ ಸೇವೆ ಸಲ್ಲಿಸಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರುಮಾಡಿರುವ ಆಚಾರ್ಯರು, ತಮ್ಮ ವಿದ್ವತೂರ್ಣ ಸಂಶೋಧನಾ ಚಟುವಟಿಕೆಗಳಲ್ಲಿನ ಆಸಕ್ತಿಗಳಿಗೆ ಹೆಚ್ಚಿನ ಸಮಯ ವಿನಿಯೋಗಿಸಲಿಕ್ಕಾಗಿ ಸ್ವಯಂ ನಿವೃತ್ತಿ ಪಡೆದವರು. ಅವರ ಸಂಶೋಧನೆ ಮತ್ತು ಜ್ಞಾನ ಪ್ರಸರಣ ಕಾರ್ಯ ನಿರಂತರವಾಗಿ ಮುಂದುವರೆಯುತ್ತಿದೆ.
ಪ್ರಭಂಜನಾಚಾರ್ಯರ ಮಹತ್ವದ ಸಾಂಸ್ಥಿಕ ಕೊಡುಗೆಗಳಲ್ಲಿ ಶ್ರೀ ಜಯತೀರ್ಥ ಹಸ್ತಲಿಪಿ ಗ್ರಂಥಾಲಯವು ಮಹತ್ವಪೂರ್ಣವೆನಿಸಿದ್ದು, ಆಚಾರ್ಯರ ಮತ್ತೊಂದು ಮಹತ್ವದ ಸಾಂಸ್ಥಿಕ ಕೊಡುಗೆಯೆಂದರೆ ಶ್ರೀ ವ್ಯಾಸ ಮಧ್ವ ಸಂಶೋಧನಾ ಪ್ರತಿಷ್ಠಾನ ಟ್ರಸ್ಟ್, ಈ ಮಹಾನ್ ಸಂಸ್ಥೆಯು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳ ಕುರಿತಾದ ಮಹತ್ವದ ಚಿಂತನೆಗಳು ನಿರಂತರವಾಗಿ ಕ್ರಿಯಾಶೀಲವಾಗಿದೆ. ಈ ಸಂಸ್ಥೆ ನೂರಾರು ಮಹತ್ವದ ಕೃತಿಗಳನ್ನು ತನ್ನ ಶ್ರದ್ಧಾವಂತ ಭಾರತೀಯ ಸಮುದಾಯಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದೆ. ಇವಷ್ಟೇ ಅಲ್ಲದೆ ಆಚಾರ್ಯರು ನಿವೃತ್ತ ಪಂಡಿತರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಮಹತ್ವದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅಪಾರ ಕೊಡುಗೆಗಾಗಿ 2005ರ ವರ್ಷದಲ್ಲಿ ಅಂದಿನ ಪ್ರಸಿದ್ಧ ರಾಷ್ಟ್ರಪತಿ ಗಳಾಗಿದ್ದ ದಿವಂಗತ ಭಾರತರತ್ನ ಡಾ.ಅಬ್ದುಲ್ ಕಲಾಂ ಅವರಿಂದ ಸ್ವಾತಂತ್ರೋತ್ಸವ ಪ್ರಶಸ್ತಿ ಸ್ವೀಕರಿಸಿರುವ ಪ್ರಭಂಜನಾಚಾರ್ಯರಿಗೆ, 2002ರ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪರ್ಯಾಯ ಪ್ರಶಸ್ತಿ ಮುಂತಾದ ಮಹಾನ್ ಗೌರವಗಳಲ್ಲದೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಸಂದಿವೆ. 1994ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಮಧ್ವ ತತ್ವಶಾಸ್ತ್ರ ಸಮ್ಮೇಳನದ ಅಧ್ಯಕ್ಷ ಸ್ಥಾನ ಪ್ರಭಂಜನಾಚಾರ್ಯರನ್ನು ಅರಸಿ ಬಂದಿತ್ತು.
ಪ್ರಭಂಜನಾಚಾರ್ಯರ ಅಸಂಖ್ಯಾತ ಉಪನ್ಯಾಸ, ಸಂಶೋಧನೆ ಮತ್ತು ಕೃತಿಗಳಲ್ಲಿ ಅಪರಿಮಿತ ಮಧ್ವತತ್ವ ವಿಚಾರಗಳ ಜೊತೆಗೆ, ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ ಮತ್ತು ವೇದೋಪನಿಷತ್ತುಗಳ ಸಾಗರದ ಮಹಾಪೂರವೇ ತುಂಬಿಕೊಂಡಿವೆ. ಈ ಎಲ್ಲ ಮಹತ್ವದ ತಿರುಳನ್ನೂ ಅಂದಿನ ಯುವಜನತೆಗೆ ಆಕರ್ಷಕವಾಗಿ ಉಣಬಡಿಸುತ್ತಿರುವ ಆಚಾರ್ಯರು ಸಾಮಾನ್ಯರಿಂದ ಪಂಡಿತೋತ್ತಮರವರೆವಿಗೆ ಎಂಬಂತೆ ಎಲ್ಲೆಡೆಯಲ್ಲಿ ತಮ್ಮ ಪಾಂಡಿತ್ಯವನ್ನು ಹದವಾಗಿ ಕೊಂಡೊಯ್ದಿದ್ದಾರೆ. ವೇದ ಪುರಾಣ ಕಾಲದ ವಿಚಾರಗಳು ಇಂದಿನ ದಿನಕ್ಕೆ ಹೇಗೆ ಪ್ರಸ್ತುತ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿರುವಲ್ಲಿ ಆಚಾರ್ಯರ ಕೊಡುಗೆ ಅತ್ಯಂತ ಶ್ಲಾಘನೀಯವೆನಿಸಿದೆ.
ಶ್ರೀಯುತರ ಈ ಎಲ್ಲಾ ವಿದ್ವತ್ಪೂರ್ಣ ಕಾರ್ಯಗಳು ಇನ್ನಷ್ಟು ಸಮಾಜಮುಖಿಯಾಗಿ ನಡೆಯಲೆಂದು ಹಾರೈಸುತ್ತ ಶ್ರೀಗಂಧ ಅವರನ್ನು ಅಭಿನಂದಿಸುತ್ತದೆ ಎಂದರು.
ಪುಸ್ತಕದ ಲೇಖಕರ ಪರಿಚಯ.
ಕೆ. ಎಸ್. ಗುಂಡೂರಾವ್ ಮತ್ತು ಶ್ರೀಮತಿ ಶಾರದಮ್ಮ ಇವರ ಪುತ್ರರಾದ ಕೆ. ಜೆ. ಕೃಷ್ಣಾನಂದ ಸ್ವಚ್ಛ ಮಲೆನಾಡಿನ ತೀರ್ಥಹಳ್ಳಿ ಹೊಸನಗರ ಮಧ್ಯದ ಊರಾದ ಕೋಗಿಲೆಯಲ್ಲಿ ಜನಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿತ್ತೀಯ ಸಂಸ್ಥೆಯಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಆ ಬ್ಯಾಂಕು ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ವಿಲೀನವಾದ 2017ರ ಸಂದರ್ಭದಲ್ಲಿ ಸ್ವಯಂ ನಿವೃತ್ತಿ ಪಡೆದು ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ದಿ।। ರಂಗಸ್ವಾಮಿ ಪ್ರಕಾಶಕರಾಗಿದ್ದ ಆಗಿನ ನಗರದ ಜನಪ್ರಿಯ ‘ನಾವಿಕ’ ದಿನಪತ್ರಿಕೆಯಲ್ಲಿ ಸಂಕಲನವಾಗುವಷ್ಟು ಇವರ ಕತೆಗಳು ‘ಮಲೆನಾಡಿನ ಕತೆಗಳು’ ಶಿರೋನಾಮೆಯಲ್ಲಿ ಪ್ರಕಟವಾಗಿವೆ. ಇವುಗಳಲ್ಲೆಲ್ಲ ಮಲೆನಾಡಿನ ದಟ್ಟ ಅನುಭವಗಳ ಕಥಾನಕಗಳಿವೆ.
ಸಾಹಿತ್ಯ, ಸಂಗೀತ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದ ಮೂಲಕ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರು ಕೆ.ಎಸ್.ಈಶ್ವರಪ್ಪನವರ ಮಾರ್ಗದರ್ಶಿ ಸಂಘಟನೆಯಾದ ‘ಶ್ರೀಗಂಧ’ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರು.
ಕಲ್ಲಹಳ್ಳಿ ಕೆ.ಹೆಚ್.ಬಿ ಬಳಕೆದಾರರ ಸಂಘ’ “ಕಲ್ಲಹಳ್ಳಿ ಅಭೀಷವರದ ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ” ನಿವೃತ್ತ ಬ್ಯಾಂಕ್ ನೌಕರರ ಕ್ಷೇಮಾಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ “ಸಂಧ್ಯಾದೀಪ”ದಂತಹ ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರ ‘ಸಾಲುಮರದ ತಿಮ್ಮಕ್ಕ ಮತ್ತು ಪ್ರಶಸ್ತಿ’, ‘ಗಾಂಧಿ ಮತ್ತು ನಾನು’ ಮತ್ತು ಹಲವು ಕವನಗಳು ಹಾಗೂ ಹಲವು ಕತೆಗಳು ಬಹುಮಾನಕ್ಕೆ ಪಾತ್ರವಾಗಿವೆ.
ನಿವೃತ್ತಿ ನಂತರ ಶಿವಮೊಗ್ಗ ನಗರದ ‘ಅಜೇಯ’ ದಿನಪತ್ರಿಕೆಯಲ್ಲಿ ಇವರು ಪ್ರತಿ ಶನಿವಾರ ಬರೆಯುವ ಅಂಕಣ ”ವಾರದ ವಿದ್ಯಮಾನ” ಇವರಿಗೆ ಬಲು ಜನಪ್ರಿಯತೆ ತಂದುಕೊಟ್ಟಿದೆ. ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ಸದಾ ಕಾರ್ಯಶೀಲರಾಗಿರುವ ಇವರು ಶಿವಮೊಗ್ಗ ನಗರದ ‘ಮಲೆನಾಡು ಮಿತ್ರ’ ಪತ್ರಿಕೆಗೆ ಪ್ರತಿ ಬುಧವಾರ ಬರೆದ ಅಂಕಣಗಳ ಪ್ರಥಮ ಪ್ರಕಟಿತ ಕೃತಿ ಸಕಾರಾತ್ಮಕ ಚಿಂತನೆಗಳ ಅಂಕಣ ಬರಹದ ಗುಚ್ಚ “ಒಳಸುಳಿಯೊಳಗಿಳಿದು” ಇದೀಗ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎನ್ ಡಿ ಸತೀಶ್, ಚೇತನ್,ವಿಶ್ವಾಸ್,ಸುಧೀಂದ್ರ ಕಟ್ಟೆ,ದಿನೇಶ್ ಆಚಾರ್ಯ, ಆದರ್ಶ ಮುಂತಾದವರು ಉಪಸ್ಥಿತರಿದ್ದರು.